More

    ಎಚ್ಚರ ತಪ್ಪಿದರೆ ಮುಂದಿದೆ ಸಂಕಷ್ಟ

    ಸುಭಾಸ ಧೂಪದಹೊಂಡ ಕಾರವಾರ

    ವೇಗವಾಗಿ ಏರುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಕರೊನಾ ಸೋಂಕು ಮಿತಿ ಮೀರಿ, ಪರಿಸ್ಥಿತಿ ಹದಗೆಡುತ್ತಿರುವ ಮುನ್ಸೂಚನೆ ನೀಡಿದೆ. ಜಿಲ್ಲಾಡಳಿತ ಶೀಘ್ರ ಎಚ್ಚೆತ್ತು ಕ್ರಮ ವಹಿಸದೇ ಇದ್ದರೆ ಬೆಂಗಳೂರು, ಚಾಮರಾಜನಗರ ಮುಂತಾದ ಪ್ರದೇಶಗಳ ಪರಿಸ್ಥಿತಿ ಇಲ್ಲಿಗೂ ಬಂದರೆ ಅಚ್ಚರಿ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

    ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಹೆಚ್ಚಿಲ್ಲ. ಜಿಲ್ಲೆಯ ರೋಗಿಗಳು ಉನ್ನತ ಚಿಕಿತ್ಸೆಗಾಗಿ ಮಂಗಳೂರು, ಉಡುಪಿ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ಆಸ್ಪತ್ರೆಗಳನ್ನು ನಂಬಿಕೊಂಡಿದ್ದರು. ಆದರೆ, ಎಲ್ಲ ಜಿಲ್ಲೆಗಳಲ್ಲೂ ಕರೊನಾ ಅಟ್ಟಹಾಸ ಹೆಚ್ಚಿರುವುದರಿಂದ ಅವರು ನಮ್ಮ ಜಿಲ್ಲೆಯವರನ್ನು ಪಡೆಯುವ ಪರಿಸ್ಥಿತಿಯಲ್ಲಿಲ್ಲ. ಈಗಾಗಲೇ ಬೆಡ್ ಖಾಲಿ ಇಲ್ಲ ಎಂಬ ಸಂದೇಶ ನೀಡುತ್ತಿವೆ. ಎಲ್ಲ ಗಂಭೀರ ಅನಾರೋಗ್ಯ ಪ್ರಕರಣಗಳಿಗೆ ಕಾರವಾರ ಕ್ರಿಮ್್ಸ ಆಸ್ಪತ್ರೆಯನ್ನೇ ನಂಬಿಕೊಳ್ಳುವ ಪರಿಸ್ಥಿತಿ ಇದೆ. ಇದರಿಂದ ಒಂದೇ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚುತ್ತಿದೆ. ಇಲ್ಲಿನ ವೈದ್ಯರು, ನರ್ಸ್​ಗಳು, ತಂತ್ರಜ್ಞರು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಆದರೂ ಕೆಲವೊಮ್ಮೆ ಸೇವೆಯಲ್ಲಿ ಸಹಜವಾಗಿಯೇ ವ್ಯತ್ಯಯ ಉಂಟಾಗುತ್ತಿದೆ.

    ಬುಧವಾರ ಇಲ್ಲಿನ ಕ್ರಿಮ್್ಸ ಆಸ್ಪತ್ರೆಯ ಎದುರು ಉಸಿರಾಟದ ತೊಂದರೆ ಇರುವ ಕೋವಿಡ್ ಸೋಂಕಿತನೊಬ್ಬ ಆಸ್ಪತ್ರೆಯಲ್ಲಿ ದಾಖಲಾಗಲು ತಾಸುಗಳಿಂದ ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ. ಸದ್ಯಕ್ಕೆ ಕ್ರಿಮ್್ಸ ಆಸ್ಪತ್ರೆಯಲ್ಲಿ ಸಾಮಾನ್ಯ ಬೆಡ್​ಗಳು ಖಾಲಿ ಇವೆ. ವೆಂಟಿಲೇಟರ್ ಬೆಡ್​ಗಳು, ಆಕ್ಸಿಜನ್ ಇರುವ ಬೆಡ್​ಗಳು ಭರ್ತಿಯಾಗುತ್ತಿವೆ. ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ ಧಾರಾಳವಾಗಿ ಬರುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ನೋಡಿದರೆ ಯಾವುದೇ ಕ್ಷಣದಲ್ಲಾದರೂ ಸಮಸ್ಯೆ ಉಂಟಾಗಬಹುದಾದ ಸಾಧ್ಯತೆ ಇದೆ.

    ಸಮಸ್ಯೆ ಏನು?: ಕೋವಿಡ್ ಪಾಸಿಟಿವ್ ಬಂದರೆ ಸಾಮಾಜಿಕ ಬಹಿಷ್ಕಾರದ ಆತಂಕ, ತಮ್ಮ ಉದ್ಯೋಗ, ಕೌಟುಂಬಿಕ ಕಾರ್ಯಗಳಿಗೆ ತೊಂದರೆ ಉಂಟಾಗುತ್ತದೆ ಎಂಬ ಭಯವಿದೆ. ನಮಗೇನೂ ತೊಂದರೆ ಉಂಟಾಗದು ಎಂಬ ಹುಂಬ ಧೈರ್ಯದಿಂದ ಹಲವರು ಜ್ವರ, ಥಂಡಿ, ಕೆಮ್ಮು ಮುಂತಾದ ರೋಗ ಲಕ್ಷಣ ಇದ್ದರೂ ಪರೀಕ್ಷೆ ಮಾಡಿಸಲು ಬರುತ್ತಿಲ್ಲ. ಕೆಲವರು ಧೈರ್ಯ ಮಾಡಿದ ಬಂದರೂ ಗಂಟಲ ದ್ರವ ಪರೀಕ್ಷೆಯನ್ನು ಮಿತಿಗೊಳಿಸಿದ್ದರಿಂದ ಸಮಸ್ಯೆ ಉಂಟಾಗುತ್ತಿದೆ. ಹಾಗೊಮ್ಮೆ ಗಂಟಲ ದ್ರವ ಪರೀಕ್ಷೆಗೆ ಕಳಿಸಿದರೂ ಕ್ರಿಮ್್ಸ ಪ್ರಯೋಗಾಲಯದ ಮೇಲಿರುವ ಭಾರಿ ಒತ್ತಡದಿಂದ ವರದಿ ಬರಲು ವಾರಗಟ್ಟಲೇ ವಿಳಂಬವಾಗುತ್ತಿದೆ. ಎಲ್ಲ ಕಾರಣಗಳಿಂದ ಹಲವರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಯತ್ನಿಸುತ್ತಿದ್ದಾರೆ. ಇನ್ನೇನು ಗುಣವಾಗುವುದಿಲ್ಲ ಎಂದು ಕಂಡಾಗ ಕೊನೆಯ ಕ್ಷಣದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಇದರಿಂದ ಕ್ರಿಮ್ಸ್​ನಲ್ಲಿ ತಕ್ಷಣ ದಾಖಲಾತಿಗೆ, ಚಿಕಿತ್ಸೆಗೆ ವೈದ್ಯರಿಗೂ ಸಮಸ್ಯೆ ಉಂಟಾಗುತ್ತಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

    ತಾಲೂಕು ಆಸ್ಪತ್ರೆಗಳು ಸದೃಢವಲ್ಲ: ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯಗಳಿವೆ. ಆದರೆ, ಅವನ್ನು ನಿರ್ವಹಿಸುವ ವೈದ್ಯರು, ತಂತ್ರಜ್ಞರು, ನರ್ಸ್​ಗಳ ಕೊರತೆ ಇದೆ. ಆಕ್ಸಿಜನ್ ಬೆಡ್​ಗಳಿದ್ದರೂ ಅವುಗಳ ಸಂಖ್ಯೆ ಹೆಚ್ಚಿಲ್ಲ. ಸಮಸ್ಯೆ ಉಂಟಾದರೆ ವೈದ್ಯರ ಮೇಲೆ ಜನ ಮಾಡುವ ಆರೋಪಗಳಿಂದ ಹೆದರಿ ಹಲವು ವೈದ್ಯರು ಹೆಚ್ಚಿನ ರಿಸ್ಕ್ ಪಡೆಯದೇ ಬೇರೆ ಆಸ್ಪತ್ರೆಗಳಿಗೆ ಕಳಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಕುಳಿತು ಉತ್ತರ ಕಂಡುಕೊಳ್ಳದೇ ಇದ್ದರೆ ಪರಿಸ್ಥಿತಿ ಗಂಭೀರವಾಗುವುದರಲ್ಲಿ ಸಂಶಯವಿಲ್ಲ.

    ಇತರ ರೋಗಿಗಳ ಗೋಳು ಕೇಳೋರಿಲ್ಲ: ಕೋವಿಡ್ ಕಾರಣ ಇತರ ಗಂಭೀರ ಕಾಯಿಲೆ ಇರುವವರ ಸಮಸ್ಯೆ ಕೇಳುವವರೇ ಇಲ್ಲವಾಗಿದೆ. ಕೋವಿಡ್ ಕಾರಣ ಹೆಚ್ಚಿನ ಸರ್ಕಾರಿ ವೈದ್ಯರು ಅದೇ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇದರಿಂದ ಇತರ ರೋಗಿಗಳಿಗೆ ಸೂಕ್ತ ಸಮಯಕ್ಕೆ ಔಷಧ ದೊರೆಯುತ್ತಿಲ್ಲ. ಚಿಕಿತ್ಸೆ ಸಿಗುತ್ತಿಲ್ಲ. ತಪಾಸಣೆಗೆ ಸಲಹೆ ಸಿಗುತ್ತಿಲ್ಲ. ಹಿಮೊಫೀಲಿಯಾ ಅಥವಾ ಕುಸುಮ ರೋಗದಿಂದ ಬಳಲುತ್ತಿದ್ದ ಕುಮಟಾದ ಪ್ರವೀಣ ಶೆಟ್ಟಿ ಅವರಿಗೆ ಅಲ್ಲಿ ಇಂಜೆಕ್ಷನ್ ಸಿಗದೇ ತೀವ್ರ ಸಮಸ್ಯೆಗೆ ಒಳಗಾಗಿದ್ದು ತಾಜಾ ಉದಾಹರಣೆ.

    ಗ್ರಾಮೀಣ ಭಾಗದ ಟಾಸ್ಕ್​ಫೋಸ್ ಸಮಿತಿಗಳನ್ನು ಬಲಗೊಳಿಸಲಾಗಿದೆ. ನಮ್ಮ ಡೇಟಾ ಎಂಟ್ರಿ ಆಪರೇಟರ್​ಗಳ ಮೂಲಕ ಗ್ರಾಮೀಣ ಟಾಸ್ಕ್​ಫೋಸ್ ಸಮಿತಿಗಳ ಮಾಹಿತಿಯನ್ನು ಕಾಲಕಾಲಕ್ಕೆ ಕಲೆ ಹಾಕಲಾಗುತ್ತಿದೆ. ಹೊರಗಿನಿಂದ ಬಂದವರ ಬಗ್ಗೆ ನಿಗಾ ಇಡಲು ಸೂಚಿಸಲಾಗಿದೆ. ಜಿಲ್ಲಾ ಕೋವಿಡ್ ಸಹಾಯವಾಣಿ ಹಾಗೂ ತಾಲೂಕು ಸಹಾಯವಾಣಿ ಪ್ರಾರಂಭಿಸಲಾಗಿದೆ. ಜಿಲ್ಲಾ ಸಹಾಯವಾಣಿಗೆ 42 ಹಾಗೂ ತಾಲೂಕು ಸಹಾಯವಾಣಿಗಳಿಗೆ 339 ಸೋಂಕಿತರು ಕರೆ ಮಾಡಿದ್ದಾರೆ.
    ಪ್ರಿಯಾಂಗಾ ಎಂ. ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts