More

    ಎರಡು ಶಿಕ್ಷಣ ಸಂಸ್ಥೆ ಆವರಣ ಕಂಟೇನ್ಮೆಂಟ್ ಜೋನ್: ಕಾವೂರಿನ ನರ್ಸಿಂಗ್ ಕಾಲೇಜಲ್ಲಿ 9, ಕುರ್ನಾಡ್ ಶಾಲೆಯಲ್ಲಿ 16 ವಿದ್ಯಾರ್ಥಿಗಳು ಪಾಸಿಟಿವ್

    ಮಂಗಳೂರು: ಒಂದೇ ಪ್ರದೇಶದಲ್ಲಿ ಅಧಿಕ ಕರೊನಾ ಸೋಂಕಿತರು ಪತ್ತೆಯಾಗಿರುವ ನಗರದ ಕಾವೂರಿನಲ್ಲಿರುವ ಒಂದು ನರ್ಸಿಂಗ್ ಕಾಲೇಜು ಮತ್ತು ಕುರ್ನಾಡ್‌ನಲ್ಲಿರುವ ಶಾಲೆಯನ್ನು ಕಂಟೇನ್ಮೆಂಟ್ ಜೋನ್ ಎಂದು ಜಿಲ್ಲಾ ಆರೋಗ್ಯ ಇಲಾಖೆ ಘೋಷಿಸಿದೆ.

    ನರ್ಸಿಂಗ್ ಕಾಲೇಜಿನಲ್ಲಿ 173 ವಿದ್ಯಾರ್ಥಿಗಳ ಸ್ಯಾಂಪಲ್ ತಪಾಸಣೆ ನಡೆಸಲಾಗಿದ್ದು, 9 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವ್ ಆಗಿರುವ ವಿದ್ಯಾರ್ಥಿಗಳು ಕೇರಳೀಯರಾಗಿದ್ದಾರೆ.

    3 ಪಾಸಿಟಿವ್ ಪ್ರಕರಣಗಳು ಶನಿವಾರ ಪತ್ತೆಯಾಗಿದ್ದು, ಭಾನುವಾರ 4 ಮತ್ತು ಸೋಮವಾರ 2 ಪ್ರಕರಣಗಳು ದೃಢಪಟ್ಟಿದೆ. ಸೋಂಕಿತ ವಿದ್ಯಾರ್ಥಿಗಳ ಜತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಆಹಾರ ಮತ್ತು ಇತರ ಅಗತ್ಯ ಸೇವೆಗಳು ಅವರು ಇರುವ ಸ್ಥಳಕ್ಕೆ ಒದಗಿಸಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದು, ಒಮ್ಮೆ ಪರೀಕ್ಷೆಗೆ ಒಳಗಾದ ವಿದ್ಯಾರ್ಥಿಗಳನ್ನು 7 ದಿನಗಳ ಬಳಿಕ ಇನ್ನೊಮ್ಮೆ ಪರೀಕ್ಷೆಗೆ ಒಳಪಡಿಸಿ ಅವರು ಸುರಕ್ಷಿತವಾಗಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ.

    ಕುರ್ನಾಡು ಶಾಲೆಯಲ್ಲಿ ಒಟ್ಟು 16 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ 231 ಮಂದಿಯನ್ನು ಗುರುತಿಸಲಾಗಿದೆ. ನ.15ರಂದು ಇಲ್ಲಿ ಪ್ರಥಮ ಪಾಸಿಟಿವ್ ಪ್ರಕರಣ ಗುರುತಿಸಲಾಗಿದ್ದು, ಕಂಟೇನ್ಮೆಂಟ್ ಜೋನ್ ಆಗಿ ಆರೋಗ್ಯ ಇಲಾಖೆ ಘೋಷಿಸಿತ್ತು. ನ.28ರಂದು ಈ ಶಾಲೆಯಲ್ಲಿ ಕೊನೆಯ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದಿದ್ದರೆ ಡಿ.11ರಂದು ಈ ಶಾಲೆಯು ಕಂಟೇನ್ಮೆಂಟ್ ಜೋನ್ ವ್ಯಾಪ್ತಿಯಿಂದ ಹೊರ ಬರಲಿದೆ.

    ನಾಲ್ವರಿಗೆ ಕೋವಿಡ್ ದೃಢ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಇಬ್ಬರಲ್ಲಿ(ಶೇ.0.03) ಕರೊನಾ ಸೋಂಕು ದೃಢಪಟ್ಟಿದ್ದು, 9 ಮಂದಿ ಸೋಂಕು ಮುಕ್ತರಾಗಿದ್ದಾರೆ. 138 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 1,15,961 ಮಂದಿ ಸೋಂಕಿಗೊಳಗಾಗಿದ್ದು, 1,14,126ಮಂದಿ ಗುಣವಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ. 2,968 ಮಂದಿಯನ್ನು ಪರೀಕ್ಷಿಸಲಾಗಿದ್ದು, ಪಾಸಿಟಿವಿಟಿ ದರ ಶೇ. 0.06ರಷ್ಟಿದೆ. ಸೋಂಕಿತರಲ್ಲಿ ಓರ್ವ ಉಡುಪಿ, ಓರ್ವ ಕಾರ್ಕಳ ತಾಲೂಕಿನವರು. ಒಬ್ಬರು ಆಸ್ಪತ್ರೆಯಲ್ಲಿ ಹಾಗೂ ಮತ್ತೊಬ್ಬ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 75 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts