More

    ಎಲ್ಲರೂ ಯೋಗ ಮಾಡಿ

    ಧಾರವಾಡ: ನಗರದ ವಿವಿಧೆಡೆ ಭಾನುವಾರ 6ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ‘ಮನೆಗಳಲ್ಲಿ ಯೋಗ; ಕುಟುಂಬದೊಂದಿಗೆ ಯೋಗ’ ಧ್ಯೇಯವಾಕ್ಯದೊಂದಿಗೆ ಯೋಗ ದಿನ ಆಚರಿಸಲಾಯಿತು.

    ಧಾರವಾಡ ಶಾಸಕ ಅಮೃತ ದೇಸಾಯಿ, ಪತ್ನಿ ಪ್ರಿಯಾ ದೇಸಾಯಿ ಅವರು ಮನೆಯಲ್ಲಿ ಯೋಗ ಮಾಡುವ ಮೂಲಕ ಯೋಗ ದಿನ ಆಚರಿಸಿದರು. ನಂತರ ಮಾತನಾಡಿದ ಅವರು, ಯೋಗ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೋವಿಡ್ 19 ಮಹಾಮಾರಿಯ ವಿರುದ್ಧ ಹೊರಾಡಲು ಯೋಗ ದಿವ್ಯಾಸ್ತ್ರವಾಗಿದೆ. ಹಾಗಾಗಿ ಎಲ್ಲರೂ ಯೋಗ ಮಾಡಿ ಎಂದು ಕೋರಿದರು.

    ಮಹಿಷಿ ಟ್ರಸ್ಟ್: ತಾಲೂಕಿನ ದಡ್ಡಿ ಕಮಲಾಪುರದ ಮಹಿಷಿ ಟ್ರಸ್ಟ್​ನ ಯೋಗ ಮತ್ತು ನಿಸರ್ಗ ಚಿಕಿತ್ಸಾ ಆಸ್ಪತ್ರೆಯ ಸಿಬ್ಬಂದಿ ಯೋಗ ಸಾಧಕರೊಂದಿಗೆ ಯೋಗ ಮಾಡಿದರು. ಮುಖ್ಯ ವೈದ್ಯಾಧಿಕಾರಿ ಡಾ. ತಿರುಮುರುಗನ್ ಯೋಗ ಹೇಳಿಕೊಟ್ಟರು. ಮ್ಯಾನೆಜಿಂಗ್ ಟ್ರಸ್ಟಿ ಸಾವಿತ್ರಿ ಮಹಿಷಿ ಯೋಗದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಬೇಕು. ಜೂ. 21ರಂದು ಮಾತ್ರ ಯೋಗ ಮಾಡದೆ ಪ್ರತಿದಿನವೂ ಆರೋಗ್ಯಕ್ಕಾಗಿ ಯೋಗ ಮಾಡಬೇಕು ಎಂದರು.

    ಕೃಷಿ ವಿಶ್ವವಿದ್ಯಾಲಯ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಯೋಗ ದಿನ ಆಚರಿಸಲಾಯಿತು. ರಾಷ್ಟ್ರೀಯ ಉನ್ನತ ಕೃಷಿ ಶಿಕ್ಷಣ ಯೋಜನೆ-ಸಂಸ್ಥೆ ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಆನ್​ಲೈನ್ ಯೋಗಾಸನ ಪ್ರಾತ್ಯಕ್ಷಿಕೆ ನಡೆಯಿತು. ಕಲಪತಿ ಡಾ. ಎಂ.ಬಿ. ಚೆಟ್ಟಿ ಉದ್ಘಾಟಿಸಿದರು. ಡಾ. ಸಂದೇಶ ಹಿರೇಮಠ ಅವರು ಯೋಗ ಮತ್ತು ಪ್ರಾಣಾಯಾಮಗಳ ಪ್ರಾತ್ಯಕ್ಷಿಕೆ ನೀಡಿದರು. ಡಾ. ಉಮೇಶ ಮುಕ್ತಾಮಠ, ಡಾ. ಎ.ಎಸ್. ವಸ್ತ್ರದ, ಡಾ. ಪಿ.ಯು. ಕೃಷ್ಣರಾಜ ಹಾಗೂ ಡಾ. ಆಶಾಲತಾ, ಇತರರಿದ್ದರು.

    ಮಹೇಶ ಪಿಯು ಕಾಲೇಜ್: ನಗರದ ಹಳಿಯಾಳ ರಸ್ತೆಯ ಐಸಿಎಸ್ ಮಹೇಶ ಪಿಯು ಕಾಲೇಜಿನಲ್ಲಿ ಯೋಗ ದಿನ ಆಚರಿಸಲಾಯಿತು. ಖ್ಯಾತ ಯೋಗ ಶಿಕ್ಷಕ ಪ್ರಕಾಶ ಹಡಪದ ಅವರು ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕ ತರಬೇತಿ ನೀಡಿದರು. ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts