More

    ಎನ್ಇಪಿ ಮೂಲಕ ಸನಾತನ ಶಿಕ್ಷಣ ವ್ಯವಸ್ಥೆಗೆ ಹುನ್ನಾರ – ಡಾ.ಎ.ಬಿ. ರಾಮಚಂದ್ರಪ್ಪ – ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಜನ್ಮ ದಿನಾಚರಣೆ

    ದಾವಣಗೆರೆ: ದೇಶದಲ್ಲಿ ಎನ್‌ಇಪಿ ಮೂಲಕ ಸನಾತನ ಶಿಕ್ಷಣ ವ್ಯವಸ್ಥೆ ಮರು ಸ್ಥಾಪಿಸುವ ಹುನ್ನಾರ ನಡೆಯುತ್ತಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಆರೋಪಿಸಿದರು.
    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಗುರುಕುಲ ಶಿಕ್ಷಣ ಪದ್ಧತಿ ಜಾತಿ ಆಧಾರಿತವಾಗಿದ್ದು, ದಮನಿತ ಸಮುದಾಯಗಳು ಅಕ್ಷರ ಕಲಿಯುವಂತಿಲ್ಲ. ಪ್ರಸ್ತುತ ಜಿಲ್ಲೆಗೊಂದು ಜ್ಞಾನಕೇಂದ್ರ ತೆರೆಯುವ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ ನಡೆಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಬಹುಪಾಲು ಜನರು ಅಕ್ಷರದಿಂದ ವಂಚಿತರಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
    ಜ್ಯೋತಿ ಬಾಫುಲೆ ಅವರೊಂದಿಗೆ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ದೇಶದಲ್ಲಿ ಅನೇಕ ಶಾಲೆ ತೆರೆದು ಮಹಿಳೆಯರು ಹಾಗೂ ದಮನಿತರ ಶಿಕ್ಷಣಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.
    ಇಬ್ಬರೂ ಮಹಿಳೆಯರು ಪಠ್ಯ ಕೇಂದ್ರೀಕರಿಸಿ ಬೋಧನೆ ಮಾಡಲಿಲ್ಲ. ಅದರ ಜತೆಗೆ ದಮನಿತ ಸಮುದಾಯಗಳ ಸ್ಥಿತಿಗತಿ ಅರ್ಥೈಸುವ ಪ್ರಯತ್ನ ಮಾಡಿದರು. ಶಿಕ್ಷಣಕ್ಕೆ ಅಮೋಘ ಕೊಡುಗೆ ನೀಡಿರುವ ಇವರ ಚರಿತ್ರೆ ನಮಗೆ ಕಾಣುತ್ತಿಲ್ಲ. ನಿಜವಾದ ಅಕ್ಷರದ ಚಾರಿತ್ರಿಕ ಚರಿತ್ರೆ ಮರೆಮಾಚಲಾಗಿದೆ ಎಂದು ವಿಷಾದಿಸಿದರು.
    ದೇಶದಲ್ಲಿ ಇಂದಿಗೂ ಭಾರತ ವಿಶ್ವಗುರು ಎಂದು ಸಂಭ್ರಮದ ಮಾತನಾಡಲಾಗುತ್ತಿದ್ದು, ವಾಸ್ತವ ಮರೆಮಾಚಿ ಕಲ್ಪಿತ ಚರಿತ್ರೆಯನ್ನು ಪರಮಸತ್ಯ ಎಂದು ಬಿಂಬಿಸಲಾಗುತ್ತಿದೆ. ಜಗತ್ತಿನ ಹಸಿವಿನ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನದಲ್ಲಿದ್ದು, ಹಸಿದ ದೇಶಗಳಿಗೆ ಅನ್ನಭಾಗ್ಯ ಬೇಕೇ ಹೊರತು ಅಕ್ಷತೆ ಭಾಗ್ಯ ಅಲ್ಲ ಎಂದು ಟೀಕಿಸಿದರು.
    ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಸಿ. ದಾದಾಪೀರ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಮೂಲ ಬೀಜ ಬಿತ್ತಿದವರು ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್. ಅವರು ಅಕ್ಷರಗಳ ಹಿಂದಿನ ಶಕ್ತಿ ಹಾಗೂ ಪ್ರೇರಣೆಯಾಗಿ ಅಳಿಸಲಾಗದ ಸಂಪತ್ತನ್ನು ನಮಗೆ ಕೊಡಮಾಡಿದ್ದಾರೆ ಎಂದು ತಿಳಿಸಿದರು.
    ಹೆಣ್ಣಿನ ವಿಚಾರದಲ್ಲಿ ಜಾಗತಿಕ ಚರಿತ್ರೆ ಅತ್ಯಂತ ಕ್ರೂರವಾಗಿದೆ. ಮಹಿಳೆಯರ ಶೋಷಣೆ ಮತ್ತು ಅವಮಾನಕ್ಕೆ ಎಲ್ಲ ಧರ್ಮಗಳು ಪೈಪೋಟಿ ನಡೆಸಿದ್ದು, ಇದರಲ್ಲಿ ಯಾವ ಧರ್ಮಗಳೂ ಹಿಂದೆ ಬಿದ್ದಿಲ್ಲ. ಸಮಾಜದಲ್ಲಿ ಇಂದಿಗೂ ಪುರುಷ ಪ್ರಧಾನತೆಯೇ ವಿಜೃಂಭಿಸುತ್ತಿದೆ ಎಂದು ಹೇಳಿದರು.
    ಸಂಜೆ ಕಾಲೇಜು ಪ್ರಾಚಾರ್ಯ ಡಾ. ಸಿ.ಕೆ. ಕೊಟ್ರಪ್ಪ ಮಾತನಾಡಿದರು. ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಶಿವಕುಮಾರ್ ಮಾಡಾಳ್, ಸಾಂಸ್ಕೃತಿಕ ವೇದಿಕೆ ಸಂಯೋಜಕಿ ಡಾ.ಎಸ್.ಎಂ. ಲತಾ, ವ್ಯವಸ್ಥಾಪಕಿ ಟಿ. ಗೀತಾದೇವಿ ಇದ್ದರು. ಪ್ರೊ.ಕೆ.ವಿ. ಲೋಲಾಕ್ಷಿ ಪ್ರಾಸ್ತಾವಿಕ ಮಾತನಾಡಿದರು. ಕಲಾವಿದ ಅಂಜಿನಪ್ಪ ಲೋಕಿಕೆರೆ ತಂಡದವರು ಜಾಗೃತಿಗೀತೆ ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts