More

    ಉದ್ಯೋಗದ ಆಮಿಶವೊಡ್ಡಿ ರೂ. 57.14 ಲಕ್ಷ ಪೀಕಿದವರು ಅಂದರ್

    ಕಾರವಾರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಇ-ಮೇಲ್​ಗಳ ಮೂಲಕ ಆಮಿಶವೊಡ್ಡಿ ಜನರಿಗೆ ವಂಚಿಸುತ್ತಿದ್ದ ದೇಶದ ಕುಖ್ಯಾತ ಸೈಬರ್ ಕ್ರೖೆಂ ಜಾಲವನ್ನು ಇಲ್ಲಿನ ಸೈಬರ್ ಇಕನಾಮಿಕ್ ಕ್ರೖೆಂ(ಸಿಎನ್​ಇ) ವಿಭಾಗದ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೋಲಾರ ಮೂಲದ ಅಶೋಕ ನಾರಾಯಣಸ್ವಾಮಿ, ಅಸ್ಸಾಂ ಮೂಲದ ಬುಲ್ಲೈಂಗಿರ್ ಹಲಮ್ ತ್ರಿಪುರಾದ ರ್ದತಿಬೀರ್ ಹಲಮ್ , ಮಣಿಪುರ ವರಿಂಗಮ್ ಪುಂಗಶೋಕ್ ಬಂಧಿತರು. ಎಲ್ಲರೂ ಸದ್ಯ ಬೆಂಗಳೂರಿನ ನಿವಾಸಿಗಳಾಗಿದ್ದು, ಅವರನ್ನು ಅಲ್ಲಿಯೇ ಬಂಧಿಸಿ ಕಾರವಾರಕ್ಕೆ ಕರೆತರಲಾಗಿದೆ.

    ಅವರ ವಿವಿಧ ಬ್ಯಾಂಕ್​ಗಳ ಒಟ್ಟು 34 ಖಾತೆಗಳನ್ನು ಜಪ್ತಿ ಮಾಡಲಾಗಿದೆ. ವಿವಿಧ ಖಾತೆಗಳಿಂದ 2.61 ಲಕ್ಷ ರೂ., 24 ಸಾವಿರ ನಗದು, ಸ್ವೈಪ್ ಮಶಿನ್, ಬಯೋಮೆಟ್ರಿಕ್ ಪ್ರಿಂಟಿಂಗ್ ಮತ್ತು ಥಂಬ್ ಯಂತ್ರ, 24 ಎಟಿಎಂಗಳು, 24 ಚೆಕ್​ಬುಕ್​ಗಳು, 23 ಮೊಬೈಲ್​ಗಳು, 2 ಲ್ಯಾಪ್​ಟಾಪ್​ಗಳನ್ನು ವಶಕ್ಕೆ ಪಡೆಯಲಾಗಿದೆ.

    ಬಂಧಿಸಿದ್ದು ಹೇಗೆ?: ಹೊನ್ನಾವರ ಗುಣವಂತೆ ಮುಗಳಿಯ ನೇತ್ರಾವತಿ ನಾಗಪ್ಪ ಗೌಡ ಎಂಬ ನರ್ಸ್​ಗೆ ಅಮೆರಿಕಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಇ ಮೇಲ್ ಕಳಿಸಿ ಅವರಿಂದ ವಿವಿಧ ಶುಲ್ಕ ಎಂದು 57.14 ಲಕ್ಷ ರೂಪಾಯಿ ಪಡೆದು ವಂಚಿಸಿದ್ದರು. ಈ ಸಂಬಂಧ ತಿಂಗಳ ಹಿಂದೆ ಕಾರವಾರ ಸಿಎನ್​ಇ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಯುವತಿ ಹಣ ಜಮಾ ಮಾಡಿದ ತ್ರಿಪುರಾ, ಅಸ್ಸಾಂ, ಮಣಿಪುರ, ಗುಜರಾತ್ ಸೇರಿ ವಿವಿಧ ರಾಜ್ಯಗಳ 17 ಬ್ಯಾಂಕ್ ಖಾತೆಗಳನ್ನು ಗುರುತಿಸಿ ಅವುಗಳನ್ನು ಜಪ್ತು ಮಾಡಲಾಯಿತು. ನಂತರ ಖಾತೆಗಳ ದಾಖಲೆ ಆಧಾರದ ಮೇಲೆ ಆರೋಪಿಗಳನ್ನು ತಲುಪಲಾಯಿತು.

    ಎಸ್​ಪಿ ಶಿವಪ್ರಕಾಶ ದೇವರಾಜು, ಎಎಸ್​ಪಿ ಬದರಿನಾರಾಯಣ ಮಾರ್ಗದರ್ಶನದಲ್ಲಿ ಸೈಬರ್ ಕ್ರೖೆಂ ವಿಭಾಗದ ಇನ್ಸ್​ಪೆಕ್ಟರ್ ಸೀತಾರಾಮ ಪಿ., ಸಿಬ್ಬಂದಿ ಉಮೇಶ ನಾಯ್ಕ, ಸುದರ್ಶನ ನಾಯ್ಕ, ನಾಗರಾಜ ನಾಯ್ಕ, ಮಂಜುನಾಥ ಹೆಗಡೆ, ಹನುಮಂತ ಕಬಾಡಿ, ನಾರಾಯಣ ಎಂ.ಎಸ್., ಚಂದ್ರಶೇಖರ ಪಾಟೀಲ ಸುರೇಶ ನಾಯ್ಕ ಸಂದೀಪ ನಾಯ್ಕ, ಶಿವಾನಂದ ತಾನಸಿ, ಭರತೇಶ ಸದಲಗಿ, ಸುಧೀರ ಮಡಿವಾಳ, ರಮೇಶ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ನೈಜೀರಿಯನ್ ಸಂಪರ್ಕ: ಬಂಧಿತರಲ್ಲಿ ಒಬ್ಬನಾದ ಬುಲ್ಲೈಂಗಿರ್ ಹಲಮ್ ಎಂಬಾತ ಅಸ್ಸಾಂ ಮೂಲದ ಯುವತಿಯರ ಜತೆ ಸಂಪರ್ಕ ಇಟ್ಟುಕೊಂಡು ಬೆಂಗಳೂರು ಹಾಗೂ ಇತರೆಡೆ ಉದ್ಯೋಗ ಮಾಡಿಕೊಂಡಿರುವ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆಯುತ್ತಿದ್ದ. ಅವರ ಹೆಸರಿನಲ್ಲಿ ಮೊಬೈಲ್ ಸಿಮ್ ಪಡೆದು ನೈಜೀರಿಯನ್ ಮೂಲದ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಅವರು ನಕಲಿ ಇ – ಮೇಲ್ ಸೃಷ್ಟಿಸಿ ಹಲವರಿಗೆ ಇ-ಮೇಲ್ ಕಳಿಸಿ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಆಮಿಶವೊಡ್ಡುತ್ತಿದ್ದರು. ಪ್ರತಿಕ್ರಿಯೆ ಬಂದರೆ ನಕಲಿ ಸಂದರ್ಶನ ನಡೆಸಿ ನಂತರ ಶುಲ್ಕ ಎಂದು ಹಣ ಕೀಳುತ್ತಿದ್ದರು. ಈ ಪ್ರಕರಣದಲ್ಲಿ ನೈಜೀರಿಯನ್ ಸೈಬರ್ ಅಪರಾಧಿಗಳು ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ನಡೆಯುತ್ತಿದೆ ಎಂದು ಎಸ್.ಪಿ.ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ. ಬಂಧಿತರಲ್ಲಿ ಕೋಲಾರ ಮೂಲದ ಅಶೋಕ ಈಗಾಗಲೇ ಹೈದ್ರಾಬಾದ್ ಸೈಬರ್ ಕ್ರೖೆಂ ಪೊಲೀಸರಿಂದ ಬಂಧಿತನಾಗಿ ಬಿಡುಗಡೆಯಾಗಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts