More

    ಎಚ್ಚೆತ್ತುಕೊಂಡರೆ ಸಮಸ್ಯೆಯಾಗದು

    ಮಂಗಳೂರು: ತ್ವರಿತವಾಗಿ ತುಂಬುತ್ತಿರುವ ಖಾಸಗಿ-ಸರ್ಕಾರಿ ಆಸ್ಪತ್ರೆ ಬೆಡ್‌ಗಳು, ಬರುವ ಮುಂಚೆ ಕೇಳಿಕೊಂಡು ಬನ್ನಿ ಎಂದು ಅಧಿಕಾರಿಗಳಿಂದಲೇ ವಿನಂತಿ, ಇದರೊಂದಿಗೆ ಪ್ರತಿದಿನವೂ 1000 ಪ್ಲಸ್ ಕರೊನಾ ಕೇಸ್‌ಗಳು… ಇದು ದ.ಕ ಜಿಲ್ಲೆಗೂ ಆತಂಕ ಮೂಡಿಸುವ ಸುದ್ದಿ.

    ಕಳೆದ ವರ್ಷ ಕೋವಿಡ್ ಪಾಸಿಟಿವ್ ಸಂಖ್ಯೆ 500ರವರೆಗೂ ಬರುತ್ತಿದ್ದರೂ, ಕೊನೆ ಕೊನೆಗೆ ಗಂಭೀರ ಸ್ವರೂಪದ ಪ್ರಕರಣಗಳು ಬೆರಳೆಣಿಕೆ ಇದ್ದಿದ್ದರಿಂದ ಹೆಚ್ಚೇನೂ ಸಮಸ್ಯೆಯಾಗಿರಲಿಲ್ಲ, ವೆನ್ಲಾಕ್‌ನಲ್ಲಿರುವ ಐಸಿಯು ಸಾಕಾಗುತ್ತಿತ್ತು. ಅನೇಕರು ಖಾಸಗಿ ಆಸ್ಪತ್ರೆಗಳಿಗೂ ಹೋಗುತ್ತಿದ್ದರು.

    ಆದರೆ ಈ ಬಾರಿ ಸ್ಥಿತಿ ಹಾಗಿಲ್ಲ. ದಿಢೀರ್ ಆಗಿ ಕೋವಿಡ್ ಸಂಖ್ಯೆ ಏರತೊಡಗಿ ಪ್ರತಿದಿನ ಸಾವಿರ ದಾಟುತ್ತಿದೆ. ಅದರಲ್ಲಿ ಕನಿಷ್ಠ 50-60 ಮಂದಿಗೆ ಆಸ್ಪತ್ರೆಯಲ್ಲಿರುವ ಸ್ಥಿತಿ ಇರುತ್ತಿದೆ. ಉಳಿದವರು ಮನೆಯಲ್ಲಿ ಅಥವಾ ಕೋವಿಡ್ ಕೇರ್ ಸೆಂಟರ್‌ನಲ್ಲಿ ಇರಬಹುದು. ಆದರೂ ಪ್ರತಿದಿನ 60ರಷ್ಟು ಮಂದಿ ಆಸ್ಪತ್ರೆ ಸೇರುತ್ತಾರೆ. ಅದರಲ್ಲಿ ಕೆಲವರಿಗೆ ಐಸಿಯು, ವೆಂಟಿಲೇಟರ್ ಬೇಕಾಗಿ ಬರಬಹುದು. ಒಮ್ಮೆ ಐಸಿಯು ಸೇರಿದವರು ಕನಿಷ್ಠ ಒಂದು ವಾರವಾದರೂ ಇರಬೇಕಾಗುತ್ತದೆ. ಹೀಗಾಗಿ ಸಹಜವಾಗಿ ವ್ಯವಸ್ಥೆ ಮೇಲೆ ಒತ್ತಡ ಬರುತ್ತದೆ.

    ಇನ್ನೂ ಬಿಗಡಾಯಿಸಿಲ್ಲ: ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ಹೇಳುವ ಪ್ರಕಾರ ಈವರೆಗೆ ಪರಿಸ್ಥಿತಿ ಬಿಗಡಾಯಿಸಿಲ್ಲ. ಒಂದು ವೇಳೆ ಲಾಕ್‌ಡೌನ್ ಮಾಡದೆ ಹೋಗಿದ್ದರೆ ಪರಿಸ್ಥಿತಿ ತೀರಾ ಶೋಚನೀಯವಾಗುತ್ತಿತ್ತು. ಸದ್ಯ ಎಲ್ಲ ನರ್ಸಿಂಗ್ ಹೋಂಗಳಲ್ಲೂ ಕೋವಿಡ್‌ಗೆ ಚಿಕಿತ್ಸೆ ನೀಡಲು ಅನುವು ಮಾಡಿದ್ದಾರೆ. ಇದರಿಂದ ಮಂಗಳೂರು ನಗರದ ಆಸ್ಪತ್ರೆಗಳ ಮೇಲೆ ಕೊಂಚ ಒತ್ತಡ ಕಡಿಮೆಯಾಗಿದೆ.

    ಆದರೂ ಹೆಚ್ಚಿನವರು ಪ್ರಮುಖ ಆಸ್ಪತ್ರೆಗಳಾದ ಕೆಎಂಸಿ, ಫಾದರ್ ಮುಲ್ಲರ್ಸ್‌, ಯೇನೆಪೊಯ, ಎ.ಜೆ ಆಸ್ಪತ್ರೆಗಳಿಗೆ ಬರುತ್ತಾರೆ. ಹಾಗಾಗಿ ಇಲ್ಲಿ ಬೆಡ್ ಬೇಗ ತುಂಬುತ್ತದೆ. ಆದರೆ ಹೊರಭಾಗದಲ್ಲಿರುವ ಕೆ.ಎಸ್.ಹೆಗ್ಡೆ, ಯೇನೆಪೊಯ, ಶ್ರೀನಿವಾಸ ಆಸ್ಪತ್ರೆಗಳಲ್ಲಿ ಕೂಡ ಬೆಡ್ ಲಭ್ಯವಿವೆ. ನಗರದಲ್ಲಿ ಇತರ ಹತ್ತಾರು ಆಸ್ಪತ್ರೆಗಳಿವೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ಬರುವುದು ಮುಂದುವರಿದರೆ ಕಷ್ಟ ಎನ್ನುತ್ತಾರೆ.

    ಸಂಶಯಿತರ ಐಸಿಯು ಬೆಡ್ ಕಡಿಮೆ: ಸದ್ಯ ಪಾಸಿಟಿವ್ ದೃಢಪಟ್ಟವರಿಗೆ ಐಸಿಯು ಕೊರತೆ ಇಲ್ಲ. ಬದಲು ಸಂಶಯಿತರಿಗೆ ಮೀಸಲಿಟ್ಟಿರುವ ಐಸಿಯು ಬೆಡ್ ಕಡಿಮೆ ಇದೆ. ಆಸ್ಪತ್ರೆಗೆ ಕೋವಿಡ್ ಶಂಕೆಯೊಂದಿಗೆ ಬರುತ್ತಾರೆ, ಟೆಸ್ಟ್‌ಗೆ ಮಾದರಿ ಕೊಟ್ಟಿರುತ್ತಾರೆ. ವರದಿ ಬರಲು ಎರಡೋ ಮೂರೋ ದಿನ ಬೇಕಾಗುತ್ತದೆ. ಅಂತಹವರಿಗೆ ಐಸಿಯು ಬೇಕಾಗಿ ಬಂದರೆ ಕೊರತೆಯಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

    ಉಸಿರಾಟ ತೊಂದರೆಯಾದಾಗ ಸಮಸ್ಯೆ: ಕೋವಿಡ್‌ನಿಂದ ಆರೋಗ್ಯವಂತರಿಗೆ ಸಾಮಾನ್ಯ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಕೆಲವರಿಗೆ ಉಸಿರಾಟದ ತೊಂದರೆಯಾದಾಗ ಬೆಡ್ ಸಿಗದೆ ಇದ್ದರೆ ಸಮಸ್ಯೆ ಉಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ಬೆಡ್ ವ್ಯವಸ್ಥೆ ಆಗದೆ ಇದ್ದಾಗ, ಐಸಿಯು ಸಿಗದಿದ್ದಾಗ ಪ್ರಾಣಕ್ಕೆ ಕುತ್ತು ಉಂಟಾಗುವ ಸಾಧ್ಯತೆಯೂ ಇದೆ.

    ಭಯ ಬೇಡ, ಎಚ್ಚರವಿರಲಿ: ಕೋವಿಡ್ ಪಾಸಿಟಿವ್ ಆದಾಗ ಭಯಪಡುವ ಅವಶ್ಯಕತೆ ಇಲ್ಲ. ಎಚ್ಚರಿಕೆಯಿಂದ ಇರುವುದು ಮುಖ್ಯ. ಕೋವಿಡ್ ಪಾಸಿಟಿವ್ ಬಂದ ಕೂಡಲೇ ಅಡ್ಮಿಟ್ ಆಗಬೇಕಾಗಿಲ್ಲ, ಶೇ.99 ಮಂದಿಗೆ ಮನೆಯಲ್ಲೇ ಇದ್ದು ಗುಣವಾಗಬಹುದು. ಹಾಗಾಗಿ ಆಸ್ಪತ್ರೆಗೆ ಸೇರುವ ಹಪಾಹಪಿ ಬೇಡ ಎನ್ನುತ್ತಾರೆ ವೈದ್ಯರು.

    ನಮ್ಮಲ್ಲಿ ಆಕ್ಸಿಜನೇಟೆಡ್ ಬೆಡ್, ಐಸಿಯು ಬೆಡ್ ಕೊರತೆ ಇಲ್ಲ. ಪುತ್ತೂರು, ಬಂಟ್ವಾಳದಲ್ಲಿ ತಲಾ 10, ಸುಳ್ಯದಲ್ಲಿ 17 ಐಸಿಯು ಬೆಡ್ ಇದೆ. ಮೂಡುಬಿದಿರೆ, ಮೂಲ್ಕಿ, ಬೆಳ್ತಂಗಡಿ ಸೇರಿ 50ರಷ್ಟಿದೆ. ಆದರೆ ಬಳಕೆ ಆಗುತ್ತಿಲ್ಲ. ಜನ ಅಲ್ಲಿಂದ ಮಂಗಳೂರಿಗೆ ಬರುತ್ತಿರುವುದು ಸಮಸ್ಯೆ. ಆದಷ್ಟೂ ಅವರು ಅಲ್ಲಲ್ಲೇ ಹೋದರೆ ಈ ಸಮಸ್ಯೆ ಆಗುವುದಿಲ್ಲ. ಅದಕ್ಕಾಗಿ ಇಂದು ಬಂಟ್ವಾಳ, ಪುತ್ತೂರು, ಸುಳ್ಯದಲ್ಲಿ ಮೀಟಿಂಗ್ ಮಾಡಿ ಸೂಚನೆ ನೀಡಿದ್ದೇನೆ. ಮುಂದಿನ ವಾರಕ್ಕೆ ಐಸಿಯು ಬೆಡ್ ಸಂಖ್ಯೆ ಇನ್ನಷ್ಟು ಹೆಚ್ಚು ಆಗುವುದರಿಂದ ಸಮಸ್ಯೆ ಆಗಲಾರದು.
    – ಡಾ.ರಾಜೇಂದ್ರ ಕೆ.ವಿ, ಜಿಲ್ಲಾಧಿಕಾರಿ ದ.ಕ.

    ಉಡುಪಿಯಲ್ಲೂ ಪೂರಕ ವ್ಯವಸ್ಥೆ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಕರೊನಾ ಗಂಭೀರ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪರಿಸ್ಥಿತಿ ಕೈಮೀರದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆಯಾದರೂ, ಬೆಡ್‌ಗಳು ಭರ್ತಿಯಾಗುತ್ತಿರುವುದನ್ನೂ ಗಮನಿಸಬೇಕಿದೆ.

    ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 60 ಬೆಡ್‌ಗಳಿವೆ. ಇವುಗಳಲ್ಲಿ ಬಹುತೇಕ ಭರ್ತಿಯಾಗಿವೆ. ಆದರೆ ತಾಲೂಕು ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇವೆ. ಪ್ರಮುಖ ಖಾಸಗಿ ಆಸ್ಪತ್ರೆಗಳಾದ ಮಣಿಪಾಲ ಕೆಎಂಸಿ, ಆದರ್ಶ ಆಸ್ಪತ್ರೆಗಳಲ್ಲಿ ಸರ್ಕಾರಕ್ಕೆ ಮೀಸಲಿಟ್ಟ ಶೇ.50 ಬೆಡ್‌ಗಳು ಹೊರತುಪಡಿಸಿ ಉಳಿದ ಬೆಡ್‌ಗಳು ಭರ್ತಿಯಾಗುತ್ತಿವೆ. ಜಿಲ್ಲೆಯ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇದೆ. ಸದ್ಯ ಬೆಡ್‌ಗಳ ಸಂಖ್ಯೆ ಹೆಚ್ಚಿಸಲು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದು, ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಜನತೆ ಸೋಂಕು ತಗುಲದಂತೆ ಜಾಗ್ರತೆ ವಹಿಸಬೇಕು ಎನ್ನುತ್ತಾರೆ ಅಧಿಕಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts