More

    ಎಲ್ಲೆ ಮೀರಿದೆ ಅಕ್ರಮ ಮದ್ಯ ಹಾವಳಿ

    ಬ್ಯಾಡಗಿ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಶಾಲಾ ವಿದ್ಯಾರ್ಥಿಯೊಬ್ಬ ಅಬಕಾರಿ ಇಲಾಖೆಗೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಮಕ್ಕಳ ಗ್ರಾಮಸಭೆ ಹಾಗೂ ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಕಾರ್ಯಕ್ರಮಗಳು ನೆಪಮಾತ್ರಕ್ಕೆ ಎನ್ನುವಂತಾಗಿದೆ.

    ರಾಜ್ಯ ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಕಳೆದ ಡಿಸೆಂಬರ್​ನಿಂದ 10 ವಾರಗಳ ಕಾಲ ಮಕ್ಕಳ ಜನಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶಗಳ ಹತ್ತಾರು ಸಮಸ್ಯೆಗಳನ್ನು ಮಕ್ಕಳ ಮೂಲಕ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಉದ್ದೇಶದಿಂದ ನ.14 ರಿಂದ ಜ.24ರವರೆಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿ, ಒಂದು ದಿನ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಸರ್ಕಾರ ಆದೇಶಿಸಿತ್ತು.

    ವಿದ್ಯಾರ್ಥಿಯ ಅಳಲು: ತಾಲೂಕಿನ ಮಲ್ಲೂರು ಗ್ರಾಮದ ವಿದ್ಯಾರ್ಥಿಯೊಬ್ಬ ತಮ್ಮ ಮನೆಯ ಸುತ್ತ ಐದಾರು ಕಡೆ ಹಗಲು ರಾತ್ರಿಯೆನ್ನದೆ ಅಕ್ರಮವಾಗಿ ಮದ್ಯಮಾರಾಟ ಮಾಡಲಾಗುತ್ತಿದೆ. ಇದರಿಂದ ಬಹುತೇಕ ಚಿಕ್ಕಮಕ್ಕಳು ಮನೆಯಲ್ಲಿರುವುದು ಕಷ್ಟವಾಗಿದೆ. ರಸ್ತೆಯಲ್ಲಿ ಕುಡುಕರು ಚೀರಾಡುತ್ತ, ಬೈದಾಡುತ್ತಾ ಓಡಾಡುತ್ತಾರೆ. ಇದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿ ಖುದ್ದಾಗಿ ಅಧಿಕಾರಿಗಳ ಗಮನ ಸೆಳೆದಿದ್ದ. ಮನವಿ ಪತ್ರ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

    ಗ್ರಾಮಸ್ಥರ ಆಗ್ರಹ: ಮಲ್ಲೂರು ಗ್ರಾಮದ ಕೆಲ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಮಹಿಳೆಯರು, ಮಕ್ಕಳು ಓಡಾಡುವುದು ಕಷ್ಟವಾಗಿದೆ. ಯುವಕರಂತೂ ಕುಡಿತದ ದಾಸರಾಗುತ್ತಿದ್ದಾರೆ. ಎಳೆವಯಸ್ಸಿನ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದ್ದು, ಕ್ರಮ ಕೈಗೊಳ್ಳುವಂತೆ ಗ್ರಾಮಸಭೆಯಲ್ಲಿ ಆಗ್ರಹಿಸಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

    ಮಲ್ಲೂರು ಗ್ರಾಮದ ವಿದ್ಯಾರ್ಥಿಯು ಈ ಹಿಂದಿನ ಅಬಕಾರಿ ನಿರೀಕ್ಷರಿಗೆ ಪತ್ರ ಸಲ್ಲಿಸಿರುವ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದೇನೆ. ಗ್ರಾಮಕ್ಕೆ ಭೇಟಿ ನೀಡಿ ತಕ್ಷಣ ಕ್ರಮ ಕೈಗೊಳ್ಳುತ್ತೇನೆ.
    | ರಾಮು ಆರೆನ್ನವರ ಅಬಕಾರಿ ನಿರೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts