More

    ಉಳ್ಳಾಗಡ್ಡಿ ಬೆಳೆದವರಿಗೆ ಕಣ್ಣೀರೇ ಗತಿ!

    ಲಕ್ಷ್ಮೇಶ್ವರ: ತೇವಾಂಶ ಹೆಚ್ಚಳ, ರೋಗ ಬಾಧೆ, ಬೆಲೆ ಕುಸಿತದಿಂದ ಉಳ್ಳಾಗಡ್ಡಿ ಬೆಳೆದ ರೈತರು ಈ ವರ್ಷವೂ ಮತ್ತೆ ಕಣ್ಣೀರು ಸುರಿಸುವ ಪರಿಸ್ಥಿತಿ ನಿರ್ವಣವಾಗಿದೆ.

    ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕು ವ್ಯಾಪ್ತಿಯ ಖುಷ್ಕಿ ಮತ್ತು ನೀರಾವರಿ ಸೇರಿ ಸುಮಾರು 5000 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ತಾಲೂಕಿನ ಪುಟಗಾಂವ್ ಬಡ್ನಿ, ಅಡರಕಟ್ಟಿ, ಲಕ್ಷ್ಮೇಶ್ವರ, ಮಾಗಡಿ, ಯಳವತ್ತಿ, ಬಟ್ಟೂರ, ಗೊಜನೂರ, ರಾಮಗೇರಿ, ಬಸಾಪುರ ಮತ್ತಿತರ ಕಡೆ ರೈತರು ಉಳ್ಳಾಗಡ್ಡಿ ಬೆಳೆದಿದ್ದಾರೆ.

    ಕಳೆದ ವರ್ಷ ಉಳ್ಳಾಗಡ್ಡಿಗೆ ಉತ್ತಮ ಬೆಲೆ ಸಿಕ್ಕಿತ್ತು. ಹೀಗಾಗಿ, ಈ ವರ್ಷ ಬಿತ್ತನೆ ವೇಳೆ ಬೀಜದ ದರ ಹೆಚ್ಚಿದ್ದರೂ ಮೇ ತಿಂಗಳಲ್ಲಿ ನೀರಾವರಿ ಮತ್ತು ಜೂನ್​ನಲ್ಲಿ ಖುಷ್ಕಿ ಜಮೀನಿನಲ್ಲಿ ಉಳ್ಳಾಗಡ್ಡಿ ಬೆಳೆದಿದ್ದಾರೆ. ಪ್ರಾರಂಭದಲ್ಲಿ ಮಳೆ ಕೊರತೆಯಿಂದ ಬೆಳೆ ಸಮೃದ್ಧವಾಗಿ ಬೆಳೆಯದಿದ್ದರೂ ನಂತರ ಸುರಿದ ಮಳೆಯಿಂದ ಹರ್ಷಗೊಂಡ ರೈತರು ಈ ವರ್ಷ ಉತ್ತಮ ಬೆಲೆ ಸಿಗಬಹುದು ಎಂಬ ಆಶಾಭಾವನೆ ಹೊಂದಿದ್ದರು.

    ಉತ್ತಮ ಇಳುವರಿ ಪಡೆಯಲೆಂದು ಗೊಬ್ಬರ, ಕ್ರಿಮಿನಾಶಕ ಹಾಗೂ ಔಷಧೋಪಚಾರಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದಾರೆ. ಆಗಸ್ಟ್ ಮೊದಲ ವಾರ ಬಿಟ್ಟೂ ಬಿಡದೆ ಸುರಿದ ಮಳೆ, ಹವಾಮಾನ ವೈಪರೀತ್ಯದಿಂದ ಕೊಳೆರೋಗಕ್ಕೆ ತುತ್ತಾದ ಬೆಳೆ ಸುಧಾರಿಸಲೇ ಇಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಮತ್ತೆ ಪ್ರಾರಂಭವಾದ ಮಳೆಗೆ ಜಮೀನಿನಲ್ಲಿ ನೀರು ನಿಂತು ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ವಣವಾಗಿದೆ.

    ಮಳೆಯಿಂದಾಗಿ ಗಡ್ಡೆಗಳು ನೋಡಲು ಉತ್ತಮವಾಗಿ ಕಂಡರೂ ಒಳಗಡೆ ಕೊಳೆಯುತ್ತಿವೆ. ಹೀಗಾಗಿ, ಬಹುತೇಕ ಉಳ್ಳಾಗಡ್ಡಿ ಕೊಳೆತಿದ್ದು ಶೇ. 25ರಷ್ಟು ಫಸಲು ಮಾತ್ರ ರೈತರ ಕೈ ಸೇರುತ್ತಿದೆ. ಉತ್ತಮ ಗಡ್ಡೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಗುಣಮಟ್ಟವಿಲ್ಲ ಎಂಬ ಕಾರಣಕ್ಕೆ ಕ್ವಿಂಟಾಲ್​ಗೆ ಕೇವಲ 500-1000 ರೂ.ವರೆಗೆ ಮಾರಾಟವಾಗುತ್ತಿದೆ. ಇದರಿಂದ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.

    ಪ್ರತಿ ಎಕರೆಗೆ ಕನಿಷ್ಠ 20 ಸಾವಿರ ರೂ. ಖರ್ಚು ಮಾಡಿ ಉಳ್ಳಾಗಡ್ಡಿ ಬೆಳೆದಿದ್ದೇವು. ಉತ್ತಮ ಬೆಲೆ ಸಿಗಬಹುದೆಂದು ಕನಸು ಕಂಡಿದ್ದೇವು. ಕೊಳೆರೋಗ ಮತ್ತು ಬೆಲೆ ಕುಸಿತದಿಂದ ನಷ್ಟವಾಗಿದೆ. ನಮ್ಮ ಗೋಳು ಕೇಳೋರ್ಯಾರು?
    | ವೀರಭದ್ರಪ್ಪ ಜಿಡ್ಡಿ, ದ್ಯಾಮಣ್ಣ ಚನ್ನೂರ, ರವಿ ಹವಳದ, ಉಳ್ಳಾಗಡ್ಡಿ ಬೆಳೆದವರು

    ಸರ್ಕಾರ ಮೀನಮೇಷ ಮಾಡದೆ ಬೆಳೆ ಹಾನಿ, ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಕೂಡಲೇ ಪ್ಯಾಕೇಜ್ ಘೊಷಿಸಿ ಅವರ ನೆರವಿಗೆ ಧಾವಿಸಬೇಕು. ತೋಟಗಾರಿಕೆ ಇಲಾಖೆಯವರು ಕೂಡಲೇ ಬೆಳೆ ಹಾನಿ ಸಮೀಕ್ಷೆ ಮಾಡಿಸಬೇಕು. ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ಎಲ್ಲ ರೈತರಿಗೆ ಎಕರೆಗೆ ಕನಿಷ್ಠ 20 ಸಾವಿರ ರೂ. ಬೆಳೆ ನಷ್ಟ ಪರಿಹಾರ ಕೊಡಬೇಕು.
    | ಮಹೇಶ ಹೊಗೆಸೊಪ್ಪಿನ, ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ

    ಖುಷ್ಕಿ ಜಮೀನಿಗಿಂತ ನೀರಾವರಿ ಉಳ್ಳಾಗಡ್ಡಿ ಬೆಳೆಯು ಕೊಳೆ ರೋಗ, ಅತಿವೃಷ್ಟಿಯಿಂದ ಹಾಳಾಗಿದೆ. ಬೆಳೆ ಹಾನಿಗೀಡಾದ ರೈತರು ಸೂಕ್ತ ದಾಖಲೆಗಳೊಂದಿಗೆ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಸಮಯಾವಕಾಶವಿದೆ. ಹಾನಿಗೀಡಾದ ಬೆಳೆಯ ಸಮೀಕ್ಷೆ ಮಾಡಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೆಳೆ ಹಾನಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
    | ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts