More

    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬೀದರ್​ ಜಿಲ್ಲೆಯಲ್ಲಿ ಸಕಲ ಸಿದ್ಧತೆ

    ಬೀದರ್: ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರ ಆರಂಭಗೊಳ್ಳಲಿದ್ದು, ಸುಸೂತ್ರ ಪರೀಕ್ಷೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿವೆ.
    ಜಿಲ್ಲೆಯ 124 ಕೇಂದ್ರಗಳಲ್ಲಿ 29,772 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಔರಾದ್ ತಾಲೂಕಿನಲ್ಲಿ 17, ಬಸವಕಲ್ಯಾಣ 25, ಭಾಲ್ಕಿ 18, ಬೀದರ್ 37 ಹಾಗೂ ಹುಮನಾಬಾದ್ ತಾಲೂಕಿನಲ್ಲಿ 27 ಕೇಂದ್ರಗಳನ್ನು ತೆರೆಯಲಾಗಿದೆ.

    ಏಪ್ರಿಲ್ 11ರವರೆಗೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆ ಜರುಗಲಿವೆ. ಸರ್ಕಾರಿ, ಅನುದಾನಿತ, ಅನುದಾನರಹಿತ ಸೇರಿ 556 ಶಾಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೇಸಿಗೆಯಿಂದಾಗಿ ಕೇಂದ್ರಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ನಕಲು, ಅಕ್ರಮ ತಡೆಗೆ ಪ್ರತಿ ತಾಲೂಕಿಗೆ ವಿಶೇಷ ಜಾಗೃತ ದಳಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ 1737 ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.

    ಜಿಲ್ಲಾಧಿಕಾರಿ ಗೋವಿಂದರಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪರೀಕ್ಷೆ ಸುಗಮ ಜತೆಗೆ ಫಲಿತಾಂಶ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ತರಗತಿಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಲು ನಿಷೇಧ ಹೇರಿದ ನ್ಯಾಯಾಲಯದ ಆದೇಶ ಪರೀಕ್ಷಾ ಕೇಂದ್ರಗಳಿಗೂ ಅನ್ವಯವಾಗಲಿದೆ. ಈ ನಿಯಮ ಕಡ್ಡಾಯ ಪಾಲಿಸಬೇಕೆಂದು ಡಿಸಿ ಸೂಚನೆ ನೀಡಿದ್ದಾರೆ.

    ಫಲಿತಾಂಶ ಹೆಚ್ಚಳಕ್ಕಾಗಿ ಶಿಕ್ಷಣ ತಜ್ಞರಿಂದ ಪರೀಕ್ಷೆ ಬಗ್ಗೆ ಸಾಕಷ್ಟು ತರಬೇತಿ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಲಾಗಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಲಾಗಿದೆ. ಗುಣಮಟ್ಟದ ಫಲಿತಾಂಶಕ್ಕಾಗಿ ವಿವಿಧ ಸಂಘ-ಸಂಸ್ಥೆಗಳು ಸಹ ಕಾರ್ಯಾಗಾರ ನಡೆಸಿ ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬಿವೆ.

    ಕಳೆದ ವರ್ಷ ಕರೊನಾ ಆತಂಕದ ನಡುವೆ ಪರೀಕ್ಷೆ ನಡೆದಿತ್ತು. ಆದರೆ ಪ್ರಸಕ್ತ ವರ್ಷ ಮಹಾಮಾರಿ ಕರಿಛಾಯೆ ಮಕ್ಕಳ ಮೇಲೆ ಅಷ್ಟೇನು ಬಿದ್ದಿಲ್ಲ. ಆದರೆ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತರಗತಿ ಕೋಣೆಗಳಿಗೆ ಬಂದಿದ್ದು ಆತಂಕ ಮೂಡಿಸಿದೆ. ನ್ಯಾಯಾಲಯ ಮಧ್ಯಪ್ರವೇಶಿಸಿ ಹಿಜಾಬ್ ಮತ್ತು ಕೇಸರು ಶಾಲು ತರಗತಿ ಒಳಗೆ ಧರಿಸುವಿಕೆಗೆ ನಿಷೇಧ ಹೇರಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳಲ್ಲೂ ಹಿಜಾಬ್, ಶಾಲು ನಿಷೇಧಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಹೀಗಾಗಿ ಪರೀಕ್ಷೆ ಸುಗಮ ನಡೆಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ವಹಿಸಿದೆ.

    ಪರೀಕ್ಷೆ ವೇಳಾಪಟ್ಟಿ
    ಮಾ.28 : ಪ್ರಥಮ ಭಾಷೆ
    ಮಾ.30 : ದ್ವಿತೀಯ ಭಾಷೆ
    ಏ. 04 : ಗಣಿತ
    ಏ. 06 : ಸಮಾಜ ವಿಜ್ಞಾನ
    ಏ. 08 : ತೃತೀಯ ಭಾಷೆ
    ಏ. 11 : ವಿಜ್ಞಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts