More

    ಉದ್ಯಮ ಆರಂಭವಾದರೂ ಪೂರ್ಣ ಪ್ರಮಾಣದ ಕೆಲಸವಿಲ್ಲ

    ಹುಬ್ಬಳ್ಳಿ: ಮೇ 3ರ ನಂತರ ಲಾಕ್​ಡೌನ್ ಸಡಿಲಿಕೆ ಮಾಡಿ ಕೈಗಾರಿಕೆಗಳ ಕಾರ್ಯ ನಿರ್ವಹಣೆಗೆ ಅವಕಾಶ ನೀಡಲಾಗಿದ್ದರೂ ಇಲ್ಲಿಯ ಕೈಗಾರಿಕಾ ಎಸ್ಟೇಟ್​ಗಳಲ್ಲಿ ಅಂತಹ ಉತ್ಸಾಹ, ಕೆಲಸಗಳು ಕಂಡು ಬರುತ್ತಿಲ್ಲ.

    ನಗರದ ಗೋಕುಲ ರಸ್ತೆ, ತಾರಿಹಾಳ ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯಮ ಸಂಸ್ಥೆಗಳು ಬಾಗಿಲುಗಳೇನೋ ತೆರೆದಿವೆ. ಆದರೆ, ಅಲ್ಲಿ ಎಂದಿನಂತೆ ಪೂರ್ತಿ ಪ್ರಮಾಣದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.

    ಬಹುತೇಕ ಕೆಲಸಗಾರರು ಪರ ಊರುಗಳಿಂದ ಬರಬೇಕು. ಅವರಿಗೆ ಬರಲು ಸಾರಿಗೆ ವ್ಯವಸ್ಥೆ ಇಲ್ಲ. ಲಾಕ್​ಡೌನ್ ಇನ್ನೂ ಮೇ 17ರ ವರೆಗೆ ಮುಂದುವರಿದಿರುವುದರಿಂದ ಅಲ್ಲಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಇದೆ. ಹಾಗಾಗಿ ಉದ್ಯಮಗಳ ಪಾಲಿಗೆ ಲಾಕ್​ಡೌನ್ ಸಡಿಲಿಕೆ ನೆಪ ಮಾತ್ರಕ್ಕೆ ಎನ್ನುವಂತಾಗಿದೆ.

    ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯಬೇಕಾದರೆ ಕಚ್ಚಾ ಸಾಮಗ್ರಿಗಳು ಬೇಕು. ಮುಂಬೈ, ಬೆಂಗಳೂರು ಸೇರಿ ವಿವಿಧ ಕಡೆಗಳಿಂದ ಕಚ್ಚಾ ವಸ್ತುಗಳು ಬರಬೇಕಾಗಿದೆ. ಸಾರಿಗೆ ವ್ಯವಸ್ಥೆ ಇಲ್ಲದೇ ಅವು ಕೂಡ ಬರುತ್ತಿಲ್ಲ. ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಬೆಂಗಳೂರು, ಮುಂಬೈನಿಂದ ಸದ್ಯಕ್ಕೆ ಕಚ್ಚಾ ವಸ್ತುಗಳು ಬರುವುದನ್ನು ನಿರೀಕ್ಷಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ.

    ಬೇಡಿಕೆಗಳೂ ಈಡೇರಿಲ್ಲ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದು, ಅವುಗಳ ಪ್ರೋತ್ಸಾಹಕ್ಕೆ ಸರ್ಕಾರಗಳು ಒಂದಿಷ್ಟು ಉತ್ತೇಜನ ನೀಡಬೇಕು, ರಿಯಾಯಿತಿಗಳನ್ನು ನೀಡಬೇಕು ಎನ್ನುವ ಉದ್ಯಮದಾರರ ಬೇಡಿಕೆಗಳು ಇದುವರೆಗೂ ಈಡೇರಿಲ್ಲ.

    ಲಾಕ್​ಡೌನ್ ಶುರುವಾದ ಕೂಡಲೆ ಉದ್ಯಮಗಳ ಬಾಗಿಲು ಮುಚ್ಚಲಾಯಿತು. ಆಗ ಬ್ಯಾಂಕ್​ಗಳಿಂದ ಪಡೆದಿರುವ ಸಾಲದ ಬಡ್ಡಿ ಮನ್ನಾ ಮಾಡಿದರೆ ಅಸಲು ತುಂಬಲು ಸಿದ್ಧರಿದ್ದೇವೆ. ವಿದ್ಯುತ್ ಬಿಲ್​ನಲ್ಲಿ ಕನಿಷ್ಠ ಶುಲ್ಕ ತೆಗೆದು ಹಾಕಬೇಕು. 40 ದಿನಗಳವರೆಗೆ ಉದ್ಯಮದ ಬಾಗಿಲೇ ತೆರೆದಿಲ್ಲ. ಅಂತಹದರಲ್ಲಿ 20- 30 ಸಾವಿರ ರೂ. ಕನಿಷ್ಠ ಶುಲ್ಕ ಹಾಕಿದರೆ ಹೇಗೆ? ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಉದ್ಯಮಿಗಳು ಮನವಿ ಮಾಡಿದ್ದರು. ಅಲ್ಲದೆ, ಕಾರ್ವಿುಕರ ಪಿಎಫ್ ವಂತಿಗೆ ಭರಿಸಬೇಕು, ಕಾರ್ವಿುಕರಿಗೆ ಕನಿಷ್ಠ ಸಂಬಳ ನೀಡಬೇಕು ಎಂದು ಕೋರಲಾಗಿತ್ತು. ಇದರಲ್ಲಿ ಯಾವುದೇ ಒಂದು ಬೇಡಿಕೆಯೂ ಈಡೇರಿಲ್ಲ. ವಿಶೇಷವಾಗಿ ವಿದ್ಯುತ್ ಕನಿಷ್ಠ ಶುಲ್ಕ ಹಾಕಬೇಡಿ ಎಂದು ಪರಿಪರಿಯಾಗಿ ಕೇಳಿದರೂ ಸರ್ಕಾರ ಕಣ್ಣು ತೆರೆದಿಲ್ಲ. ಈಗ ಉದ್ಯಮಿಗಳಿಗೆ ಕನಿಷ್ಠ ಶುಲ್ಕ ಸೇರಿ ವಿದ್ಯುತ್ ಬಿಲ್​ಗಳನ್ನು ನೀಡಲಾಗುತ್ತಿದೆ.

    ಇಷ್ಟೆಲ್ಲದರ ಮಧ್ಯೆ ಕೈಗಾರಿಕೆಗಳ ಪುನರಾರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಕೆಲಸ ಆರಂಭಿಸಲು ಉದ್ಯಮಿಗಳಿಗೆ ಸಾಧ್ಯವಾಗುತ್ತಿಲ್ಲ. ಮೊದಲೇ ಆರ್ಥಿಕ ಕುಸಿತ ಇತ್ಯಾದಿ ಕಾರಣಗಳಿಂದ ಉದ್ಯಮ ವಲಯ ತತ್ತರಿಸಿದೆ. ಅಂತಹದರಲ್ಲಿ ಬರಸಿಡಿಲಿನಂತೆ ಬಂದೆರಗಿದ ಕರೊನಾ ಲಾಕ್​ಡೌನ್ ಮತ್ತಷ್ಟು ಪಾತಾಳಕ್ಕೆ ತಳ್ಳಿದೆ.

    ಈ ಎಲ್ಲ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನರುಜ್ಜೀವನಕ್ಕೆ ಪ್ರೋತ್ಸಾಹ ಅತ್ಯಗತ್ಯ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರೋತ್ಸಾಹ, ಉತ್ತೇಜನ ನೀಡುವುದಾಗಿ ಬರೀ ಬಾಯಿ ಮಾತಿನಿಂದ ಹೇಳುತ್ತಿವೆ. ಕಾರ್ಯರೂಪಕ್ಕೆ ತಂದಿಲ್ಲ.

    ಕೈಗಾರಿಕಾ ಎಸ್ಟೇಟ್ ಲಾಕ್​ಡೌನ್​ನಿಂದಾಗಿ ಖಾಲಿಯಾಗಿತ್ತು. ಮರು ಆರಂಭವಾಗಬೇಕಾದರೆ ಕಾರ್ವಿುಕರು ಬರಲು ವ್ಯವಸ್ಥೆಯಾಗಬೇಕು. ಕಚ್ಚಾ ವಸು ಬರಬೇಕು. ಅಲ್ಲದೆ, ಸರ್ಕಾರ ನೆರವು ನೀಡಿದರೆ ಮಾತ್ರ ಅನುಕೂಲವಾಗಲಿದೆ. | ನಿಂಗಣ್ಣ ಬಿರಾದಾರ ಅಧ್ಯಕ್ಷರು, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts