More

    ಉದ್ಯೋಗ ಖಾತ್ರಿ… ಯಾರಿಗೆ ಬೇಕ್ರಿ..

    ಹುಬ್ಬಳ್ಳಿ: ಲಾಕ್​ಡೌನ್ ಜಾರಿಯಾಗಿ ನಗರ ಪ್ರದೇಶದಿಂದ ಹಳ್ಳಿಯತ್ತ ಮರು ವಲಸೆ ಹೆಚ್ಚುತ್ತಿದೆ. ತಮ್ಮೂರಿಗೆ ಮರಳಿದ ಸಾಕಷ್ಟು ಜನರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಆಸರೆಯಾಗಿದೆ. ಆದರೆ, ಕೆಲವೆಡೆ ನಿರೀಕ್ಷಿತ ಮಟ್ಟದಲ್ಲಿ ಜನರು ಕೆಲಸಕ್ಕೆ ಬಾರದೆ ಕಾಮಗಾರಿಗಳು ಕುಂಟುತ್ತ ಸಾಗಿವೆ.

    ಕಳೆದ ಎರಡು ತಿಂಗಳಿಂದ ಕರೊನಾ ಭಯದಿಂದ ನಗರಗಳನ್ನು ತೊರೆಯುತ್ತಿರುವ ಅನೇಕರಿಗೆ ತಮ್ಮ ಹಳ್ಳಿಯೇ ಈಗ ನೆರವಾಗಿದೆ. ಸರ್ಕಾರ ಕೂಡ ಈ ಮರುವಲಸೆ ಹಿನ್ನೆಲೆಯಲ್ಲಿ ನರೇಗಾ ಯೋಜನೆ ಬಲಪಡಿಸಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ವಿಧದ ಕೆಲಸಗಳನ್ನು ಸೃಷ್ಟಿಸಿದೆ. ಆದರೆ, ಹೆಚ್ಚಿನ ಜನರು ಇವುಗಳು ಪ್ರಯೋಜನ ಪಡೆಯಲು ಮುಂದೆ ಬರುತ್ತಿಲ್ಲ.

    ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯಿತಿಗಳ ಪೈಕಿ ಕೋಳಿವಾಡ, ಉಮಚಗಿ, ಭಂಡಿವಾಡ, ಕಿರೇಸೂರ, ಮಂಟೂರ, ಕುಸುಗಲ್ಲ, ಇಂಗಳಹಳ್ಳಿ ಮುಂತಾದ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸಗಳು ಭರ್ಜರಿಯಾಗಿ ನಡೆದಿವೆ. ಉಳಿದ ಕಡೆಗಳಲ್ಲಿ ಮಾತ್ರ ಜನರ ಸ್ಪಂದನೆ ಅಷ್ಟಾಗಿ ಸಿಕ್ಕಿಲ್ಲ.

    ಏನೇನು ಕೆಲಸ?: ಜಲಶಕ್ತಿ ಅಭಿಯಾನದಡಿ ಕೃಷಿ ಹೊಂಡ, ಬದು ನಿಮಾಣ, ಇಂಗುಗುಂಡಿ, ಪೌಷ್ಟಿಕ ತೋಟ, ವೈಯಕ್ತಿಕ ಬೋರವೆಲ್ ಮರುಪೂರಣ, ದನ, ಮೇಕೆ, ಕೋಳಿ ಶೆಡ್ ನಿರ್ಮಾಣ ಕಾರ್ಯಕ್ರಮಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ.

    ಪ್ರತಿ ಗ್ರಾಪಂನಲ್ಲಿ 50 ಬದುವಿನಂತೆ ಈ ವರ್ಷ ತಾಲೂಕಿನಲ್ಲಿ 1300 ಬದು ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಸದ್ಯಕ್ಕೆ 144 ಕಡೆ ಮಾತ್ರ ಕೆಲಸ ನಡೆದಿದೆ. ಮಳೆ ಆರಂಭವಾಗುವ ಜೂನ್ ವೇಳೆಗೆ ಬದು ನಿರ್ಮಾಣ ಪೂರ್ತಿ ಮಾಡಬೇಕಾಗಿತ್ತು. ಆದರೆ, ಕರೊನಾ ಭಯದಿಂದ ಹೆಚ್ಚಿನ ಜನರು ಕೆಲಸಕ್ಕೆ ಬಾರದ್ದರಿಂದ ಕಾಮಗಾರಿಗೆ ಹಿನ್ನಡೆಯಾಗಿದೆ.

    ತಾಲೂಕಿನ ವಿವಿಧ ಗ್ರಾಪಂನಲ್ಲಿ ಪ್ರಸ್ತುತ 782 ಜನ ನಿತ್ಯ ನರೇಗಾ ಉದ್ಯೋಗಕ್ಕೆ ಬರುತ್ತಿದ್ದಾರೆ. ಕೋಳಿವಾಡದಲ್ಲಿ 200, ಮಲ್ಲಿಗವಾಡ 200, ಕುಸುಗಲ್ಲ 100 ಹೀಗೆ ಬೇರೆಬೇರೆ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಹುಬ್ಬಳ್ಳಿ ಸಮೀಪದ ಗ್ರಾಪಂಗಳಲ್ಲಿ ಉದ್ಯೋಗ ಕೇಳುವವರು ಕಡಿಮೆಯಾಗಿದ್ದಾರೆ.

    ಉದ್ಯೋಗ ಇದೆ: ಗ್ರಾಪಂಗೆ ಉದ್ಯೋಗ ಕೇಳಿಕೊಂಡು ಬಂದ ಯಾರಿಗೂ ಇಲ್ಲ ಎನ್ನುವುದಿಲ್ಲ. ಪ್ರತಿ ಗ್ರಾಪಂನಲ್ಲೂ ಸಾಕಷ್ಟು ಕೆಲಸ ಇದೆ. ಹೆಸರು ನೋಂದಣಿ ಮಾಡಿಕೊಂಡರೆ 15ದಿನದಲ್ಲಿ ಕೆಲಸ ಕೊಡಲಾಗುತ್ತದೆ. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಗ್ರಾಮೀಣ ಯುವಕರು, ಕಾರ್ವಿುಕರು ಇದರ ಬಗ್ಗೆ ಗಮನಹರಿಸಬೇಕು ಎಂದು ತಾಪಂ ಇಒ ಗಂಗಾಧರ ಕಂದಕೂರ ಮನವಿ ಮಾಡುತ್ತಾರೆ.

    ನರೇಗಾ ಉದ್ಯೋಗಾರ್ಥಿಗಳಿಗೆ ಕೋವಿಡ್ ನಿಯಮಾವಳಿ ಪ್ರಕಾರ ಕೆಲಸ ನೀಡಲಾಗುತ್ತಿದೆ. ಒಂದೇ ಕಡೆ ಗುಂಪು ಗೂಡುವುದನ್ನು ತಪ್ಪಿಸಲು ಬೇರೆಬೇರೆ ಕೆಲಸಗಳಲ್ಲಿ ನಿರತರಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಯಾರಿಗೂ ಕೋವಿಡ್ ಭಯ ಬೇಡ. ಬರುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿ, ಅವರಿಂದ ಪ್ರಮಾಣ ಸ್ವೀಕರಿಸಿದ ನಂತರವೇ ಉದ್ಯೋಗ ಕೊಡಲಾಗುತ್ತದೆ. ಹಾಗಾಗಿ ಯಾರೂ ಭಯಪಡದೇ ಉದ್ಯೋಗ ಪಡೆದುಕೊಳ್ಳಬೇಕು ಎನ್ನುತ್ತಾರೆ ಅವರು.

    ಈ ವರ್ಷ ಹುಬ್ಬಳ್ಳಿ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಶಕ್ತಿ ಅಭಿಯಾನದಡಿ 1964 ಕಾಮಗಾರಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ 250 ಕಾಮಗಾರಿಗಳು ಈಗಾಗಲೇ ಆರಂಭವಾಗಿವೆ. ವಾರ್ಷಿಕ 3.75 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕಳೆದ ಏಪ್ರಿಲ್ ಮಾಹೆಯಲ್ಲಿ 37314 ಮಾನವ ದಿನಗಳ ಗುರಿಯಲ್ಲಿ ಶೇ. 60ರಷ್ಟು ಸಾಧನೆಯಾಗಿದೆ.

    ಮಧ್ಯವರ್ತಿಗಳಿಲ್ಲ: ನರೇಗಾ ಯೋಜನೆಯಡಿ ಕೆಲಸ ಮಾಡುವವರ ಬ್ಯಾಂಕ್ ಖಾತೆಗೆ 15 ದಿನದಲ್ಲಿ ನೇರವಾಗಿ ಅವರ ಹಣ ಜಮಾ ಆಗುತ್ತದೆ. ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡಲಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

    ತಮ್ಮದೆ ಹೊಲಕ್ಕೆ ಹೋಗುತ್ತಾರೆ: ನಗರದಿಂದ ವಾಪಸ್ ಬಂದ ಅನೇಕರು ತಮ್ಮದೆ ಹೊಲಕ್ಕೆ ಹೊರಟಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಇದುವರೆಗೆ ತಮ್ಮ ಹೊಲದ ಚಕಬಂದಿ ಬಗ್ಗೆ ತಲೆಕೆಡಿಸಿಕೊಳ್ಳದವರು ಈಗ ಜಮೀನಿನ ಹದ್ದುಬಸ್ತು ಮಾಡಿಕೊಳ್ಳುತ್ತಿದ್ದಾರೆ. ರೆಂಟೆ, ಕುಂಟೆ ಹೊಡೆದು ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಇಂಗಳಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ಪ್ರಭುಗೌಡ ಸಂಕಾಗೌಡಶಾನಿ ಹೇಳುತ್ತಾರೆ.

    ಪ್ರತಿ ಗ್ರಾಪಂನಲ್ಲಿ ಎಷ್ಟೇ ಜನರು ಬಂದರೂ ಉದ್ಯೋಗ ಕೊಡಲು ಸಿದ್ಧರಿದ್ದೇವೆ. ಮಹಿಳಾ ಕಾಯಕೋತ್ಸವ ಹಾಗೂ ದುಡಿಯೋಣು ಬಾರಾ ಅಭಿಯಾನದ ಮೂಲಕ ಈ ಯೋಜನೆಯಡಿ ಜನರು ಪಾಲ್ಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. ನಿರುದ್ಯೋಗಿಗಳು ಇದರ ಪ್ರಯೋಜನ ಪಡೆಯಬಹುದು.
    | ಗಂಗಾಧರ ಕಂದಕೂರ ತಾಪಂ ಇಒ ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts