More

    ಇನ್ಮುಂದೆ ಅಂಗನವಾಡಿಗಳು ಡಿಜಿಟಲ್!

    ಶಿರಸಿ: ಜಿಲ್ಲೆಯ ಎಲ್ಲ ಅಂಗನವಾಡಿಗಳ ಕಾರ್ಯಚಟುವಟಿಕೆಗಳು ಇನ್ನು ಮುಂದೆ ಡಿಜಿಟಲೀಕರಣಗೊಳ್ಳಲಿದೆ. ಇದು ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ತ್ವರಿತವಾಗಿ ದೂರ ಮಾಡಲು ಹಾಗೂ ಅಂಗನವಾಡಿಗಳ ದಾಖಲೆಗಳ ಸುರಕ್ಷತೆಗೆ ಪೂರಕವಾಗಲಿದೆ.

    ರಾಷ್ಟ್ರೀಯ ಪೋಷಣಾ ಅಭಿಯಾನದಲ್ಲಿ ಅಂಗನವಾಡಿ ಶಿಕ್ಷಕಿಯರು ಹಾಗೂ ಮೇಲ್ವಿಚಾರಕರು ಸೇರಿ ಒಟ್ಟು ಜಿಲ್ಲೆಯಲ್ಲಿ 2788 ಆಂಡ್ರಾಯ್್ಡ ಮೊಬೈಲ್ ಫೋನ್​ಗಳನ್ನು ವಿತರಿಸಲಾಗುತ್ತಿದೆ.

    ಸ್ನೇಹ ಆಪ್​ಗಳ ಮೂಲಕ 3ರಿಂದ 6 ವರ್ಷದ ಮಕ್ಕಳ ದಾಖಲಾತಿ, ಹೊಸದಾಗಿ ಬಂದ ಹಾಗೂ ವರ್ಗಾವಣೆಯಾದ ಮಕ್ಕಳ ಸೇರ್ಪಡೆ, ಶಾಲಾ ಪೂರ್ವ ಶಿಕ್ಷಣದ ದಾಖಲೆಗಳು, ಮಕ್ಕಳ ಹಾಜರಾತಿ ಹಾಗೂ ಮಕ್ಕಳ ಸಂಪೂರ್ಣ ವಿವರ, ಸಮುದಾಯ ಆಧಾರಿತ ಚಟುವಟಿಕೆಗಳ ವಿವರಗಳನ್ನು ಭಾವಚಿತ್ರಗಳ ಮೂಲಕ ಅಳವಡಿಸುವುದು, ಬಾಲವಿಕಾಸ ಸಮಿತಿ ಸಭೆಯ ರ್ಚಚಿತ ಮಾಹಿತಿ, ಮಕ್ಕಳ ಆಹಾರ ವಿತರಣೆ, ಮಕ್ಕಳ ಬೆಳವಣಿಗೆಗೆ ಸ್ಟಂಟಿಂಗ್, ವೇಸ್ಟಿಂಗ್, ಅಪೌಷ್ಟಿಕ ಮಕ್ಕಳ ವಿವರ ಕೇಂದ್ರದಲ್ಲಿ ನಡೆಯುವ ಘಟನೆಗಳು ಹಾಗೂ ಕಾರ್ಯಚಟುವಟಿಕೆಗಳನ್ನು ಇಲಾಖೆ ಒದಗಿಸುವ ಆಪ್​ಗೆ ಅಂಗನವಾಡಿ ಶಿಕ್ಷಕಿಯರು ಅಪ್​ಲೋಡ್ ಮಾಡಬೇಕು. ಅದನ್ನು ಅಂಗನವಾಡಿ ಮೇಲ್ವಿಚಾರಕಿಯರು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಅಂಗನವಾಡಿ ಕೇಂದ್ರದ ಎಲ್ಲ ದಾಖಲೆಗಳು ರಕ್ಷಣೆಯಾಗಲಿವೆ. ಜತೆ, ಅಗತ್ಯವಿರುವ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಾಯವಾಗಲಿದೆ.

    ಸರ್ಕಾರವೇ ಭರಿಸಲಿ: ಈ ಮೊದಲು ಅಂಗನವಾಡಿ ಕೇಂದ್ರದಲ್ಲಿ ನಡೆಯುವ ಎಲ್ಲ ಕಾರ್ಯಚಟುವಟಿಕೆಗಳನ್ನು ಪಠ್ಯಕ್ಕೆ ಇಳಿಸಿ ಅವನ್ನು ತಾಲೂಕು ಕಚೇರಿಗೆ ನೀಡಲು ವಾರಕ್ಕೊಮ್ಮೆಯಾದರೂ ತೆರಳಬೇಕಿತ್ತು. ಈಗ ಎಲ್ಲವೂ ಮೊಬೈಲ್​ನಲ್ಲೇ ಆಗುವುದರಿಂದ ಅನಗತ್ಯ ಓಡಾಟಕ್ಕೆ ಮುಕ್ತಿ ದೊರೆತಂತಾಗಲಿದೆ. ಆದರೆ, ಸರ್ಕಾರದಿಂದ ಉಚಿತವಾಗಿ ಮೊಬೈಲ್ ಪೋನ್ ಹಾಗೂ ಇತರ ಉಪಕರಣಗಳನ್ನು ನೀಡಲಾಗುತ್ತಿದ್ದರೂ ಸಿಮ್ ಹಾಗೂ ಇಂಟರ್ನೆಟ್ ಮೊತ್ತವನ್ನು ಮಾತ್ರ ಅಂಗನವಾಡಿ ಶಿಕ್ಷಕಿಯರು ಹಾಗೂ ಮೇಲ್ವಿಚಾರಕಿಯರೇ ಭರಿಸಬೇಕಿದೆ. ತಿಂಗಳಿಗೆ ಕನಿಷ್ಠ 150ರಿಂದ 200 ರೂಪಾಯಿ ಇಂಟರ್ನೆಟ್ ಬಳಕೆಗೆ ಬೇಕಿದೆ. ಇದನ್ನು ಭರಿಸುವುದು ಹೇಗೆ? ತಕ್ಷಣ ಉಚಿತ ಸಿಮ್ ಹಾಗೂ ಇಂಟರ್​ನೆಟ್ ಸೌಲಭ್ಯ ಅಥವಾ ಅದಕ್ಕೆ ತಗುಲುವು ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂಬುದು ಅಂಗನವಾಡಿ ಶಿಕ್ಷಕಿಯರ ಅಭಿಪ್ರಾಯವಾಗಿದೆ.

    ಅಂಗನವಾಡಿ ಕಾರ್ಯಚಟುವಟಿಕೆ ಡಿಜಿಟಲೀಕರಣದಿಂದ ಅಪೌಷ್ಟಿಕ ಸಮಸ್ಯೆ ಹೋಗಲಾಡಿಸಲು ಸಾಧ್ಯವಾಗಲಿದೆ. ಕಾಲಕಾಲಕ್ಕೆ ದಾಖಲೆಗಳನ್ನು ಅಪ್​ಲೋಡ್ ಮಾಡುವುದರಿಂದ ಗರ್ಭಿಣಿಯರು, ಬಾಣಂತಿಯರಿಗೆ ಚಿಕಿತ್ಸೆ ನೀಡಲು ಸಹಾಯವಾಗಲಿದೆ. ಜತೆ, ಮಕ್ಕಳಲ್ಲಿ ಕಾಣುವ ರಸ್ತಹೀನತೆ, ಅಪೌಷ್ಟಿಕತೆ, ಕಡಿಮೆ ತೂಕದ ಸಮಸ್ಯೆಯನ್ನು ಕಾಲಕಾಲಕ್ಕೆ ತ್ವರಿತವಾಗಿ ಪರಿಹರಿಸಲು ಅನುಕೂಲವಾಗಲಿದೆ. | ದತ್ತಾತ್ರೇಯ ಭಟ್ಟ ಸಿಡಿಪಿಒ ಶಿರಸಿ

    ತಾಲೂಕಾವಾರು ಮೊಬೈಲ್ ಸಂಖ್ಯೆ ಶಿರಸಿ, 364, ಸಿದ್ದಾಪುರ 230, ಯಲ್ಲಾಪುರ 204, ಮುಂಡಗೋಡ 193, ಹಳಿಯಾಳ 239, ಜೊಯಿಡಾ 200, ಕಾರವಾರ 255, ಅಂಕೋಲಾ 238, ಕುಮಟಾ 293, ಹೊನ್ನಾವರ 338, ಭಟ್ಕಳ 234

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts