More

    ಎರಡು ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿ: ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗದ ಅಧ್ಯಕ್ಷ ಎಸ್.ಕೆ.ಅಗರ್‌ವಾಲ್

    ಸಾಗರ: ಮಲೆನಾಡಿನ ಪ್ರಕೃತಿ ರಮಣೀಯತೆ ಎಲ್ಲರನ್ನು ಸೆಳೆಯುತ್ತದೆ. ನಮ್ಮ ಪ್ರಾಚೀನರು ದೇವಾಲಯಗಳನ್ನು ಇಂತಹ ಪ್ರಾಕೃತಿಕ ಪ್ರದೇಶದಲ್ಲಿ ಕಟ್ಟಿ ಅದರ ವೈಭವವನ್ನು ಇನ್ನಷ್ಟು ಹೆಚ್ಚಿಸಿದರು ಎಂದು ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗದ ಅಧ್ಯಕ್ಷ ಎಸ್.ಕೆ.ಅಗರ್‌ವಾಲ್ ಹೇಳಿದರು.
    ತಾಲೂಕಿನ ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯ ಮತ್ತು ಇಲ್ಲಿಯ ಕಂಚಿಕಾಳಮ್ಮ, ಲಕ್ಷ್ಮೀ ಗಣಪತಿ ಮೊದಲಾದ ದೇವಾಲಯಗಳಿಗೆ ಗುರುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಇರುವ ಅಪರೂಪದ ಪುಷ್ಕರಣಿ, ದೇವಾಲಯಗಳು ಪ್ರವಾಸಿಗರ ಗಮನ ಸೆಳೆಯುತ್ತದೆ. ಪರಿಸರ ಮಾತೆಯೇ ಇಲ್ಲಿ ದೇವರಾಗಿ ನೆಲೆ ನಿಂತಿದ್ದಾಳೆ. ಇಂತಹ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಿಕೊಂಡು ಹೋಗಬೇಕು ಎಂದರು.
    ಗ್ರಾಹಕರ ವಿವಾದಗಳ ಪರಿಹಾರ ಆಯೋಗದ ಕಾರ್ಯವೈಖರಿಯ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಷ್ಟ್ರಮಟ್ಟದಲ್ಲಿ ಎರಡು ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. ಅವುಗಳನ್ನು ಕಾಲಮಿತಿಯೊಳಗೆ ಪರಿಹರಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಇಲ್ಲಿ ಸಾಕಷ್ಟು ವ್ಯಾಜ್ಯಗಳನ್ನು ಲೋಕ ಅದಾಲತ್‌ಗಳ ಮೂಲಕ ಪರಿಹರಿಸುವ ಪ್ರಯತ್ನಗಳು ನಡೆಯುತ್ತಿವೆ. ಎಲ್ಲ ಬಗೆಯ ಗ್ರಾಹಕರು ತಾವು ಖರೀದಿಸಿದ ವಸ್ತುವಿನ ಗುಣಮಟ್ಟದ ಅಸಮಾಧಾನದ ಬಗ್ಗೆ ಪರಿಹಾರ ಕಂಡುಕೊಳ್ಳಲು ಇಲ್ಲಿ ಅವಕಾಶವಿದೆ. ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿಸಿದಾಗ ಗ್ರಾಹಕನಿಗೆ ಎದುರಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಮ್ಮಲ್ಲಿ ಸಾಧ್ಯತೆಗಳಿವೆ, ಅಲ್ಲದೆ 10 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಪರಿಹಾರದ ವ್ಯಾಜ್ಯಗಳು ರಾಷ್ಟ್ರೀಯ ಆಯೋಗದ ವ್ಯಾಪ್ತಿಗೆ ಬರುತ್ತವೆ, ಉಳಿದ ಕಡಿಮೆ ಮೊತ್ತದ ಪ್ರಕರಣಗಳು ಜಿಲ್ಲೆ ಮತ್ತು ರಾಜ್ಯದ ಕೇಂದ್ರಗಳಲ್ಲೇ ಇತ್ಯರ್ಥವಾಗುತ್ತವೆ ಎಂದು ಹೇಳಿದರು.
    ಗ್ರಾಹಕರ ಕಾಯ್ದೆ 1996 ಇದು ಈಗ ಮಾರ್ಪಾಡಾಗಿ 2019ರ ಕಾಯ್ದೆ ಜಾರಿಯಲ್ಲಿದ್ದು ಜನರಿಗೆ ಗ್ರಾಹಕರ ಕಾಯ್ದೆ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಿರಂತರವಾಗಿ ನಡೆಸಲಾಗುತ್ತಿದೆ. ಯಾವುದೇ ಒಂದು ವಸ್ತುವಿನ ಉತ್ಪಾದನೆ ಗುಣಮಟ್ಟದಾಗದೆ ಇದ್ದು ಕೇಸು ದಾಖಲಾಗಿ ಸಾಬೀತಾದರೆ ಅಂತಹ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಗ್ರಾಹಕರ ಹಿತದೃಷ್ಟಿಯಿಂದ ಕಾನೂನಿನ ಚೌಕಟ್ಟಿನಡಿ ಸಾಕಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಹೇಳಿದರು.
    ಸಾಗರದ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಸಾಗರ ತಾಲೂಕಿನ ಹೊಸಗುಂದ, ಕೆಳದಿ, ಇಕ್ಕೇರಿ, ಒಳಗೊಂಡಂತೆೆ ಇಲ್ಲಿಯ ಐತಿಹಾಸಿಕ ದೇವಾಲಯಗಳ ಬಗ್ಗೆ ಅತಿಥಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts