More

    ಎನ್​ಡಿಆರ್​ಎಫ್​ನಿಂದ ಪ್ರಾತ್ಯಕ್ಷಿಕೆ

    ಧಾರವಾಡ : ಮುಂಬರುವ ಮಳೆಗಾಲದಲ್ಲಿ ಆಗಬಹುದಾದ ತೊಂದರೆಗಳನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಜಿಲ್ಲೆಗೆ ವಿಜಯವಾಡದಿಂದ 21 ಯೋಧರನ್ನೊಳಗೊಂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ಜಿಲ್ಲೆಗೆ ಆಗಮಿಸಿದೆ. ಶುಕ್ರವಾರ ಸಂಜೆ ಎನ್​ಡಿಆರ್​ಎಫ್ ತಂಡದ ಸದಸ್ಯರು ನಗರದ ಕೆಲಗೇರಿ ಕೆರೆಯಲ್ಲಿ ಜೀವರಕ್ಷಣಾ ಕಾರ್ಯದ ಪ್ರಾತ್ಯಕ್ಷಿಕೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.

    ಕೆರೆಯಲ್ಲಿ ವಿಹಾರಕ್ಕೆ ಆಗಮಿಸಿದ ಪ್ರವಾಸಿಗರು ಆಕಸ್ಮಿಕವಾಗಿ ಬೋಟ್​ನಿಂದ ಕೆರೆಯಲ್ಲಿ ಬಿದ್ದು, ಮುಳುಗಲು ಆರಂಭಿಸಿದಾಗ ಕೆರೆಯ ಮತ್ತೊಂದು ಮೂಲೆಯಲ್ಲಿದ್ದ ಎನ್​ಡಿಆರ್​ಎಫ್ ಪಡೆಯ ಯೋಧರು ತಕ್ಷಣ ತೆರಳಿ ಮುಳುಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸುವ ಪ್ರಾತ್ಯಕ್ಷಿಕೆ ನೀಡಿದರು.

    ಪ್ರಾತ್ಯಕ್ಷಿಕೆ ವೀಕ್ಷಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷವೂ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ನೀಡಿದ್ದಾರೆ. ಹೀಗಾಗಿ, ಜನ, ಜಾನುವಾರು, ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಗೆ ವಿಜಯವಾಡದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಯೋಧರು ಆಗಮಿಸಿದ್ದಾರೆ. ಪಾಲಿಕೆ, ತಾಲೂಕು ಆಡಳಿತಗಳು ತುರ್ತು ಕಾರ್ಯಗಳನ್ನು ಕೈಗೊಂಡು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಸೂಚಿಸಲಾಗಿದೆ ಎಂದರು.

    ಎನ್​ಡಿಆರ್​ಎಫ್ ಪಡೆಯ ಇನ್ಸ್​ಪೆಕ್ಟರ್ ಸಾಗರ ಕುಲಹರಿ, ಎಎಸ್​ಐ ರಾಜಾರಾಮ ಮೀನಾ, ದತ್ತು ರೆಡ್ಡಿ ಪ್ರಾತ್ಯಕ್ಷಿಕೆ ನೇತೃತ್ವ ವಹಿಸಿದ್ದರು.

    ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ, ತಹಸೀಲ್ದಾರ್ ಡಾ. ಸಂತೋಷ ಬಿರಾದಾರ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ವಿಜಯಲಕ್ಷ್ಮೀ ಲೂತಿಮಠ, ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ರುದ್ರಗೌಡ ಪಾಟೀಲ, ಸ್ಥಳೀಯ ಮುಖಂಡರಾದ ಶಾಂತಯ್ಯ ಹಿರೇಮಠ, ಚನ್ನಬಸಯ್ಯ ಹೊಂಗಲಮಠ, ಶಿವನಪ್ಪ ಸಾದರ, ಕಲ್ಲಪ್ಪ ದಾಳಿ ಹಾಗೂ ಸಾರ್ವಜನಿಕರು ಪ್ರಾತ್ಯಕ್ಷಿಕೆ ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts