More

    ಈ ಬಾರಿ ಪ್ರಮೀಳೆಯರದ್ದೇ ಆಡಳಿತ

    ಲಕ್ಷ್ಮೇಶ್ವರ: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಅಡ್ಡಿಯಾಗಿದ್ದ ಮೀಸಲಾತಿ ಗೊಂದಲಕ್ಕೆ ತೆರೆ ಬಿದ್ದಿದೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

    ಲಕ್ಷ್ಮೇಶ್ವರ ಪುರಸಭೆಗೆ 2018 ಆ. 31ರಂದು ನಡೆದ ಚುನಾವಣೆಯ ಫಲಿತಾಂಶ 2018 ಸೆ.3 ರಂದು ಪ್ರಕಟವಾಗಿತ್ತು. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ವಣವಾಗಿತ್ತು. ಒಟ್ಟು 23 ಸದಸ್ಯರ ಬಲ ಇರುವ ಪುರಸಭೆಗೆ ಕಾಂಗ್ರೆಸ್​ನ 9, ಬಿಜೆಪಿಯ 7, ಜೆಡಿಎಸ್​ನ 2 ಮತ್ತು 5 ಜನ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಎರಡೂ ಪ್ರಮುಖ ಪಕ್ಷಗಳು ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲವನ್ನೇ ಅವಲಂಬಿಸಬೇಕಾಗಿದೆ.

    ಬುಧವಾರವಷ್ಟೇ ಹೊರಬಿದ್ದ ಹೊಸ ಮೀಸಲಾತಿಯಂತೆ ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ(ಅ) ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಇದರಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಪುರುಷ ಸದಸ್ಯರ ಆಸೆಗೆ ತಣ್ಣೀರೆರಚಿದಂತಾಗಿದ್ದು, ಇನ್ನೇನಿದ್ದರೂ ಮಹಿಳೆಯರ ಸಾಮ್ರಾಜ್ಯಕ್ಕೆ ಜೈ ಎನ್ನಬೇಕಿದೆ.

    ಹಿಂದುಳಿದ ವರ್ಗ(ಅ) ಮಹಿಳೆ ಕೋಟಾದಲ್ಲಿ ವಾರ್ಡ್ ನಂ. 2 ಮಂಜುಳಾ ಗುಂಜಳ (ಪಕ್ಷೇತರ), ವಾರ್ಡ್ ನಂ. 3 ರ ಜಯವ್ವ ಅಂದಲಗಿ (ಪಕ್ಷೇತರ), ವಾರ್ಡ್ ನಂ.8 ರ ಯಲ್ಲವ್ವ ದುರಗಣ್ಣವರ (ಬಿಜೆಪಿ) ಮತ್ತು ವಾರ್ಡ್ ನಂ. 18 ರ ಕವಿತಾ ಶರಸೂರಿ (ಬಿಜೆಪಿ) ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳಿದ್ದು, ಇವರಲ್ಲಿ ಇಬ್ಬರು ಪಕ್ಷೇತರರು, ಇಬ್ಬರು ಬಿಜೆಪಿಯವರು. ಒಬ್ಬರು ಪಕ್ಷೇತರರು ಬಿಜೆಪಿಯತ್ತ ಮತ್ತೋರ್ವರು ಕಾಂಗ್ರೆಸ್ ಪರವಾಗಿದ್ದಾರೆ. ಸ್ಥಳೀಯವಾಗಿ ಶಾಸಕ ಮತ್ತು ಸಂಸದರು ಬಿಜೆಪಿಯವರೇ ಇದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಐವರು ಪಕ್ಷೇತರರು ಮತ್ತು ಇಬ್ಬರು ಜೆಡಿಎಸ್ ಸದಸ್ಯರ ನಿರ್ಣಯವೇ ಅಂತಿಮವಾಗಲಿದೆ.

    ಇನ್ನು ಕಾಂಗ್ರೆಸ್​ನಿಂದ 9 ಜನ ಸದಸ್ಯರು ಆಯ್ಕೆಯಾಗಿದ್ದರೂ ಅವರಲ್ಲಿ ಯಾರೊಬ್ಬರೂ ಹಿಂದುಳಿದ ವರ್ಗದ ಮಹಿಳೆ ಇಲ್ಲ. ಪಕ್ಷೇತರರಾಗಿ ಆಯ್ಕೆಯಾಗಿರುವ 3 ನೇ ವಾರ್ಡ್​ನ ಜಯವ್ವ ಅಂದಲಗಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಮುಂದಾದರೂ ಇಬ್ಬರು ಪಕ್ಷೇತರರಾಗಲಿ ಅಥವಾ ಇಬ್ಬರು ಜೆಡಿಎಸ್​ನವರ ಬೆಂಬಲ ಅನಿವಾರ್ಯವಾಗಿದೆ. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷೇತರರರು ಮತ್ತು ಜೆಡಿಎಸ್​ನವರು ಯಾರ ಪರ ಒಲವು ತೋರಲಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.

    ಲಕ್ಷ್ಮೇಶ್ವರದ ರಾಜಕಾರಣವೇ ವಿಶೇಷವಾಗಿದ್ದು, ಪಟ್ಟಣದ ಅಭಿವೃದ್ಧಿಗಾಗಿ ಕಳೆದ ಬಾರಿಯಂತೆ ಸ್ಥಳೀಯ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ (ಕಾಂಗ್ರೆಸ್) ಜಿ.ಎಂ. ಮಹಾಂತಶೆಟ್ಟರ್ (ಬಿಜೆಪಿ) ಅವರು ಲಕ್ಷ್ಮೇಶ್ವರದ ಹಿತಾಭಿವೃದ್ಧಿ ಸಮಿತಿ ವೇದಿಕೆ ರಚಿಸಿ ಆ ಮೂಲಕ ಪಕ್ಷಾತೀತವಾಗಿ ಕೈಗೊಳ್ಳುವ ನಿರ್ಣಯವೇ ಅಂತಿಮವಾದರೆ ಅಚ್ಚರಿ ಪಡಬೇಕಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts