More

    ಎರಡೂ ಮನೆಯಲ್ಲಿ ಬಿಜೆಪಿ ಬಲ ಹೆಚ್ಚಳ

    ಹಾವೇರಿ: ಸದ್ಯ ಚುನಾವಣೆ ನಡೆಯುತ್ತಿರುವ 4 ವಿಧಾನ ಪರಿಷತ್ ಮತ್ತು 2 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಇದರಿಂದ ಎರಡೂ ಮನೆಯಲ್ಲಿ ಪಕ್ಷದ ಬಲ ಇನ್ನಷ್ಟು ಹೆಚ್ಚಲಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಪಕ್ಷಕ್ಕೆ ಬಹುಮತವಿದ್ದು, ಪ್ರಗತಿಪರ ಕಾಯ್ದೆ ಜಾರಿಗೆ ತರಲು ಸಮಸ್ಯೆಯಾಗುವುದಿಲ್ಲ. ಆದರೆ, ಪರಿಷತ್​ನಲ್ಲಿ ಬಿಜೆಪಿ ಬಹುಮತ ಇಲ್ಲದ್ದರಿಂದ ಅನೇಕ ಉತ್ತಮ ಬಿಲ್ ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತರಲಾಗಿದೆ. ಮೇಲ್ಮನೆಯಲ್ಲಿ ಬಹುಮತವಿಲ್ಲದಿದ್ದರೆ ಸರ್ಕಾರ ಅನೇಕ ಬಾರಿ ಮುಜುಗರ ಎದುರಿಸಬೇಕಾಗುತ್ತದೆ ಎಂದರು.

    ಹಾವೇರಿ ಜಿಲ್ಲೆಯಲ್ಲೇ 23 ಸಾವಿರ ಮತದಾರರಿದ್ದು, ಸಂಕನೂರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದರು.

    ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಕರೊನಾ ಸಂಕಷ್ಟದ ಸಂದರ್ಭದಲ್ಲೂ ಪಶ್ಚಿಮ ಪದವೀಧರ ಮತದಾರರ ಸಂಖ್ಯೆ ಹೆಚ್ಚಿದೆ. ಇದು ಮತದಾರರ ಉತ್ಸುಕತೆಯನ್ನು ತೋರಿಸುತ್ತದೆ. ಸಂಕನೂರ ಅವರು ಕಳೆದ 25 ವರ್ಷಗಳಿಂದ ಪದವೀಧರರು, ಶಿಕ್ಷಕರು, ನಿರುದ್ಯೋಗಿಗಳ ಪರವಾಗಿ ಹೋರಾಡುತ್ತ ಬಂದಿದ್ದಾರೆ. ವೈಜ್ಞಾನಿಕ ಮನೋಭಾವನೆ ಹೊಂದಿರುವ ಅವರು ಎಲ್ಲ ಕಡೆ ವಿಜ್ಞಾನ ಕ್ಲಬ್ ತೆರೆಯಲು ಶ್ರಮಿಸಿದ್ದಾರೆ. ಆದ್ದರಿಂದ ಅವರು ಕಳೆದ ಸಲಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು.

    ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಎದುರಿಸುತ್ತಿದ್ದೇವೆ. ಕರೊನಾ ಹಾಗೂ ನೈಸರ್ಗಿಕ ವಿಕೋಪದ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ಎದುರಿಸಿದೆ. ಹೀಗಾಗಿ ಪದವೀಧರರು ಬಿಜೆಪಿ ಬೆಂಬಲಿಸಲಿದ್ದಾರೆ. ಕೃಷಿ ಸಚಿವನಾದ ಮೇಲೆ ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ನೀಡುವಲ್ಲಿ ಆಗುತ್ತಿದ್ದ ವಿಳಂಬ ತಪ್ಪಿಸಲಾಗಿದೆ ಎಂದರು.

    2015ರಿಂದ 2020ರ ವರೆಗಿನ ಬಾಕಿ ಬೆಳೆವಿಮೆ ಹಣವನ್ನು ಬಿಡುಗಡೆಗೊಳಿಸಲಾಗಿದೆ. 2015-16ನೇ ಸಾಲಿನ 136 ಕೋಟಿ ರೂ., 2016-17ರ 34.29 ಲಕ್ಷ ರೂ., ಹಿಂಗಾರು ಹಂಗಾಮಿಗೆ 3.26 ಕೋಟಿ ರೂ., 2018-19ನೇ ಸಾಲಿನ 4.58ಕೋಟಿ ರೂ., 2019-20ನೇ ಸಾಲಿಗೆ 178 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ ಈಗಾಗಲೇ 48ಕೋಟಿ ರೂ.ಗಳನ್ನು ಮಧ್ಯಂತರ ಪರಿಹಾರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ. ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಹಾನಿಗೂ ಶೀಘ್ರದಲ್ಲಿ ಪರಿಹಾರ ವಿತರಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts