More

    ಎಫ್ಐಡಿ ನೋಂದಣಿಗೆ ರೈತರ ಗಮನ – 3.56 ಲಕ್ಷ ಪ್ಲಾಟ್‌ಗಳಿಗೆ ತಂತ್ರಾಂಶ ಸ್ಪರ್ಶ – ಬೆಳೆಹಾನಿ ಪರಿಹಾರಕ್ಕಾಗಿ ಚಾಚಿದ ಕೈಗಳು

    ಡಿ.ಎಂ.ಮಹೇಶ್, ದಾವಣಗೆರೆ: ಮಳೆ ಸದ್ದಿಲ್ಲದೆ ತಿಂಗಳುಗಳೇ ಕಳೆದಿವೆ. ರೈತರು ಆಸೆಗಣ್ಣಿನಿಂದ ನೋಡುತ್ತಿರುವ ಬೆಳೆನಷ್ಟ ಪರಿಹಾರ ಕೂಡ ಕೈ ಸೇರಿಲ್ಲ. ಬರ ಪರಿಹಾರಕ್ಕಾಗಿ ಫ್ರೂಟ್ಸ್ ಐಡಿ ಪಡೆಯುವುದನ್ನು ಕಡ್ಡಾಯಗೊಳಿಸಿದ್ದರಿಂದ ತಿದ್ದುಪಡಿ, ಸೇರ್ಪಡೆ ಸಂಬಂಧ ಅನ್ನದಾತರು ರೈತ ಸಂಪರ್ಕ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ.
    ಫ್ರೂಟ್ಸ್ ತಂತ್ರಾಂಶದಡಿ ಕೃಷಿ ಜಮೀನುಗಳನ್ನು ಸಂಯೋಜಿಸಲು ಮತ್ತು ಹೆಚ್ಚುವರಿ ಫ್ಲಾಟ್ ಸೇರ್ಪಡೆಗಾಗಿ ಗ್ರಾಮ ಲೆಕ್ಕಿಗರಲ್ಲದೆ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿಯತ್ತ ರೈತರು ಎಡತಾಕುತ್ತಿದ್ದಾರೆ. ಆಧಾರ್‌ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕ, ಎಸ್ಸಿ-ಎಸ್ಟಿ ಜನರಿದ್ದಲ್ಲಿ ಜಾತಿ ಪ್ರಮಾಣಪತ್ರ ಹಾಗೂ ಇತ್ತೀಚಿನ ಪಹಣಿ ಪ್ರತಿಗಳನ್ನು ತಂದು ತಿದ್ದುಪಡಿ, ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.
    ಕೃಷಿ ಇಲಾಖೆ ಮೂಲಗಳ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ 4.86 ಲಕ್ಷ ಪ್ಲಾಟ್ (ಸರ್ವೇ ನಂಬರ್)ಗಳಿವೆ. ಇದರಲ್ಲಿ ಇದುವರೆಗೆ 3.56 ಲಕ್ಷ ಮಾತ್ರವೇ ಫ್ರೂಟ್ಸ್ ತಂತ್ರಾಂಶದೊಂದಿಗೆ ಸಂಯೋಜನೆಯಾಗಿವೆ. ಶೇ.73ರಷ್ಟು ಸಾಧನೆಯೊಂದಿಗೆ ಸರ್ವೇ ನಂಬರ್‌ಗಳನ್ನು ತಂತ್ರಾಂಶ ವ್ಯಾಪ್ತಿಗೆ ತರುವಲ್ಲಿ ರಾಜ್ಯದಲ್ಲೇ ಮೂರನೇ ಸ್ಥಾನದಲ್ಲಿದೆ. ಇನ್ನೂ 1,30,948 ಪ್ಲಾಟ್‌ಗಳನ್ನು ಜೋಡಣೆ ಮಾಡುವುದು ಬಾಕಿ ಇದೆ.
    ಪ್ರತಿ ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಸದಸ್ಯರಿದ್ದು ಏಕ ಮಾಲೀಕತ್ವದ ಪಹಣಿ ಇಲ್ಲದಿದ್ದಲ್ಲಿ ಜಮೀನಿನ ಜಂಟಿ ಮಾಲೀಕರು ಕೂಡ ಕಡ್ಡಾಯವಾಗಿ ನೋಂದಣಿಯಾಗಬೇಕಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಕೃಷಿ ಭೂಮಿಯ ವಿವರ ನಮೂದಿಸಿ ನಂಬರ್ ಪಡೆಯಬೇಕಿದೆ. ಇದರಿಂದ ಡಿಬಿಟಿ ಮೂಲಕ ನೇರವಾಗಿ ಪರಿಹಾರದ ಹಣ ರೈತರ ಖಾತೆಗೆ ಜಮೆ ಆಗಲಿದೆ.
    ಬಹುತೇಕ ರೈತರು ಸಾಲ ಸೌಲಭ್ಯ ಹಾಗೂ ಪರಿಹಾರಧನಕ್ಕೆ ಸೀಮಿತವಾಗಿ ಫ್ರೂಟ್ಸ್ ಗುರುತಿನ ಚೀಟಿ ಪಡೆಯುತ್ತಿದ್ದಾರೆ. ಆದರೆ ತುಂಡು ಭೂಮಿಗಳನ್ನೂ ಈ ವ್ಯಾಪ್ತಿಯಡಿ ಗುರುತಿಸಿಕೊಳ್ಳುವ ರೈತರಿಗೆ ಕೃಷಿಯಲ್ಲದೆ ತೋಟಗಾರಿಕೆ, ಮೀನುಗಾರಿಕೆ, ಕಂದಾಯ, ಪಶುಸಂಗೋಪನೆ, ರೇಷ್ಮೆ ಇತರೆ ಇಲಾಖೆಗಳ ಸೌಕರ್ಯಗಳೂ ಸಿಗಲಿವೆ.
    ವರ್ಷಾಂತ್ಯದವರೆಗೂ ಎಫ್‌ಐಡಿ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಗುರುತಿಸಲಾದ ಪ್ಲಾಟ್‌ಗಳಲ್ಲಿ ಕೃಷಿಯೇತರ ಜಮೀನುಗಳಿದ್ದಲ್ಲಿಯೂ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

    ಫ್ರೂಟ್ಸ್ ಗುರುತಿನ ಸಂಖ್ಯೆಯಡಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಪರಿಹಾರವಲ್ಲದೆ ವಿವಿಧ ಇಲಾಖೆಗಳಡಿ ಸಿಗುವ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಹಾಗಾಗಿ ರೈತರು ಫ್ರೂಟ್ಸ್ ತಂತ್ರಾಂಶದೊಂದಿಗೆ ನೋಂದಣಿ ಮಾಡಿಕೊಳ್ಳಬೇಕಿದೆ.
    ಶ್ರೀನಿವಾಸ ಚಿಂತಾಲ್
    ಜಂಟಿ ಕೃಷಿ ನಿರ್ದೇಶಕ.


    ನೋಂದಣಿ ಬಾಕಿ ಪ್ಲಾಟ್‌ಗಳು
    ಹರಿಹರ – 18990
    ಜಗಳೂರು – 21674
    ದಾವಣಗೆರೆ- 30538
    ಹೊನ್ನಾಳಿ – 13791
    ಚನ್ನಗಿರಿ- 35758
    ನ್ಯಾಮತಿ- 10197
    ———–————–
    ಒಟ್ಟು 1,30,948
    ————-————
    ಸಿಗುವುದೆಂದು ನೆರವು?
    ಕೃಷಿ-ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆಯಂತೆ, ಮುಂಗಾರಿನಲ್ಲಿ ಜಿಲ್ಲೆಯಲ್ಲಿ 945.13 ಕೋಟಿ ರೂ. ಮೊತ್ತದ ಅಂದಾಜು ಬೆಳೆಹಾನಿ ವರದಿಯನ್ನು ಜಿಲ್ಲಾಡಳಿತ ಸಲ್ಲಿಸಿದ್ದರೂ ಸರ್ಕಾರಗಳಿಂದ ಇದುವರೆಗೆ ಸ್ಪಂದನೆ ದೊರೆತಿಲ್ಲ.
    ಮೆಕ್ಕೆಜೋಳ- 752 ಕೋಟಿ ರೂ, ರಾಗಿ- 55 ಕೋಟಿ ರೂ., ಬಟಾಣಿ- 25 ಕೋಟಿ ರೂ, ಸೊಯಾಬೀನ್- 1.09 ಕೋಟಿ ರೂ, ಜೋಳ- 1.66 ಕೋಟಿ ರೂ, ಅಲಸಂದೆ- 2.32 ಕೋಟಿ ರೂ, ಶೇಂಗಾ- 65.70 ಕೋ. ರೂ., ಸೂರ್ಯಕಾಂತಿ- 4.45 ಕೋಟಿ ರೂ., ಹತ್ತಿ- 11.46 ಕೋಟಿ ರೂ., ಈರುಳ್ಳಿ- 24.29 ಕೋಟಿ ರೂ.ಗಳ ಹಾನಿ ವರದಿ ಸಲ್ಲಿಸಲಾಗಿತ್ತು. ಪರಿಹಾರ ಯಾವಾಗ ಎಂಬುದು ರೈತರ ಪ್ರಶ್ನೆಯಾಗಿದೆ.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts