More

    ಎಚ್ಚರಿಕೆಯಿಂದ ಆಡಳಿತ ನಿಭಾಯಿಸಿ

    ಹೊಸನಗರ: ರಾಜ್ಯದಲ್ಲಿ ಕರೊನಾ ಸಮಸ್ಯೆ ಉಲ್ಭಣವಾಗುತ್ತಿದ್ದು ಆರ್ಥಿಕ ಹಿಂಜರಿತ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಎಚ್ಚರಿಕೆ ಅಧಿಕಾರ ನಿರ್ವಹಿಸಿ ಎಂದು ಶಾಸಕರಾದ ಹರತಾಳು ಹಾಲಪ್ಪ ಮತ್ತು ಆರಗ ಜ್ಞಾನೇಂದ್ರ ಗ್ರಾಪಂ ನೂತನ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.

    ಗ್ರಾಪಂಗಳಿಗೆ ನೇಮಕಗೊಂಡ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳಿಗೆ ಶನಿವಾರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಶಾಸಕದ್ವಯರು, ಆಡಳಿತದಲ್ಲಿ ಯಾವುದೇ ಗೊಂದಲವಿಲ್ಲದಂತೆ ಪಾರದರ್ಶಕವಾಗಿರಬೇಕೆಂದು ಸೂಚಿಸಿದರು.

    ಈಗಾಗಲೇ ಗ್ರಾಪಂ ಸಭೆ ನಡೆಸಿರುವವರು ಅಭಿಪ್ರಾಯ ಹಂಚಿಕೊಂಡು ಪಂಚಾಯಿತಿ ಆರ್ಥಿಕ ಕ್ಷಮತೆ, ಸರ್ಕಾರದ ವಿವಿಧ ಯೋಜನೆಯಿಂದ ಬಂದ ಅನುದಾನಗಳ ಪಟ್ಟಿ, ಕ್ರಿಯಾಯೋಜನೆ ಪಟ್ಟಿ, ಕ್ಯಾಶ್​ಬುಕ್ ಪರಿಶೀಲಿಸಲಾಗಿದೆ. ಹಿಂದಿನ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಹಾಲಪ್ಪ, ಪೂರ್ತಿ ವಿಶ್ವಾಸ ಬೇಡ. ಉತ್ತಮ ಸಲಹೆಯನ್ನಷ್ಟೇ ಸ್ವೀಕರಿಸಿ ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.

    ಒಬ್ಬರಿಗೆ ಮೂರು ಪಂಚಾಯಿತಿ ಬೇಡ: ಆಡಳಿತಾಧಿಕಾರಿಗಳ ನೇಮಕದಲ್ಲಿ ಅವರ ಗ್ರೇಡ್ ಮೇಲೆ ಆಯ್ದ ಅಧಿಕಾರಿಗಳಿಗೆ ಎರಡು, ಮೂರು ಗ್ರಾಪಂಗಳನ್ನು ನೀಡಲಾಗಿದೆ. 3 ಗ್ರಾಪಂಗಳನ್ನು ಒಬ್ಬರಿಗೆ ನಿರ್ವಹಿಸಲು ಸಾಧ್ಯವಿಲ್ಲ. ಬೇರೆಯವರಿಗೆ ನೀಡಿ. ಅಧಿಕಾರಿಗಳನ್ನು ಹತ್ತಿರದ ಪಂಚಾಯಿತಿಗೆ ಆಡಳಿತಾಧಿಕಾರಿಯಾಗಿ ನೇಮಿಸುವಂತೆ ಶಾಸಕ ಹಾಲಪ್ಪ ತಹಸೀಲ್ದಾರ್ ವಿ.ಎಸ್.ರಾಜೀವ್​ಗೆ ಸೂಚಿಸಿದರು.

    ಹೊಸನಗರದಲ್ಲಿ 6 ಸಕ್ರಿಯ ಪ್ರಕರಣಗಳು: ತಾಲೂಕಿನಲ್ಲಿ ಈಗಾಗಲೇ 35 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 29 ಜನ ಗುಣಮುಖರಾಗಿದ್ದು, ಕೇವಲ 6 ಸೋಂಕಿತ ಪ್ರಕರಣಗಳು ಮಾತ್ರ ಸಕ್ರಿಯವಾಗಿದೆ ಎಂದು ಸಭೆಗೆ ತಿಳಿಸಿದ ಟಿಎಚ್​ಒ ಡಾ. ಸುರೇಶ್, ಸೋಂಕು ತಡೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಆಡಾಳಿತಾಧಿಕಾರಿಗಳಿಗೆ ವಿವರಿಸಿದರು.

    ಕರೊನಾ ಸಮಸ್ಯೆ ಬಂದಾಗನಿಂದ ರಜೆ ಇಲ್ಲ: ಒಂದೇ ಸಮನೆ ಕೆಲಸ ಮಾಡುತ್ತಿದ್ದೇವೆ. ನಮಗೆ ರಜೆ ಬೇಕು. ಅಲ್ಲದೆ ಬೇರೆ ಸೇನಾನಿಗಳಿಗೆ ನೀಡಿದಂತೆ ನಮಗೂ ವಿಮಾ ಸೌಲಭ್ಯ ಒದಗಿಸಿ ಎಂಬ ಒತ್ತಾಯ ಪಿಡಿಒಗಳಿಂದ ಕೇಳಿಬಂತು. ಇದಕ್ಕೆ ಧ್ವನಿಗೂಡಿಸಿದ ಶಾಸಕದ್ವಯರು ಈ ಸಂಬಂಧ ಸರ್ಕಾರದೊಂದಿಗೆ ರ್ಚಚಿಸುವ ಭರವಸೆ ನೀಡಿದರು.

    ತಾಪಂ ಅಧ್ಯಕ್ಷ ವಿರೇಶ್ ಆಲವಳ್ಳಿ, ಜಿಪಂ ಸದಸ್ಯ ಸುರೇಶ ಸ್ವಾಮಿರಾವ್, ತಾಪಂ ಇಒ ಸಿ.ಆರ್.ಪ್ರವೀಣ್ ಇತರರಿದ್ದರು.

    ಚೀನಾ ಮಾಡುತ್ತಿರುವ ತಕರಾರಿಗೆ ಗಡಿಯಲ್ಲಿ ನಮ್ಮ ಸೈನಿಕರು ಉತ್ತರ ನೀಡುತ್ತಾರೆ. ಆದರೆ ಚೀನಾ ಬಿಟ್ಟ ಕರೊನಾ ವೈರಸ್ ದೇಶದೊಳಗಿನ ಜನರನ್ನು ಸೇರಿಕೊಂಡಿದೆ. ಅದನ್ನು ಹಿಮ್ಮೆಟ್ಟಿಸಲು ಪ್ರತಿಯೊಬ್ಬರೂ ಸೈನಿಕರಂತೆ ಕೆಲಸ ಮಾಡಬೇಕಿದೆ.

    | ಶಾಸಕ ಆರಗ ಜ್ಞಾನೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts