More

    ಇಳುವರಿ ಆಸೆಗೆ ರಸಗೊಬ್ಬರ ಅತಿಬಳಕೆ ಅಪಾಯಕಾರಿ

    ಸಂಕೇಶ್ವರ, ಬೆಳಗಾವಿ: ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು. ಸಮೀಪದ ನಿಡಸೋಸಿ ದುರದುಂಡೀಶ್ವರ ಮಠದ ಸಭಾಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಸಾವಯವ ಸಿರಿ ಯೋಜನೆಯಡಿ ಮಂಗಳವಾರ ಹಮ್ಮಿಕೊಂಡಿದ್ದ ಸಾವಯವ ಕೃಷಿಯಲ್ಲಿ ಸಾಮರ್ಥ್ಯ ಅಭಿವೃದ್ಧಿ ಮತ್ತು ಮಾರುಕಟ್ಟೆ ಅವಕಾಶಗಳ ಕುರಿತು ಚಿಕ್ಕೋಡಿ ಉಪವಿಭಾಗ ಮಟ್ಟದ ರೈತ ತರಬೇತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ರೈತರು ಹೆಚ್ಚಿನ ಇಳುವರಿ ಆಸೆಗೆ ರಸಗೊಬ್ಬರಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಭೂಮಿಯ ಫಲವತ್ತತೆ ಜತೆಗೆ ವಿಷಕಾರಿ ಆಹಾರ ತಯಾರಿಸಿ ನಾವೇ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಕಾರ್ಯಕ್ರಮ ಉದ್ಘಾಟಿಸಿದ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಸಾವಯವ ಕೃಷಿ ಎನ್ನುವುದು ಆಯುರ್ವೇದಿಕ್ ಔಷಧ ತರಹ ನಿಧಾನವಾಗಿ ಕಾರ್ಯ ಮಾಡಿದರೂ ಭೂಮಿಯ ಫಲವತ್ತತೆಗೆ ಧಕ್ಕೆ ಮಾಡುವುದಿಲ್ಲ. ಹೀಗಾಗಿ ಸರ್ಕಾರವೇ ಸಾವಯವ ಕೃಷಿಯನ್ನು ಝಿರೋ ಬಜೆಟ್ ಕೃಷಿ ಎಂದು ಗುರುತಿಸಿದ್ದು, ರೈತರು ಇದನ್ನು ಅಳವಡಿಸಿಕೊಳ್ಳಬೇಕು ಎಂದರು. ಧಾರವಾಡ ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕಿ ಕವಿತಾ ಸಿ. ಮಾತನಾಡಿದರು. ಮಾರುಕಟ್ಟೆ ಮತ್ತು ಮೌಲ್ಯವರ್ಧನೆ ಕುರಿತು ಡಾ. ರಮ್ಯಾ ಎಚ್.ಜಿ., ಕಬ್ಬಿನಲ್ಲಿ ಆಧುನಿಕ ತಂತ್ರಜ್ಞಾನಗಳ ಕುರಿತು ಡಾ. ಮಂಜುನಾಥ ಚವರಡ್ಡಿ, ಸಿರಿಧಾನ್ಯಗಳ ಮೌಲ್ಯವರ್ಧನೆ ಕುರಿತು ಭಾರತಿ ಬಡಿಗೇರ ಪ್ರಾಯೋಗಿಕ ತರಬೇತಿ ನೀಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿಲೀಪ ಕುರುಂದವಾಡೆ, ಕೃಷಿ ಅಧಿಕಾರಿಗಳಾದ ಉದಯ ಆಗನೂರ, ರಾಘವೇಂದ್ರ ತಳವಾರ, ಶಿವಾನಂದ ಕಮತ, ಮಂಜುನಾಥ ಜನಮಟ್ಟಿ, ಮಹೇಶ ಮಠದ, ಜಿಲ್ಲಾ ಕೃಷಿ ತರಬೇತಿ ನಿರ್ದೇಶಕಿ ಶೈಲಕಾ ಬೆಳಂಕಿಮಠ, ಎಂ.ಎಸ್.ಪಟಗುಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts