More

    ಎನ್​ಡಿಆರ್​ಎಫ್​ನಿಂದ ಜಿಲ್ಲೆಗೆ ರೂ. 10 ಕೋಟಿ

    ಚಿಕ್ಕಮಗಳೂರು: ಮಳೆಯಿಂದಾದ ಹಾನಿ ಬಗ್ಗೆ ಸಮಗ್ರ ವರದಿ ತಯಾರಿಸಬೇಕು. ಪರಿಹಾರಕ್ಕಾಗಿ ಎನ್​ಡಿಆರ್​ಎಫ್​ನಿಂದ ಜಿಲ್ಲೆಗೆ 10 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಆಗಿದ್ದು, ಸಂತ್ರಸ್ತರಿಗೆ ಸಕಾಲಕ್ಕೆ ವಿತರಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು ಹೇಳಿದರು.

    ಡಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಅನಾಹುತ, ತೊಂದರೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. 537 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 403 ಮನೆಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. 2 ಪ್ರಾಣಹಾನಿ, 2 ಜಾನುವಾರು ಮೃತಪಟ್ಟಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. 1600 ಕಿಮೀ ರಸ್ತೆ ಹಾಳಾಗಿದೆ. ಪರಿಹಾರ ಕಾರ್ಯಕ್ಕಾಗಿ ಟಾಸ್ಕ್​ಫೋರ್ಸ್ ರಚಿಸುವಂತೆ ತಿಳಿಸಿದ್ದೇನೆ ಎಂದರು.

    ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಮಳೆಯಾಗುತ್ತಿದೆ. ನಗರದ ಒಳಚರಂಡಿ ಮತ್ತು ಅಮೃತ್ ಕುಡಿವ ನೀರಿನ ಯೋಜನೆ ಅವ್ಯವಸ್ಥೆ ಬಗ್ಗೆ ತಿಳಿದಿದ್ದೇನೆ. ಶೇ.30ರಷ್ಟು ಕೆಲಸ ಬಾಕಿ ಇದೆ. ಇನ್ನೆರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದೇನೆ. 20 ವಲಯಗಳಲ್ಲಿ ಅಮೃತ್ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, 3 ಜೋನ್ ಬಾಕಿ ಇವೆ. ಒಂದು ತಂಡ ರಚಿಸಿಕೊಂಡು ನಲ್ಲಿಗಳಲ್ಲಿ ನೀರು ಬರುತ್ತದೋ, ಇಲ್ಲವೋ ಎಂದು ಪರೀಕ್ಷಿಸಲು ಹೇಳಿದ್ದೇನೆ ಎಂದರು.

    ವಿಧಾನಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್, ಎಸ್.ಎಲ್.ಬೋಜೇಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ, ಡಿಸಿ ಕೆ.ಎನ್.ರಮೇಶ್, ಎಡಿಸಿ ಬಿ.ಆರ್.ರೂಪಾ, ಜಿಪಂ ಸಿಇಒ ಜಿ.ಪ್ರಭು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts