More

    ಉದ್ಯಮಿಗಳಿಗೆ ‘ಕರೆಂಟ್’ ಅಪ್​ಸೆಟ್

    ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ವಿವಿಧ ಏರ್ಪಾಟು ಮಾಡುತ್ತಿದೆ. ಫೆ. 14ರ ಇನ್ವೆಸ್ಟ್ ಕರ್ನಾಟಕ-ಹುಬ್ಬಳ್ಳಿ ಸಮಾವೇಶಕ್ಕೆ ಪೂರ್ವಭಾವಿಯಾಗಿ ವಿವಿಧೆಡೆ ರೋಡ್ ಶೋ, ಉದ್ಯಮಿಗಳೊಂದಿಗೆ ಸಮಾಲೋಚನೆ ಸೇರಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಹೀಗಾಗಿ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗುವುದು ನಿರೀಕ್ಷಿತ.

    ಸಮಾವೇಶದ ನಂತರದಲ್ಲಿ ನಿರೀಕ್ಷಿತ ಫಲಿತಾಂಶ ಬರಲು ಪೂರಕವಾಗಿ ಸರ್ಕಾರ ತೆಗೆದುಕೊಳ್ಳಬಹುದಾದ ಕ್ರಮಗಳೇನು ಎಂಬ ಕುತೂಹಲವಿದೆ. ಈ ನಿಟ್ಟಿನಲ್ಲಿ ಉಳಿದೆಲ್ಲ ಪ್ರೋತ್ಸಾಹದೊಂದಿಗೆ ಎಸ್ಕಾಂಗಳ ಸಹಕಾರ ಎಷ್ಟು, ಏನು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

    ನಿರಂತರವಾದ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆ ಇಲ್ಲದೆ ಯಾವುದೇ ಕೈಗಾರಿಕೆ ನಡೆಯಲು ಸಾಧ್ಯವಿಲ್ಲ. ಜತೆಗೆ, ಉದ್ಯಮಿಗಳಿಗೆ ಭಾರ ಎನಿಸದಂಥ ವಿದ್ಯುತ್ ದರ ಇರಬೇಕೆಂಬುದು ಸಾಮಾನ್ಯ ಅಪೇಕ್ಷೆ.

    ಪ್ರತಿವರ್ಷವೂ ವಿತ್ತೀಯ ಕೊರತೆ ಮುಂದೆ ಮಾಡಿ ಎಲ್ಲ ಎಸ್ಕಾಂಗಳು ವಿದ್ಯುತ್ ದರ ಏರಿಸುತ್ತ ಬಂದಿವೆ. ಈ ಸಲ ಇತ್ತೀಚೆಗಷ್ಟೇ ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಿ, ಸರಾಸರಿ ಯುನಿಟ್​ಗೆ 45 ಪೈಸೆ ಹೆಚ್ಚಳಕ್ಕೆ ಕೋರಿವೆ. ಸದ್ಯದಲ್ಲೇ ಕೆಇಆರ್​ಸಿ ಸಾರ್ವಜನಿಕರ ಆಕ್ಷೇಪಣೆಗಳ ವಿಚಾರಣೆ ನಡೆಸಲಿದೆ.

    ಈ ಹಿಂದೆಲ್ಲ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕೊರತೆ ಇತ್ತು. ಒಂದೆರಡು ವರ್ಷಗಳಿಂದ ರಾಜ್ಯದಲ್ಲೂ, ದೇಶದಲ್ಲೂ ವಿದ್ಯುತ್ ಕೊರತೆ ಇಲ್ಲ. ರಾಜ್ಯದಲ್ಲಿ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ವಿದ್ಯುತ್​ಅನ್ನು ಯುನಿಟ್​ಗೆ 2 ರೂ. ದರದಲ್ಲಿ ಸೆಂಟ್ರಲ್ ಗ್ರಿಡ್ ಮೂಲಕ ಬೇರೆ ರಾಜ್ಯಕ್ಕೆ ಪೂರೈಸಲಾಗುತ್ತಿದೆ. ಹೀಗಿರುವಾಗ ವಿದ್ಯುತ್ ದರ ಹೆಚ್ಚಿಸುವ ಬದಲು ಎಸ್ಕಾಂಗಳ ಕೊರತೆ ತುಂಬಿಕೊಳ್ಳಲು ವೆಚ್ಚ ಕಡಿತ ಮತ್ತಿತರ ಬಿಗಿ ಕ್ರಮಗಳ ಪರ್ಯಾಯ ಮಾರ್ಗಗಳನ್ನು ಶೋಧಿಸದೇ ಇದ್ದರೆ, ಉದ್ಯಮಿಗಳಿಗೂ ಗೃಹಬಳಕೆಯವರಿಗೂ ಹೊರೆ ಹೆಚ್ಚುತ್ತದೆ.

    ಆದ್ದರಿಂದ, ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರಗಳು ನಿರ್ದಿಷ್ಟ ವರ್ಷದವರೆಗೆ ಒಂದೇ ದರದಲ್ಲಿ ವಿದ್ಯುತ್ ಪೂರೈಕೆಯಂಥ ಸೌಲಭ್ಯ ಘೊಷಿಸಬಹುದಾಗಿದೆ ಎಂಬ ಸಲಹೆ ಕೇಳಿಬರುತ್ತಿದೆ.

    ಸಚಿವ ಜಗದೀಶ ಶೆಟ್ಟರ್ ಅವರು ವಿಶೇಷ ಆಸಕ್ತಿ ವಹಿಸಿ ಸಮಾವೇಶಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿದ್ದಾರೆ. ಹಾಗಾಗಿ ಈ ಸಲ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕೃಷಿ ಉತ್ಪನ್ನ ಆಧರಿತ ಆಹಾರ ಸಂಸ್ಕರಣೆ, ಖಾದ್ಯ ತೈಲ, ಟೆಕ್ಸ್​ಟೈಲ್ ಉದ್ಯಮಕ್ಕೆ ನಮ್ಮಲ್ಲಿ ಹೆಚ್ಚಿನ ಅವಕಾಶವಿದೆ. ಸಿದ್ಧ ಉಡುಪು, ಆಟೊಮೊಬೈಲ್ ಬಿಡಿ ಭಾಗ, ಇಂಡಸ್ಟ್ರಿಯಲ್ ವಾಲ್ವ್​ನಂಥ ಹಾಲಿ ಇರುವ ಉದ್ಯಮಗಳಿಗೆ ಪೂರಕ ಕೈಗಾರಿಕೆಗಳು; ಬೃಹತ್ ವಾಹನ ಉತ್ಪಾದನಾ ಘಟಕಗಳು ಬರಲಿವೆ ಎಂಬ ಆಶಾಭಾವನೆ ಹೊಂದಿದ್ದೇವೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಅಧ್ಯಕ್ಷ ಮಹೇಂದ್ರ ಲದ್ದಡ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

    ಉ.ಕ.ದ ವಿವಿಧೆಡೆ ಅಗತ್ಯ ಜಮೀನು, ಉದ್ಯೋಗಾರ್ಥಿಗಳ ಲಭ್ಯತೆ, ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಯಾಗಿರುವುದು ನಮ್ಮ ಭಾಗದ ಪ್ಲಸ್ ಪಾಯಿಂಟ್. ಜಿಎಸ್​ಟಿ ಬಂದ ಮೇಲೆ ತೆರಿಗೆ ರಿಯಾಯಿತಿಯಂಥ ಸೌಲಭ್ಯ ನೀಡಲು ಸರ್ಕಾರಕ್ಕೂ ಅವಕಾಶ ಇಲ್ಲ. ಭೂಮಿಯ ಬೆಲೆ, ವಿದ್ಯುತ್ ದರದಲ್ಲಿ ರಿಯಾಯಿತಿ ನೀಡಬಹುದಾಗಿದೆ. ಸೂಕ್ತ ರಿಯಾಯಿತಿ ನೀಡಿಯಾದರೂ ನಮ್ಮ ಉ.ಕ.ದಲ್ಲಿ ಹೆಚ್ಚು ಕೈಗಾರಿಕೆ ಸ್ಥಾಪನೆ ಮಾಡಲು ಉತ್ತೇಜನ ನೀಡುವಂತೆ ಸರ್ಕಾರವನ್ನು ಕೋರುತ್ತಿದ್ದೇವೆ ಎಂದು ಅವರು ಹೇಳಿದರು.

    ವಿದ್ಯುತ್ ದರ ಹೆಚ್ಚಳಕ್ಕೆ ನಮ್ಮ ವಿರೋಧವಿದೆ. ಕೆಸಿಸಿಐ ವತಿಯಿಂದ ತಕರಾರನ್ನೂ ಸಲ್ಲಿಸುತ್ತಿದ್ದೇವೆ. ಈ ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗ ರೈತರ ಸಾಲ ಮನ್ನಾ ಘೊಷಣೆ ಮಾಡಿದ್ದಕ್ಕೆ ಹಣ ಹೊಂದಿಸಲು ವಿದ್ಯುತ್ ಬಿಲ್ ಮೇಲಿನ ಸೆಸ್​ಅನ್ನು ಶೇ. 6ರಿಂದ 9ಕ್ಕೆ ಏರಿಸಲಾಗಿತ್ತು. ಅದಾಗಿ ವರ್ಷ ಕಳೆದಿದೆ. ಆದ್ದರಿಂದ, ಹೆಚ್ಚು ಮಾಡಿದ್ದ ಸೆಸ್​ಅನ್ನು ಕಡಿತ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದೇವೆ.

    | ಮಹೇಂದ್ರ ಲದ್ದಡ, ಕೆಸಿಸಿಐ ಅಧ್ಯಕ್ಷ

    ಕೆಲಸ ಕೊಡುವ ಉದ್ಯಮ ಬರಲಿ

    ದೊಡ್ಡದಿರಲಿ…ಸಣ್ಣದಿರಲಿ, ಹೊಸ ಕೈಗಾರಿಕೆಗಳು ಸ್ಥಾಪನೆಯಾದರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇನ್ವೆಸ್ಟ್ ಕರ್ನಾಟಕದ ಮೂಲ ಆಶಯ ಉತ್ತರ ಕರ್ನಾಟಕ ಭಾಗದಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸುವುದಾಗಿದ್ದರೂ ಉದ್ಯೋಗಾವಕಾಶಗಳ ಸೃಷ್ಟಿಯೇ ಮುಖ್ಯವಾಗಿದೆ. ಇದು ತುರ್ತು ಅಗತ್ಯವೂ ಹೌದು.

    ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಎಲ್ಲೆಡೆ ಉದ್ಯೋಗ ಕಡಿತದ ಭೀತಿ ಇದೆ. ಅನೇಕ ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ಹು-ಧಾ, ಬೆಳಗಾವಿ ಸೇರಿ ಉತ್ತರ ಕರ್ನಾಟಕವೂ ಇದರಿಂದ ಹೊರತಾಗಿಲ್ಲ. ಹಾಗಾಗಿ ನಿರುದ್ಯೋಗಿಗಳು ಇನ್ವೆಸ್ಟ್ ಕರ್ನಾಟಕವನ್ನು ಎದುರು ನೋಡುತ್ತಿದ್ದಾರೆ. ಈ ಭಾಗದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

    ರಾಜ್ಯ ಸರ್ಕಾರ ಜಾರಿಗೆ ತರಲಿರುವ ಹೊಸ ಕೈಗಾರಿಕೆ ನೀತಿಯ ಉದ್ದೇಶವು ಎರಡನೇ ಸ್ತರದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವುದಾಗಿದೆ. ಅದರಂತೆ ನೀತಿ ರೂಪಿಸಲಾಗುತ್ತಿದೆ ಎಂದು ಈಗಾಗಲೇ ಹಲವು ಬಾರಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿರುವುದು ವಿಶ್ವಾಸ ಹೆಚ್ಚಿಸಿದೆ.

    ಉ.ಕ. ಭಾಗದಲ್ಲಿ ಇಂಜಿನಿಯರಿಂಗ್, ಆಟೋಮೊಬೈಲ್, ಜವಳಿ, ಆಹಾರ ಸಂಸ್ಕರಣೆ, ಐಟಿ ಬಿಟಿ ಉದ್ಯಮಗಳ ಸ್ಥಾಪನೆಗೆ ವಿಪುಲ ಅವಕಾಶಗಳಿವೆ. ಎಫ್​ಎಂಸಿಜಿ (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳು) ಕಂಪನಿಗಳು ಆಸಕ್ತಿ ತೋರಿವೆ. ಬಹುಕೋಟಿ ಮೌಲ್ಯದ ಆಟೋಮೊಬೈಲ್ ಉದ್ಯಮ ಕಾಲಿರಿಸಿದರೆ ಅವುಗಳ ಬಿಡಿಭಾಗಗಳನ್ನು ಉತ್ಪಾದಿಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.

    ‘ದೇಶಪಾಂಡೆ ಪ್ರತಿಷ್ಠಾನದ ಕೌಶಲಾಭಿವೃದ್ಧಿ ಕೇಂದ್ರ ಅಂದಾಜು 5 ಸಾವಿರ ಜನರಿಗೆ ಕೌಶಲ ತರಬೇತಿ ನೀಡುತ್ತಿದೆ. ನಮ್ಮಲ್ಲಿ ಮಾನವ ಸಂಪನ್ಮೂಲದ ಕೊರತೆ ಇಲ್ಲ. ಮೂಲಸೌಕರ್ಯಗಳ ಕೊರತೆ ಇತ್ತೀಚೆಗೆ ಸಾಕಷ್ಟು ನೀಗಿದೆ’ ಎಂದು ಉ.ಕ. ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ ನಾಗರಾಜ ದಿವಟೆ ಹೇಳುತ್ತಾರೆ.

    ‘ಕೈಗಾರಿಕಾ ವಸಾಹತು ಪ್ರದೇಶಗಳು ಮೂಲಸೌಕರ್ಯಗಳನ್ನು ಪಡೆಯುತ್ತಿವೆ. ಎಲ್ಲ ಮಾದರಿಯ ಕೈಗಾರಿಕೆಗಳನ್ನು ನಾವು ಸ್ವಾಗತಿಸಬೇಕು. ಕೃಷಿ, ಆಟೋಮೊಬೈಲ್, ಐಟಿಬಿಟಿ, ಆಹಾರ ಸಂಸ್ಕರಣೆ, ಎಲ್ಲ ಕೈಗಾರಿಕೆಗಳು ಬರಲಿ. ಇನ್ವೆಸ್ಟ್ ಕರ್ನಾಟಕ ಬಗ್ಗೆ ನಾವು ಸಕಾರಾತ್ಮಕವಾಗಿರಬೇಕು’ ಎಂದು ಗ್ರೇಟರ್ ಹು-ಧಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ಜಿ. ಭಟ್ ಅಭಿಪ್ರಾಯಿಸಿದ್ದಾರೆ.

    ಇನ್ವೆಸ್ಟ್ ಕರ್ನಾಟಕದ ಹಿನ್ನೆಲೆಯಲ್ಲಿ ಕೈಗಾರಿಕೊದ್ಯಮಿಗಳನ್ನು ಸೆಳೆಯಲು ರಾಜ್ಯ ಸರ್ಕಾರ ಹೈದರಾಬಾದ್, ಮುಂಬೈನಲ್ಲಿ ರೋಡ್ ಶೋ ನಡೆಸಿದೆ. ಈ ಬಾರಿ ಉ.ಕ. ಭಾಗದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಬರುವ ನಿರೀಕ್ಷೆ ಇದೆ. ಮುಮ್ಮಿಗಟ್ಟಿ, ಇಟಿಗಟ್ಟಿ, ಇತರ ಕಡೆ ಕಾಯ್ದಿರಿಸಿರುವ ಭೂಮಿ ಸದುಪಯೋಗವಾಗಬೇಕು.

    | ಎನ್.ಎಸ್. ಬಿರಾದಾರ, ಉ.ಕ. ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts