More

    ಎನ್‌ಟಿಎಂ ಶಾಲೆ ಮರು ನಿರ್ಮಾಣಕ್ಕಾಗಿ ಪ್ರತಿಭಟನೆ

    ಮೈಸೂರು: ಎನ್‌ಟಿಎಂ ಶಾಲೆ ಮರು ನಿರ್ಮಾಣಕ್ಕೆ ಆಗ್ರಹಿಸಿ ಮಹಾರಾಣಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

    ಗನ್‌ಹೌಸ್ ಬಳಿಯ ಉದ್ಯಾನದಲ್ಲಿರುವ ಕುವೆಂಪು ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ವಿವೇಕ ಸ್ಮಾರಕದ ಜತೆಗೆ ಎನ್‌ಟಿಎಂ ಶಾಲೆ ನಿರ್ಮಿಸಬೇಕೆಂದು ಘೋಷಣೆಗಳನ್ನು ಕೂಗಿದರು. ರಾಮಕೃಷ್ಣ ಆಶ್ರಮ ನಿರ್ಮಾಣ ಮಾಡುತ್ತಿರುವುದು ವಿವೇಕ ಸ್ಮಾರಕವಲ್ಲ, ಬದಲಾಗಿ ಕನ್ನಡ ಶಾಲೆಯ ಸಮಾಧಿ. ಬೇಡಿಕೆ ಈಡೇರುವ ವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.

    ಸುಮಾರು 9 ವರ್ಷಗಳಿಂದ ಶಾಲೆ ಉಳಿಸಲು ಹೋರಾಟ ನಡೆಯುತ್ತಿದ್ದು, ನ್ಯಾಯಾಲಯದಲ್ಲಿ ತೀರ್ಪು ಬಂದ ಮೇಲೂ ಶಾಲೆಯಿದ್ದ ಜಾಗದ ಅರ್ಧ ಭಾಗದಲ್ಲಿ ಎನ್‌ಟಿಎಂ ಶಾಲೆಗಾಗಿ ಕಟ್ಟಡ ನಿರ್ಮಿಸಿಕೊಡುವುದಾಗಿ ರಾಮಕೃಷ್ಣ ಆಶ್ರಮದವರು ಸುತ್ತೂರು ಶ್ರೀಗಳ ಒತ್ತಾಸೆಯ ಮೇರೆಗೆ ಸಂಸದ ವಿ.ಶ್ರೀನಿವಾಸ್‌ಪ್ರಸಾದ್ ಅವರ ಮನೆಯಲ್ಲಿ ನಡೆದ ರಾಜಿ ಸಭೆಯಲ್ಲಿ ಒಪ್ಪಿಕೊಂಡಿದ್ದರು. ಅಂದಿನ ಸಭೆಯಲ್ಲಿ ಆದ ಒಪ್ಪಂದವನ್ನು ಮುಖ್ಯಮಂತ್ರಿಗೆ ಸಲ್ಲಿಸಿ ಸಂಧಾನ ಪೂರ್ಣಗೊಳಿಸುವ ಭರವಸೆಯನ್ನು ಸಂಸದ ಶ್ರೀನಿವಾಸ್‌ಪ್ರಸಾದ್ ನೀಡಿದ್ದರು. ಅವರು ಬೆಂಗಳೂರಿಗೆ ಹೋಗಿ ಅನಿವಾರ್ಯ ಕಾರಣಗಳಿಂದ ಒಂದು ತಿಂಗಳು ಉಳಿಯಬೇಕಾಯಿತು. ಅಷ್ಟರಲ್ಲಿ ಸರ್ಕಾರದಿಂದ ಶತಮಾನದಷ್ಟು ಹಳೆಯದಾದ ಶಾಲೆಯನ್ನು ಎದುರುಗಡೆಯ ಆವರಣಕ್ಕೆ ಸ್ಥಳಾಂತರಿಸಲು ಆದೇಶ ಮಾಡಿಸಿಕೊಂಡು ಬಂದ ಆಶ್ರಮದವರು, ಭರವಸೆ ಕೊಟ್ಟಂತೆ ಶಾಲೆಯನ್ನು ನಿರ್ಮಿಸುವ ಪ್ರಸ್ತಾಪದಿಂದ ಹಿಂದೆ ಸರಿದಿದ್ದಾರೆ ಎಂದು ದೂರಿದರು.

    ರಾಮಕೃಷ್ಣ ಆಶ್ರಮದವರ ಮಾತನ್ನು ನಂಬಿ ಶಾಲೆ ಉಳಿಸಿ ಹೋರಾಟ ಒಕ್ಕೂಟವು ಸುಪ್ರೀಂಕೋರ್ಟ್‌ಗೆ ಪ್ರಕರಣವನ್ನು ಒಯ್ಯಲಿಲ್ಲ. ಈ ನಡುವೆ, ಶಾಲಾ ಕಟ್ಟಡವನ್ನೂ ರಾತ್ರೋರಾತ್ರಿ ನೆಲಸಮಗೊಳಿಸಿದರು. ರಾಮಕೃಷ್ಣ ಆಶ್ರಮದವರು ಕೊಟ್ಟ ಮಾತಿಗೆ ಬದ್ಧವಾಗಿ ಶಾಲೆಯಿದ್ದ ಅರ್ಧ ಜಾಗದಲ್ಲಿ ಹೊಸ ಶಾಲೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

    ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಎಂ.ಮೋಹನಕುಮಾರ್‌ಗೌಡ, ಮಾಜಿ ಮೇಯರ್ ಪುರುಷೋತ್ತಮ, ಕರ್ನಾಟಕ ಜನಪರ ಶಕ್ತಿ ವೇದಿಕೆಯ ಅಧ್ಯಕ್ಷೆ ಆ.ಮಧುಮತಿ, ಮುಖಂಡರಾದ ಎಚ್.ಎನ್.ಪಾರ್ಥಸಾರಥಿ, ಬಿ.ಮಹದೇವ, ಎಸ್.ಬಾಲಕೃಷ್ಣ, ಕೆ.ಪರಶಿವಮೂರ್ತಿ, ಆರ್.ಗೋವಿಂದರಾಜ್, ಅಮೀರ್, ಸುನಿಲ್‌ಕುಮಾರ್, ಅಬ್ದುಲ್ ಮಾಲೀಕ್, ಎ.ಮಹದೇವಗೌಡ, ಸಿದ್ದಲಿಂಗಪ್ಪ, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ಎಲ್‌ಐಸಿ ಸಿದ್ದಪ್ಪ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts