More

    ಉದ್ಯಾನದಲ್ಲಿ ಉಳ್ಳಾಗಡ್ಡಿ, ಬೆಳ್ಳುಳ್ಳಿ ಕೃಷಿ!

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ನಗರದ ವಿವಿಧ ಬಡಾವಣೆಯಲ್ಲಿ ನಿರ್ವಿುಸಿರುವ ಉದ್ಯಾನಗಳು ಖಾಸಗಿಯವರ ಸ್ವತ್ತಾಗಿದೆ. ಉದ್ಯಾನ ದುರುಪಯೋಗಪಡಿಸಿಕೊಳ್ಳುತ್ತಿದ್ದು, ನಗರಸಭೆ ಅಧಿಕಾರಿಗಳು ಇಂಥವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.

    ಉದ್ಯಾನಗಳು ಮಕ್ಕಳಿಗೆ ಆಟವಾಡಲು, ವಾಯುವಿಹಾರಿಗಳಿಗೆ ಅನುಕೂಲವಾಗಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ಖಾಸಗಿ ವ್ಯಕ್ತಿಗಳು ಉಳ್ಳಾಗಡ್ಡಿ, ಬೆಳ್ಳುಳ್ಳಿ ಬೆಳೆಯುತ್ತಿದ್ದಾರೆ. ಇನ್ನು ಕೆಲವರು ಡಾಂಬರ್ ಡ್ರಮ್ ಇತ್ಯಾದಿ ಸಾಮಗ್ರಿಯನ್ನು ಇಡುತ್ತಿದ್ದಾರೆ.

    ನಗರದಲ್ಲಿ 350ಕ್ಕೂ ಅಧಿಕ ಉದ್ಯಾನಗಳಿವೆ. ಅದರಲ್ಲಿ ಅಭಿವೃದ್ಧಿ ಕಂಡಿರುವ ಉದ್ಯಾನಗಳು ಬೆರಳೆಣಿಕೆಯಷ್ಟು ಮಾತ್ರ. ವಿದ್ಯಾನಗರ, ಬೀರೇಶ್ವರ ನಗರ, ಶ್ರೀರಾಮ ನಗರ, ಬನಶಂಕರಿ ಲೇಔಟ್​ಗಳಲ್ಲಿನ 50ಕ್ಕೂ ಅಧಿಕ ಉದ್ಯಾನಗಳಲ್ಲಿ ಗಿಡಗಂಟಿಗಳು ಬೆಳೆದುಕೊಂಡಿದ್ದು, ಯಾರೂ ಹೋಗದ ದುಸ್ಥಿತಿಗೆ ತಲುಪಿವೆ. ಕಂಠಿಬೀರೇಶ್ವರ ನಗರದ ಉದ್ಯಾನಗಳಲ್ಲಿ ಕೆಲವರು ನೀರಾವರಿ ಮಾಡಿಕೊಂಡು ಉಳ್ಳಾಗಡ್ಡಿ, ಬೆಳ್ಳುಳ್ಳಿ ಬೆಳೆಯುತ್ತಿದ್ದಾರೆ.

    ವಿಶ್ವ ಬಂಧು ನಗರ ಸೇರಿ ಸುತ್ತಲಿನ ಪ್ರದೇಶದಲ್ಲಿ ಕೆಲ ಗುತ್ತಿಗೆದಾರರು ಡಾಂಬರೀಕರಣ ವಸ್ತು, ಕಟ್ಟಡ ನಿರ್ವಣದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಕೆಲ ಉದ್ಯಾನದಲ್ಲಿ ಚರಂಡಿ ನೀರು ಸಂಗ್ರಹಗೊಳ್ಳುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೀವ್ರ ತೊಂದರೆ ಉಂಟಾಗಿದೆ. ಇಂತಹ ಉದ್ಯಾನಗಳು ಈ ಭಾಗದ ಮಕ್ಕಳಿಗೆ ಹಾಗೂ ಜನತೆಗೆ ಇದ್ದೂ ಇಲ್ಲದಂತಾಗಿದೆ. ಬೀರೇಶ್ವರ ನಗರದ ಉದ್ಯಾನದಲ್ಲಿ ಅನಧಿಕೃತವಾಗಿ ಮನೆ ನಿರ್ವಿುಸಿಕೊಳ್ಳಲಾಗಿದೆ.

    ಗಮನಹರಿಸದ ನಗರಸಭೆ: ಉದ್ಯಾನಗಳು ಅತಿಕ್ರಮಣಗೊಂಡು ಗಿಡಗಂಟಿ ಬೆಳೆದು ಸಂಪೂರ್ಣ ಹಾಳಾಗಿದ್ದರೂ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ವಿಪರ್ಯಾಸ. ನಗರದ ಉದ್ಯಾನಗಳ ನಿರ್ವಹಣೆಗಾಗಿ ಇಬ್ಬರು ಸಿಬ್ಬಂದಿ ನೇಮಕ ಮಾಡಲಾಗಿದೆ. ಆದರೆ, ಅವರು ಉದ್ಯಾನಗಳತ್ತ ಕಣ್ಣೆತ್ತಿಯೂ ನೋಡಿಲ್ಲ.

    ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ: ನಗರಸಭೆಯಲ್ಲಿ ನೂರಾರು ಪೌರಕಾರ್ವಿುಕರಿದ್ದಾರೆ. ಅವರಿಂದ ನಿತ್ಯವೂ ಒಂದೊಂದು ಉದ್ಯಾನ ಸ್ವಚ್ಛಗೊಳಿಸಿದರೆ ಎಲ್ಲ ಉದ್ಯಾನಗಳು ಒಂದೆರಡು ತಿಂಗಳಲ್ಲಿ ಸುಂದರಗೊಳ್ಳುತ್ತವೆ. ಅಲ್ಲದೆ, ಉದ್ಯಾನ ಅತಿಕ್ರಮಣಗೊಂಡಿದ್ದು, ಅದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕಿದೆ. ಈ ಬಗ್ಗೆ ನಗರಸಭೆ ಅಧ್ಯಕ್ಷರು, ಆಯುಕ್ತರು ಕೂಡಲೆ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಉದ್ಯಾನಗಳ ದುಸ್ಥಿತಿ ಬಗ್ಗೆ ಹಾಗೂ ಯಾವೆಲ್ಲ ಉದ್ಯಾನ ಒತ್ತುವರಿಯಾಗಿವೆ ಎಂಬ ಬಗ್ಗೆ ನಗರಸಭೆ ಆಯುಕ್ತರಿಗೆ ಲಿಖಿತವಾಗಿ ದೂರು ನೀಡಿದ್ದೇವೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನಗರಸಭೆ ಸದಸ್ಯರು ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು, ಸಾರ್ವಜನಿಕರ ಸಮಸ್ಯೆಗೆ ಹೇಗೆ ಸ್ಪಂದಿಸುತ್ತಾರೆ.

    | ನಿಂಗರಾಜ ಕೋಡಿಹಳ್ಳಿ ನಗರಸಭೆ ಸದಸ್ಯ

    ನಗರಸಭೆ ವ್ಯಾಪ್ತಿಯ ಉದ್ಯಾನದಲ್ಲಿ ಮನೆ ಸೇರಿ ಇತರ ಕಾರ್ಯಚಟುವಟಿಕೆ ನಡೆಸಲು ಅವಕಾಶವಿಲ್ಲ. ಉದ್ಯಾನದಲ್ಲಿ ಉಳ್ಳಾಗಡ್ಡಿ, ಬೆಳ್ಳುಳ್ಳಿ ಬೆಳೆದಿರುವುದನ್ನು ಕೂಡಲೆ, ತೆರವುಗೊಳಿಸಲಾಗುವುದು. ಇನ್ನುಳಿದಂತೆ ಅತಿಕ್ರಮಣವಾಗಿರುವ ಬಗ್ಗೆ ಸಿಬ್ಬಂದಿಗೆ ಸೂಚಿಸಿ ಪರಿಶೀಲಿಸಲಾಗುವುದು. ನಂತರ ಅವುಗಳ ತೆರವು ಕಾರ್ಯ ಮಾಡುತ್ತೇವೆ.

    | ಡಾ. ಎನ್. ಮಹಾಂತೇಶ ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts