More

    ಉಳ್ಳಾಗಡ್ಡಿ ಉತ್ಪಾದನೆ ಇಳಿಮುಖ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಉಳ್ಳಾಗಡ್ಡಿ ಬೆಳೆ ನೆಲಕಚ್ಚಿದ್ದು, ಮಾರುಕಟ್ಟೆಗೆ ಆವಕ ತೀರಾ ಕಡಿಮೆಯಾಗಿದೆ. ಪ್ರತಿ ವರ್ಷ ಇದೇ ಸೀಸನ್​ನಲ್ಲಿ ನಿತ್ಯ ಏನಿಲ್ಲವೆಂದರೂ 10 ಸಾವಿರದಿಂದ 20 ಸಾವಿರ ಕ್ವಿಂಟಾಲ್​ವರೆಗೆ ಆವಕವಾಗುತ್ತಿದ್ದ ಉಳ್ಳಾಗಡ್ಡಿ ಈ ವರ್ಷ ಬರಿ ಸಾವಿರ ಕ್ವಿಂಟಾಲ್​ಗೆ ಇಳಿದಿದೆ.

    ವರ್ತಕರು ಸ್ಥಳೀಯವಾಗಿಯೇ ಬಳಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಗುರುವಾರ ಪ್ರತಿ ಕ್ವಿಂಟಾಲ್​ಗೆ ಕನಿಷ್ಠ 300 ರೂ.ನಿಂದ ಗರಿಷ್ಠ 2700 ರೂ. ವರೆಗೆ ಮಾರಾಟವಾಗಿದೆ. ಒಟ್ಟು 1100 ಕ್ವಿಂಟಾಲ್ ಮಾತ್ರ ಆವಕವಾಗಿತ್ತು.

    ಪುಣೆ ಉಳ್ಳಾಗಡ್ಡಿ ಮಾತ್ರ ಹೆಚ್ಚು ಆವಕವಾಗುತ್ತಿದೆ. ಗುರುವಾರ ಸುಮಾರು 2000 ಕ್ವಿಂಟಾಲ್ ಆವಕವಾಗಿದ್ದು, ಪ್ರತಿ ಕ್ವಿಂಟಾಲ್​ಗೆ 1000ರೂ.ನಿಂದ 4300 ರೂ. ವರೆಗೆ ಮಾರಾಟವಾಗಿದೆ. ಮಳೆಗೆ ಸಿಕ್ಕು ಬಹುತೇಕ ಬೆಳೆ ಇನ್ನೂ ಹಸಿಹಸಿಯಾಗಿದೆ. ಹಾಗಾಗಿ ಹೆಚ್ಚು ಬೆಲೆ ಸಿಗುತ್ತಿಲ್ಲ. ಕೆಲ ರೈತರು ಹೆಚ್ಚು ಒಣಗಿಸದೇ ತರುತ್ತಿರುವುದರಿಂದ ಮಾದರಿ ದರ 2000 ರೂ. ದಾಟುತ್ತಿಲ್ಲ ಎಂಬುದು ವರ್ತಕರ ಹೇಳಿಕೆ.

    ಅತಿವೃಷ್ಟಿಗೆ ಹಾನಿ: 2019 ಹಾಗೂ 2020 ಎರಡೂ ವರ್ಷ ಅತಿಯಾದ ಮಳೆಗೆ ಉಳ್ಳಾಗಡ್ಡಿ ಬೆಳೆ ಹಾಳಾಗಿದೆ. 2020ರ ಮುಂಗಾರಿನಲ್ಲಿ ಧಾರವಾಡ ಜಿಲ್ಲೆಯಲ್ಲಿ 28905 ಹೆಕ್ಟೇರ್​ನಲ್ಲಿ ಉಳ್ಳಾಗಡ್ಡಿ ಬಿತ್ತನೆಯಾಗಿತ್ತು. ಅಂದಾಜು 5.78 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ, ಸುಮಾರು 14041 ಹೆಕ್ಟೇರ್​ನಲ್ಲಿನ ಉಳ್ಳಾಗಡ್ಡಿ ಮಳೆಯಿಂದ ನಷ್ಟವಾಗಿದೆ. ಕಳೆದ ವರ್ಷ 2019ರಲ್ಲಿ ಕೂಡ 17 ಸಾವಿರ ಹೆಕ್ಟೇರ್​ನಷ್ಟು ಉಳ್ಳಾಗಡ್ಡಿ ಬೆಳೆ ನಷ್ಟವಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಉಳ್ಳಾಗಡ್ಡಿ ಬೆಳೆಗಾರರು ಸತತ ಎರಡು ವರ್ಷ ತೀವ್ರ ಹಾನಿ ಅನುಭವಿಸುವಂತಾಗಿದೆ.

    ಸದ್ಯ ಹುಬ್ಬಳ್ಳಿ ಚಿಲ್ಲರೆ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಪ್ರತಿ ಕಿಲೋಗೆ 40- 50 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಪುಣೆ ಇಲ್ಲವೇ ಒಂದಿಷ್ಟು ಒಣಗಿದ, ಗುಣಮಟ್ಟದ ಸ್ಥಳೀಯ ಉಳ್ಳಾಗಡ್ಡಿಗೆ ಹೆಚ್ಚು ಬೆಲೆ ಇದೆ. ಎಪಿಎಂಸಿಯಲ್ಲಿ ಕಡಿಮೆ ದರ ಇದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಗ್ರಾಹಕರು ಹೆಚ್ಚು ಬೆಲೆ ತೆರಬೇಕಿದೆ.

    ಮೆಣಸಿನಕಾಯಿ ಬೆಳೆಯೂ ಹಾನಿ: ಧಾರವಾಡ ಜಿಲ್ಲೆಯಲ್ಲಿ ಕೆಂಪು ಮೆಣಸಿನಕಾಯಿ ಕೂಡ ಈ ಬಾರಿ ಮಳೆಗೆ ಸಿಕ್ಕು ಹಾನಿಯಾಗಿದೆ. 2020ರ ಮುಂಗಾರಿನಲ್ಲಿ 28211 ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದ್ದ ಮೆಣಸಿನಕಾಯಿ ಪೈಕಿ 4804 ಹೆಕ್ಟೇರ್​ನಲ್ಲಿನ ಬೆಳೆ ಅತಿವೃಷ್ಟಿಗೆ ಸಿಕ್ಕು ನಷ್ಟವಾಗಿದೆ. ಇದು ಉತ್ಪಾದನೆ ಮೇಲೂ ಪರಿಣಾಮ ಬೀರಲಿದೆ.

    ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಬಿತ್ತನೆಯಾಗಿದ್ದ ಅರ್ಧದಷ್ಟು ಉಳ್ಳಾಗಡ್ಡಿ ಅತಿವೃಷ್ಟಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದು ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಅದೇ ರೀತಿ ಮೆಣಸಿನಕಾಯಿ ಬೆಳೆಯೂ ಒಂದಿಷ್ಟು ಹಾಳಾಗಿದೆ.

    | ಕೆ.ಸಿ. ಭದ್ರಣ್ಣವರ

    ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಧಾರವಾಡ (ಪ್ರಭಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts