More

    ಎತ್ತಿನ ಬಾಯಲ್ಲಿ ನಾಡಬಾಂಬ್ ಸ್ಪೋಟ!

    ಮುಂಡಗೋಡ: ತಾಲೂಕಿನ ಸನವಳ್ಳಿ ಡ್ಯಾಂ ಬಳಿ ಮೇಯಲು ಹೋಗಿದ್ದ ಎತ್ತು ನಾಡಬಾಂಬ್ (ಕೈ ಬಾಂಬ್) ಕಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡು ಸಾವು- ಬದುಕಿನ ಮಧ್ಯೆ ಹೋರಾಡುತ್ತಿರುವ ಮನಕಲಕುವ ಘಟನೆ ಸೋಮವಾರ ನಡೆದಿದೆ.

    ಎತ್ತು ಸನವಳ್ಳಿ ಪ್ಲಾಟ್​ನ ಅಪ್ಪು ನಾಯರ ಎಂಬುವರಿಗೆ ಸೇರಿದೆ. ಸೋಮವಾರ ಬೆಳಗ್ಗೆ ಇತರ ದನ- ಕರುಗಳೊಂದಿಗೆ ಮೇಯಲು ಅಡವಿಗೆ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಯಾರೋ ದುಷ್ಕರ್ವಿುಗಳು ಪ್ರಾಣಿಗಳನ್ನು ಬೇಟಿಯಾಡಲು ಇಟ್ಟಿದ್ದ ಕೈ ಬಾಂಬ್ ಅನ್ನು ಎತ್ತು ಕಚ್ಚಿದ್ದರಿಂದ ಬಾಂಬ್ ಸ್ಪೋಟಗೊಂಡಿದೆ. ಇದರಿಂದ ಎತ್ತಿನ ಬಾಯಲ್ಲಿ ಗಂಭೀರವಾದ ಗಾಯವಾಗಿದ್ದು, ಮೇವು ತಿನ್ನಲು ಮತ್ತು ನೀರು ಕುಡಿಯಲು ಆಗುತ್ತಿಲ್ಲ.

    ಸ್ಥಳದಲ್ಲಿ ಅನುಮಾನಾಸ್ಪದ ಕೈ ಬಾಂಬ್ ಪತ್ತೆಯಾಗಿದೆ. ಇದರಿಂದ ಆತಂಕಗೊಂಡ ಗ್ರಾಮಸ್ಥರು ಇದೇ ರೀತಿ ಬೇರೆ ಜಾಗಗಳಲ್ಲಿ ನಾಡ ಬಾಂಬ್ ಇಟ್ಟಿರುವುದನ್ನು ಪತ್ತೆ ಹಚ್ಚಬೇಕು. ಈ ರೀತಿ ಅಮಾನವೀಯ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

    ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಸ್ಥಳದಲ್ಲಿ ಪತ್ತೆಯಾದ ಅನುಮಾನಾಸ್ಪದ ವಸ್ತುವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಹೋರಿಯ ಮಾಲೀಕರು ಅರ್ಜಿ ಸಲ್ಲಿಸಿದರೆ ಪರಿಹಾರ ನೀಡಲಾಗುವುದು.
    | ಸುರೇಶ ಕುಳ್ಳೊಳ್ಳಿ ಆರ್​ಎಫ್​ಒ

    ಎತ್ತು ಬೇರೆ ದನ- ಕರುಗಳೊಂದಿಗೆ ಮೇಯಲು ಹೋಗಿತ್ತು. ಆದರೆ, ಅದು ಸಂಜೆ ಮನೆಗೆ ವಾಪಸ್ ಬರಲಿಲ್ಲ. ಆಮೇಲೆ ಹುಡುಕಾಡಿ ನೋಡಿದಾಗ ಡ್ಯಾಂ ಬಳಿಯ ಅಡವಿಯಲ್ಲಿ ಅದು ಕೈಬಾಂಬ್ ಕಚ್ಚಿ ಗಂಭೀರವಾಗಿ ಗಾಯಗೊಂಡು ಮಲಗಿತ್ತು. ತಕ್ಷಣ ಅರಣ್ಯ ಮತ್ತು ಪಶು ಇಲಾಖೆ ವೈದ್ಯಾಧಿಕಾರಿಗೆ ಕರೆ ಮಾಡಿ ಹೇಳಿದೆವು. ತಪ್ಪಿತಸ್ಥರ ವಿರುದ್ಧ ಅರಣ್ಯ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು.
    | ಮಂಜುನಾಥ ನಾಯರ ಎತ್ತಿನ ಮಾಲೀಕನ ಪುತ್ರ

    ಸನವಳ್ಳಿಯ ಸರ್ವೆ ನಂ. 82ರ ಅರಣ್ಯ ಭಾಗದಲ್ಲಿ ಕೈಬಾಂಬ್ ತಯಾರಿಸಿ ಇಟ್ಟಿದ್ದರಿಂದ ಅದನ್ನು ಎತ್ತು ಕಚ್ಚಿ ಗಂಭೀರವಾಗಿ ಗಾಯಗೊಂಡಿದೆ. ಅದು ಉಳಿಯುವ ಸ್ಥಿತಿಯಲ್ಲಿಲ್ಲ. ಕಾರಣ ಮೀನುಗಾರರು, ಕಟ್ಟಿಗೆಗೆ ಬರುವವರು ಜಾಗ್ರತೆಯಿಂದ ಇರಬೇಕು.
    | ಮಂಜು ಕೋಣನಕೇರಿ ಸನವಳ್ಳಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts