More

    ಉತ್ತಮ ಮಳೆ ನಿರೀಕ್ಷೆಯಲ್ಲಿ ರೈತ



    ಧಾರವಾಡ: ರೋಹಿಣಿ ಮಳೆ ಮುಕ್ತಾಯ ಅವಧಿಯಲ್ಲಿ ಗುಡುಗಿ ಮರೆಯಾಗಿದೆ. ಮೃಗಶಿರಾ ನಕ್ಷತ್ರ ಬಂದು 3 ದಿನಗಳಾದರೂ ಆಗಮನದ ಸುಳಿವಿಲ್ಲ. ಉಳಿದ ಬೆಳೆಗಳ ಬಿತ್ತನೆ ಮುಗಿಸಿರುವ ರೈತರು ಆಲೂಗಡ್ಡೆ ಬಿತ್ತನೆಗಾಗಿ ಇನ್ನಷ್ಟು ಮಳೆಗಾಗಿ ಕಾದು ಕುಳಿತಿದ್ದಾರೆ. ಈ ಬಾರಿ ಆಲೂ ಬಿತ್ತನೆ ಬೀಜದ ದರ ಕೇಳಿ ರೈತರು ಬೆಚ್ಚಿ ಬೀಳುವಂತಾಗಿದೆ.

    ಜಿಲ್ಲೆಯ ಗರಗ, ತಡಕೋಡ, ಯಾದವಾಡ, ನರೇಂದ್ರ, ಲಕಮಾಪೂರ, ದಾಸನಕೊಪ್ಪ, ಅಮ್ಮಿನಭಾವಿ, ಮರೇವಾಡ, ಕರಡಿಗುಡ್ಡ ಹಾಗೂ ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ಆಲೂಗಡ್ಡೆ ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ. ಆಲೂ ಬೆಳೆ ಕೈ ಹಿಡಿದು ಉತ್ತಮ ದರ ಸಿಕ್ಕರೆ ಹಣವಂತರಾಗುವುದು ಸಾಮಾನ್ಯ. ಆದರೆ ಅದಕ್ಕೆ ತಕ್ಕಂತೆ ಖರ್ಚು-ವೆಚ್ಚ ನಿರ್ವಹಣೆಗೂ ರೈತರ ಜೇಬು ಗಟ್ಟಿಯಾಗಿರಬೇಕು.

    ಜಲಂಧರದಿಂದ ಬರಬೇಕು:

    ಜಿಲ್ಲೆಯ ರೈತರು ಆಲೂಗಡ್ಡೆ ಬೀಜಕ್ಕೆ ಪಂಜಾಬ್​ನ ಜಲಂಧರ ಭಾಗವನ್ನು ಅವಲಂಬಿಸಿದ್ದಾರೆ. ಪಂಜಾಬ್​ನ ಪ್ರಮುಖ ಬೆಳೆಗಳಲ್ಲೊಂದಾದ ಆಲೂಗಡ್ಡೆ ಹಲವು ರಾಜ್ಯಗಳಿಗೆ ಪೂರೈಕೆಯಾಗುತ್ತದೆ. ಮುಂಗಾರಿನಲ್ಲಿ ಆಲೂ ಬೆಳೆಯುವ ಅಲ್ಲಿನ ರೈತರು, ಶೀತಲೀಕರಣ ಘಟಕದಲ್ಲಿ ದಾಸ್ತಾನಿಟ್ಟು ಬೇರೆ ರಾಜ್ಯಗಳಿಗೆ ಬಿತ್ತನೆ ಹಂಗಾಮಿನಲ್ಲಿ ಸರಬರಾಜು ಮಾಡುತ್ತಾರೆ. ತೋಟಗಾರಿಕೆ ಬೆಳೆಯಾದ ಆಲೂಗಡ್ಡೆ ಬೀಜ ಈ ಬಾರಿ ಕ್ವಿಂಟಾಲ್​ಗೆ ಸರಾಸರಿ 4,000 ರೂ.ಗಳಂತೆ ಮಾರಾಟವಾಗುತ್ತಿದೆ. ಎಫ್​ಸಿ3 (ಬಿಳಿ ಹೂವು) ತಳಿ ಕ್ವಿಂಟಾಲ್​ಗೆ 3,800 ರೂ. ದರವಿದ್ದು, ಎಫ್​ಎಲ್ ತಳಿಯ (ನೀಲಿ ಹೂವು) ಆಲೂ ಕ್ವಿಂಟಾಲ್​ಗೆ 4,200 ರೂ.ಗೆ ಮಾರಾಟವಾಗುತ್ತಿದೆ.

    ಖರ್ಚಿನ ಬೆಳೆ:

    ಆಲೂಗಡ್ಡೆ ಬಲು ಖರ್ಚಿನ ಬೆಳೆ. ಎಕರೆಗೆ 6-7 ಕ್ವಿಂಟಾಲ್ ಬೀಜ ಬೇಕು. ಬಿತ್ತನೆ ಕಾಲಕ್ಕೆ ರಾಸಾಯನಿಕ ಗೊಬ್ಬರ (ತಳಗೊಬ್ಬರ) ಹಾಕಬೇಕು. 30 ದಿನಗಳ ಅವಧಿಗೆ ಮತ್ತೊಮ್ಮೆ ಮೇಲುಗೊಬ್ಬರ ಹಾಕಬೇಕು. ಕೀಟ ಬಾಧೆ ನಿಯಂತ್ರಣಕ್ಕೆ 4ರಿಂದ 5 ಬಾರಿ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು. ದುಬಾರಿ ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿ ಕೂಲಿ ಕಾರ್ವಿುಕರಿಗೆ ಖರ್ಚು ಮಾಡಿದರೂ ಉತ್ತಮ ಮಳೆಯಾಗಬೇಕು.

    ಇಷ್ಟೆಲ್ಲ ಖರ್ಚು- ವೆಚ್ಚ ನಿರ್ವಹಿಸುವ ರೈತರಿಗೆ ಮಾರಾಟ ಕಾಲಕ್ಕೆ ಉತ್ತಮ ದರ ಸಿಕ್ಕರೆ ಒಂದಿಷ್ಟು ಲಾಭ. ಒಕ್ಕಣೆ ಸಮಯದಲ್ಲಿ ಜಾಸ್ತಿ ಮಳೆಯಾದರೆ ಅರ್ಧ ಆಲೂಗಡ್ಡೆ ಜಮೀನಿನಲ್ಲೇ ಕೊಳೆತು ಹೋಗುವ ಭೀತಿಯೂ ಇದ್ದದ್ದೇ. ಈ ಎಲ್ಲ ಕಾರಣಗಳಿಂದಾಗಿ ಜಿಲ್ಲೆಯ ಬಹುತೇಕ ರೈತರು ಆಲೂಗಡ್ಡೆ ಬೆಳೆಯಿಂದ ವಿಮುಖರಾಗಿದ್ದಾರೆ. ಇದ್ದುದರಲ್ಲೇ ಕಡಿಮೆ ಖರ್ಚಿನ ಸೋಯಾಬೀನ್, ಗೋವಿನಜೋಳ, ಹತ್ತಿ ಬೆಳೆ ಬಿತ್ತನೆ ಮಾಡಿ ಆಲೂಗಡ್ಡೆಗೆ ಕೈ ಮುಗಿದಿದ್ದಾರೆ. ಆಲೂ ಬೆಳೆಗಾರರೆಂದೇ ಪ್ರಸಿದ್ಧರಾಗಿರುವ ರೈತರು ಪ್ರತಿಷ್ಠೆಗಾದರೂ ಒಂದಿಷ್ಟು ಬಿತ್ತನೆಗೆ ಮುಂದಾಗಿದ್ದಾರೆ.

    ಈ ಹಿಂದೆ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಕುಫ್ರಿ ಜ್ಯೋತಿ ತಳಿಯ ಆಲೂಗಡ್ಡೆ ಬೀಜ ನೀಡಲಾಗಿತ್ತು. ಈ ಭಾಗದಲ್ಲಿ ಅದರ ನಿರೀಕ್ಷೆ ಹುಸಿಯಾಗಿ, ಹತ್ತಾರು ದೂರುಗಳು ಬಂದಿವೆ. ಹಾಗಾಗಿ ಬೀಜ ವಿತರಣೆ ಬಿಟ್ಟು ಆಲೂಗಡ್ಡೆ ವಿಶೇಷ ಪ್ಯಾಕೇಜ್ ಅಡಿ ಪ್ರತಿ ಹೆಕ್ಟೇರ್​ಗೆ 14,800 ರೂ. ನೀಡಲಾಗಿದೆ. ಜಿಲ್ಲೆಯಾದ್ಯಂತ 700 ಹೆಕ್ಟೇರ್ ಆಲೂ ಬಿತ್ತನೆಯ ನಿರೀಕ್ಷೆ ಇದ್ದು, ಇನ್ನಷ್ಟು ಮಳೆಯಾದರೆ ಗುರಿ ತಲುಪುವ ಸಾಧ್ಯತೆ ಇದೆ.

    – ಡಾ. ರಾಮಚಂದ್ರ ಮಡಿವಾಳ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts