More

    ಎಸ್ಟಿ ಮೀಸಲು ನೀಡದಿದ್ರೆ ಮತದಾನ ಬಹಿಷ್ಕಾರ-ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ಎಚ್ಚರಿಕೆ

    ದಾವಣಗೆರೆ: ಕೇಂದ್ರ ಸರ್ಕಾರ ಕಾಡುಗೊಲ್ಲ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲು ನೀಡಲೇಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ಸಮಾಜದವರು ಮತದಾನ ಬಹಿಷ್ಕರಿಸುವ ಜತೆಗೆ ಪ್ರಾಣ ತ್ಯಾಗಕ್ಕೂ ಸಿದ್ಧವಿದೆ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ಎಚ್ಚರಿಕೆ ನೀಡಿದರು.
    ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಡಿಯಲ್ಲಿ ಜಿಲ್ಲಾ ಘಟಕ ಹಾಗೂ ವಿವಿಧ ತಾಲ್ಲೂಕು ಘಟಕಗಳ ಸಹಯೋಗದಲ್ಲಿ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಹಕ್ಕೊತ್ತಾಯದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
    ಕಾಡುಹೊಲ್ಲ ಸಮಾಜ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದಿದೆ. ಆದ್ದರಿಂದ ಪರಿಶಿಷ್ಟ ಪಂಗಡದ ಮೀಸಲಿಗೆ ಒಳಪಟ್ಟಲ್ಲಿ ಸಮಾಜದ ಮಕ್ಕಳು ಎಲ್ಲಾ ರಂಗದಲ್ಲೂ ಮುಂಚೂಣಿಗೆ ಬರಲು ಸಾಧ್ಯ. ಕುರಿ-ದನ ಕಾಯುವ ಕುಲಕಸುಬನ್ನೇ ನಂಬಿದ ಶೇ.90ರಷ್ಟು ಮಂದಿ ಇನ್ನೂ ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ ಎಂದರು.
    ಕೇಂದ್ರ ಸರ್ಕಾರ ಕೂಡಲೇ ಎಸ್ಟಿ ಮೀಸಲು ಮಸೂದೆ ಕುರಿತು ಸಂಪುಟದಲ್ಲಿ ಚರ್ಚಿಸಿ ಸಂಸತ್ತಿನಲ್ಲಿ ಜಾರಿಗೊಳಿಸಬೇಕು. ಈ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸಲು ರಾಜ್ಯ ಸಂಘ ಹಾಗೂ ಸಮಾಜ ಸಜ್ಜಾಗಿವೆ. ಜುಂಜಪ್ಪನ ಗುಡ್ಡದಿಂದ ಪಾದಯಾತ್ರೆ ನಡೆಸುವ ಚಿಂತನೆ ಇದೆ. ಅಲ್ಲದೆ ಚಿತ್ರದುರ್ಗ ಅಥವಾ ತುಮಕೂರಿನಲ್ಲಿ ಜನಜಾಗೃತಿ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ. ದಿನಾಂಕ ನಿಗದಿಯಾಗಿಲ್ಲ ಎಂದರು.
    ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಗೌರವಾಧ್ಯಕ್ಷ ಮೀಸೆ ಮಹಾಲಿಂಗಪ್ಪ, ಬೆಂಗಳೂರಿನ ಸಹಾಯಕ ಪೊಲೀಸ್ ಆಯುಕ್ತ ಸಿ. ಬಸವರಾಜು, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಭುದೇವ್, ದಾವಣಗೆರೆ ಜಿಲ್ಲಾಧ್ಯಕ್ಷ ಸುಂಕಪ್ಪ, ವಿಜಯನಗರ ಜಿಲ್ಲಾಧ್ಯಕ್ಷ ಎಸ್. ಸಣ್ಣಬಾಲಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಜಕುಮಾರ, ಹೈಕೋರ್ಟ್ ನ್ಯಾಯವಾದಿ ಎಂ.ಎಸ್.ದೇವರಾಜ್, ಬೀಜ ನಿಗಮದ ನಿವೃತ್ತ ಅಧಿಕಾರಿ ಜಿ.ಆರ್.ಶಶಿಧರ್, ತೋರಣಗಟ್ಟೆ ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ. ನಾಗರಾಜ್, ಎಸ್.ಡಿ. ಬಸವರಾಜು, ಟಿ. ತಿಪ್ಪೇಸ್ವಾಮಿ ಗೌಡರು, ಜಿ.ಎಚ್.ಈರಪ್ಪ, ಬೇಕರಿ ಶ್ರೀನಿವಾಸ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts