More

    ಇ-ಸ್ವತ್ತು ಖಾತೆಗಳ ವಿತರಣೆಯಲ್ಲಿ ಅಕ್ರಮ, ನಾಲ್ವರ ಅಮಾನತು, ಜಿಪಂ ಸಿಇಒ ಶಿವಶಂಕರ್ ಆದೇಶ

    ಬಾಗೇಪಲ್ಲಿ: ತಾಲೂಕಿನ ಘಂಟಂವಾರಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಇ-ಸ್ವತ್ತು ಖಾತೆಗಳ ವಿತರಣೆಯಲ್ಲಿ ಕಾನೂನು ಉಲ್ಲಂಘನೆ ಹಾಗೂ ಅವ್ಯವಹಾರಗಳನ್ನು ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಪಿಡಿಒಗಳು, ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ.

    4,156 ಇ-ಸ್ವತ್ತು ಖಾತೆಗಳ ವಿತರಣೆಯಲ್ಲಿ ಅವ್ಯವಹಾರಗಳನ್ನು ನಡೆಸಿರುವುದರಿಂದ ಪಿಡಿಒಗಳಾದ ಬಿ.ನಾರಾಯಣಸ್ವಾಮಿ ಮತ್ತು ಸುಲ್ತಾನ್ ಅಜೀಜ್ (ವರ್ಗಾವಣೆಗೊಂಡಿದ್ದಾರೆ), ಕಾರ್ಯದರ್ಶಿ ಧನುಜಾನಾಯಕ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎ.ಎಲ್.ನರಸಿಂಹಮೂರ್ತಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್ ಆದೇಶ ಹೊರಡಿಸಿದ್ದಾರೆ.

    ಬಿ.ನಾರಾಯಣಸ್ವಾಮಿ ಕರ್ತವ್ಯ ಅವಧಿಯಲ್ಲಿ 1,017 ಇ-ಸ್ವತ್ತು ಖಾತೆಗಳು ಮಾಡಿದ್ದು, ತಂತ್ರಾಂಶದಲ್ಲಿ ಭೂ ಪರಿವರ್ತನಾ ಆದೇಶ, ಬಡವಾಣೆ ನಕ್ಷೆ, ಅಸ್ತಿ ಮಾರಾಟಗಾರರ ಕ್ರಯ ಪತ್ರ ಹಾಗೂ ಗ್ರಾಪಂ ಠರಾವು ಪುಸ್ತಕದ ಸಂಖ್ಯೆ ನಮೂದು ಸೇರಿ ಇತರ ಅವಶ್ಯಕ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ. ಈ ಮೂಲಕ ಸರ್ಕಾರಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9 ಮತ್ತು 11ಎ ನೀಡಿದ್ದಾರೆ.

    2020ನೇ ಸಾಲಿನ ಅ.12 ರಿಂದ ಗ್ರಾಪಂ ಕಾರ್ಯದರ್ಶಿಯಾಗಿರುವ ಧನುಜಾ ನಾಯಕ್, ದ್ವಿತೀಯ ದರ್ಜೆ ಸಹಾಯಕ ಎ.ಎಲ್.ನರಸಿಂಹಮೂರ್ತಿ ಇ-ಸ್ವತ್ತು ತಂತ್ರಾಂಶದಲ್ಲಿ ಲಾಗಿನ್ ಆಗುವ ಜವಾಬ್ದಾರಿ ಹೊಂದಿದ್ದರೂ ದಾಖಲೆಗಳ ನೈಜತೆಯನ್ನು ಪರಿಶೀಲಿಸಿಲ್ಲ. ತಂತ್ರಾಂಶದಲ್ಲಿ ನಮೂದಿಸಿಲ್ಲ. ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್ ನಡೆಸಿದ್ದ ತನಿಖೆಯಲ್ಲಿ ನಾಲ್ವರ ಕರ್ತವ್ಯ ಲೋಪ, ಅಧಿಕಾರ ದುರುಪಯೋಗ ಮತ್ತು ನಿಯಮ ಉಲ್ಲಂಘನೆ ದೃಢಪಟ್ಟಿದ್ದರಿಂದ ಅಮಾನತು ಮಾಡಲಾಗಿದೆ.

    ವರ್ಗಾವಣೆಯ ಅಧಿಕಾರಿಗೂ ಕುತ್ತು: ಘಂಟಂವಾರಪಲ್ಲಿ ಗ್ರಾಪಂನಲ್ಲಿ ಕೆಲಸ ನಿರ್ವಹಿಸಿ, ಕೆಲ ತಿಂಗಳುಗಳ ಹಿಂದೆಯಷ್ಟೇ ವರ್ಗಾವಣೆಗೊಂಡಿರುವ ಪಿಡಿಒ ಸುಲ್ತಾನ್ ಅಜೀಜ್ ಅವಧಿಯಲ್ಲಿ ಸಹ 3,139 ಇ-ಸ್ವತ್ತು ಖಾತೆಗಳನ್ನು ವಿತರಿಸಲಾಗಿದೆ. ಇಲ್ಲೂ ಸಮರ್ಪಕ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಅವರನ್ನೂ ಅಮಾನತು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts