More

    ಉಸಿರಾಡುತ್ತಿಲ್ಲ 7 ವೆಂಟಿಲೇಟರ್

    ಹುಬ್ಬಳ್ಳಿ: ಧಾರವಾಡ ಜಿಲ್ಲಾದ್ಯಂತ ಒಟ್ಟು 190 ವೆಂಟಿಲೇಟರ್​ಗಳಿದ್ದು, ಈ ಪೈಕಿ 7ಕ್ಕೆ ಜೀವವಿಲ್ಲ! 8 ಸರ್ಕಾರಿ ಆಸ್ಪತ್ರೆಗಳಲ್ಲಿ 145 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 45 ವೆಂಟಿಲೇಟರ್​ಗಳಿವೆ. ಹುಬ್ಬಳ್ಳಿಯ ಕಿಮ್ಸ್​ನಲ್ಲಿ 110, ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ 22, ಹುಬ್ಬಳ್ಳಿಯ ರೈಲ್ವೆ ಆಸ್ಪತ್ರೆಯಲ್ಲಿ 6, ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ 3 ಹಾಗೂ ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ 4 ವೆಂಟಿಲೇಟರ್​ಗಳಿವೆ.

    ಕಲಘಟಗಿ ಹಾಗೂ ನವಲಗುಂದ ಆಸ್ಪತ್ರೆಯ ವೆಂಟಿಲೇಟರ್​ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ. ಏಕೆಂದರೆ, ಇವುಗಳ ಕಾರ್ಯ ನಿರ್ವಹಣೆಗೆ ಅರಿವಳಿಕೆ ತಜ್ಞ ವೈದ್ಯರ ಅಗತ್ಯತೆ ಗ್ರಾಮೀಣ ಭಾಗದಲ್ಲಿದೆ. ಆದರೆ, ಈ ಎರಡೂ ತಾಲೂಕು ಆಸ್ಪತ್ರೆಗಳಲ್ಲಿ ಇಂಥ ತಜ್ಞ ವೈದ್ಯರು ಲಭ್ಯವಿಲ್ಲ.

    ‘ಎರಡೂವರೆ ಲಕ್ಷ ರೂಪಾಯಿ ಸಂಬಳ ನೀಡುತ್ತೇವೆಂದರೂ ಅರಿವಳಿಕೆ ತಜ್ಞ ವೈದ್ಯರು ಲಭಿಸುತ್ತಿಲ್ಲ’ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.

    ವೆಂಟಿಲೇಟರ್​ಗಳನ್ನು ಮೊದಲು ಅಷ್ಟೊಂದು ಬಳಕೆ ಮಾಡುತ್ತಿರಲಿಲ್ಲ. ಈಗ ಕರೊನಾ ಸೋಂಕುಳ್ಳವರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಹಾಗಾಗಿ ವೆಂಟಿಲೇಟರ್​ಗಳ ಅಗತ್ಯ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ, ಈ ಎರಡೂ ಆಸ್ಪತ್ರೆಗಳಲ್ಲಿರುವ ಏಳೂ ವೆಂಟಿಲೇಟರ್​ಗಳನ್ನು ತಜ್ಞ ಸಿಬ್ಬಂದಿ ಇರುವ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದರೆ ಸಾಕಷ್ಟು ಜನರ ಸಾವನ್ನು ತಡೆಯಬಹುದಿತ್ತಲ್ಲ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತಾಗಲಿ ಎಂಬುದು ಪ್ರಜ್ಞಾವಂತ ನಾಗರಿಕರ ನಿರೀಕ್ಷೆಯಾಗಿದೆ.

    ಗುಣಮಟ್ಟದಿಂದ ಕೂಡಿಲ್ಲವೆಂಬುದು ನಿಜವಲ್ಲ

    ಪಿಎಂ ಕೇರ್ಸ್ ನಿಧಿಯಲ್ಲಿ ಕಿಮ್ಸ್​ಗೆ ವೆಂಟಿಲೇಟರ್​ಗಳನ್ನು ನೀಡಲಾಗಿದೆ. ಇವು ಗುಣಮಟ್ಟದಿಂದ ಕೂಡಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಕಿಮ್್ಸ ನಲ್ಲಿ ಸರಿಯಾಗಿ ವೆಂಟಿಲೇಟರ್ ಬಳಕೆ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪ ಮೊದಲಿನಿಂದಲೂ ಇದೆ. ಅಗತ್ಯ ಸಿಬ್ಬಂದಿ, ಬೆಡ್​ಗಳ ಅಗತ್ಯವೂ ಇದೆ. ‘ಹಲ್ಲಿದ್ದರೆ ಕಡ್ಲೆ ಇಲ್ಲ, ಕಡ್ಲೆ ಇದ್ರೆ ಹಲ್ಲಿಲ್ಲ’ ಎನ್ನುವ ಪರಿಸ್ಥಿತಿ ಕಿಮ್ಸ್​ನಲ್ಲಿದೆ. ಇದನ್ನು ಎಲ್ಲರೂ ಮನಗಾಣಬೇಕು ಎನ್ನುತ್ತಾರೆ ವೈದ್ಯಕೀಯ ಸಿಬ್ಬಂದಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts