More

    ಎಸ್ಸಿ, ಎಸ್ಟಿ ಸಮುದಾಯ ಸಂಘಟಿತವಾಗಬೇಕು

    ಬೆಳಗಾವಿ: ಪರಿಶಿಷ್ಟ ಜಾತಿಯಲ್ಲಿನ 101 ಉಪ ಜಾತಿಗಳು ಮತ್ತು ಪರಿಶಿಷ್ಟ ಪಂಗಡದಲ್ಲಿರುವ 50 ಉಪ ಜಾತಿಯವರು ಸಂಘಟಿತರಾಗಬೇಕು ಎಂದು ನಗರದ ಖಾಸಗಿ ಹೊಟೇಲ್‌ನಲ್ಲಿ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಮುದಾಯದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜರುಗಿದ ಎಸ್ಸಿ-ಎಸ್ಟಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

    ಎಸ್‌ಸಿ, ಎಸ್‌ಟಿ ಸಮುದಾಯಗಳು ಏಕೆ ಒಂದಾಗಬೇಕಿದೆ ಎಂಬ ವಿಷಯದ ಮೇಲೆ ನಡೆದ ಸುದೀರ್ಘ ಚರ್ಚಾ ಸಭೆಯಲ್ಲಿ ವಿವಿಧ ಮಠಾಧೀಶರು ಮಾತನಾಡಿದರು. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮೀಸಲಾತಿ ಅಕ್ರಮಗಳು ನಡೆಯುತ್ತಿರುವುದು ಆಘಾತಕಾರಿ ವಿಷಯವಾಗಿದೆ. ರೋಸ್ಟರ್ ನಿಯಮದ ಪ್ರಕಾರ ಎಸ್ಸಿ, ಎಸ್ಟಿಗಳಿಗೆ ಮೀಸಲಾದ ಪ್ರೊೆಸರ್, ಅಸಿಸ್ಟೆಂಟ್ ಪ್ರೊೆಸರ್ ಹುದ್ದೆಗಳನ್ನು ಮೀಸಲಾತಿ ನಿಯಮದಿಂದ ಹೊರಗಿಟ್ಟು ಸಾಮಾನ್ಯ ವರ್ಗದವರನ್ನು ತುಂಬುವ ಅಕ್ರಮ ನಿರ್ಧಾರವನ್ನು ಶೀಘ್ರದಲ್ಲೇ ಕೈಗೊಳ್ಳುವ ಸೂಚನೆಗಳಿವೆ. 2022ರ ಡಿ. 1ರಂದು ನಡೆಯಲಿರುವ ವಿವಿ ಕಾರ್ಯಕಾರಿ ಸಮಿತಿಯಲ್ಲಿ ಈ ಅಕ್ರಮ ನಿರ್ಧಾರ ಪ್ರಕಟಿಸುವ ಅಧಿಕೃತ ಮೂಲಗಳಿಂದ ತಿಳಿದು ಬಂದಿದ್ದು, ಈ ಮೀಸಲಾತಿ ವಿರೋಧಿ ಪ್ರಕ್ರಿಯೆ ಕೂಡಲೇ ನಿಲ್ಲಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

    ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಈಗ ಎಸ್‌ಸಿ, ಎಸ್‌ಟಿಗಳ ಮೀಸಲಾತಿ ಹೆಚ್ಚಳ ಮಾಡಿದ್ದರೆ, ಅದಕ್ಕೆ ಸಮುದಾಯದವರು ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಮಾಡಿದ ಹೋರಾಟ ಕಾರಣ. ನಮ್ಮ 23 ಬೇಡಿಕೆಗಳಲ್ಲಿ ಒಂದು ಬೇಡಿಕೆ ಮಾತ್ರ ಈಡೇರಿದೆ. ಒಂದು ಹೆಜ್ಜೆ ಇಟ್ಟಿದ್ದೇವೆ. ಇನ್ನೂ 22 ಹೆಜ್ಜೆಗಳನ್ನುಇಡಬೇಕಿದೆ ಎಂದರು.

    ಮೈಸೂರಿನ ಉರಿಗಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಸಮಾಜದ ಮುಖಂಡರಿಗೆ ಎಸ್ಸಿ, ಎಸ್ಟಿ ಸಮುದಾಯದವರನ್ನು ಸಂಘಟಿಸಲು ಕರೆ ನೀಡಿದರು. ಸಭೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಪರಮಪೂಜ್ಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಒಕ್ಕೂಟದ ಸಂಚಾಲಕರಾದ ಎಂ. ಗೋಪಿನಾಥ, ಎಂ. ವೆಂಕಟಸ್ವಾಮಿ, ಮಾರಸಂದ್ರ ಮುನಿಯಪ್ಪ, ಭಾರತ ಮಗದೂರ, ಆರ್. ಮುನಿಯಪ್ಪ, ರಾಜಶೇಖರ ತಳವಾರ, ಯುವ ನಾಯಕ ರಾಹುಲ್ ಜಾರಕಿಹೊಳಿ, ವಿಜಯ ತಳವಾರ ಹಾಗೂ ಜಿಲ್ಲೆಯ ಹಲವು ದಲಿತ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts