More

    ಇದು ನನ್ನ ಗೆಲುವಲ್ಲ, ಕಾರ್ಯಕರ್ತರ ಗೆಲುವು

    ಕೆ.ಆರ್.ಪೇಟೆ: ಇದು ನನ್ನ ಗೆಲುವಲ್ಲ. ಇದು ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಕಾರ್ಯಕರ್ತರ ಗೆಲುವು ಎಂದು ಜೆಡಿಎಸ್ ಶಾಸಕ ಎಚ್.ಟಿ.ಮಂಜು ಹೇಳಿದರು.
    ಜೆಡಿಎಸ್ ಕಾರ್ಯಕರ್ತರ ಪಕ್ಷ. ಎಂತಹ ಕಠಿಣ ಸಂದರ್ಭದಲ್ಲಿಯೂ ಮೇಲೆದ್ದು ಬರುವ ಪಕ್ಷವಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ನಿಮ್ಮ ಮಧ್ಯೆ ನಿಂತು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಾನು ಗ್ರಾಮೀಣ ಪ್ರದೇಶದಿಂದ ಬಂದವನಾಗಿದ್ದು, ಎಲ್ಲ ವರ್ಗದ ಜನರ ಕಷ್ಟ ಗೊತ್ತಿದೆ. ಯುವಕರಿಗೆ ಉದ್ಯೋಗ, ರೈತರ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ನಾನು ನನ್ನದೇ ಆದ ಕನಸು ಕಂಡಿದ್ದೇನೆ. ಅವುಗಳ ಈಡೇರಿಕೆಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ನಿಖಿಲ್ ಕುಮಾರಸ್ವಾಮಿ, ಸಿ.ಎಸ್.ಪುಟ್ಟರಾಜು ಸೇರಿದಂತೆ ಜಿಲ್ಲೆಯಲ್ಲಿ ಪ್ರಮುಖ ನಾಯಕರು ಸೋತಿರುವುದು ಬೇಸರ ತರಿಸಿದೆ. ಕಾರ್ಯಕರ್ತರು ಚುನಾವಣಾ ಸಮಯದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದು, ನಿಮ್ಮ ನಿಮ್ಮ ಗ್ರಾಮಗಳಲ್ಲಿ ಎಲ್ಲವನ್ನೂ ಮರೆತು ಶಾಂತಿಯಿಂದ ಕೆಲಸ ಮಾಡಬೇಕಿದೆ. ನನ್ನ ಗೆಲುವಿಗೆ ಹಗಲು-ರಾತ್ರಿ ಶ್ರಮಿಸಿದ್ದ ಎಲ್ಲ ಮತದಾರರಿಗೆ ನನ್ನ ಹಾಗೂ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
    ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮು ಮಾತನಾಡಿ, ತಾಲೂಕಿನ ಜನತೆ ಜೆಡಿಎಸ್‌ಅಭ್ಯರ್ಥಿ ಮಂಜುಗೆ 80,000ಕ್ಕೂ ಹೆಚ್ಚು ಮತಗಳನ್ನು ನೀಡಿದ್ದಾರೆ. ತಾಲೂಕಿನಾದ್ಯಂತ ಶಾಂತಿಯುತವಾಗಿ ಎಲ್ಲ ಕೆಲಸ ಕಾರ್ಯಗಳು ಸಾಗಬೇಕಿದೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದರು.
    ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಮಾತನಾಡಿ, ಎಲ್ಲ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದೀರಿ. ಚುನಾವಣಾ ಸಮಯದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಗ್ರಾಮದಲ್ಲಿ ದ್ವೇಷ ಸಾಧಿಸದೆ ಹೊಂದಾಣಿಕೆಯಿಂದ ದೈನಂದಿನ ಬದುಕು ಸಾಗಿಸಬೇಕು ಎಂದರು.
    ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಧನಂಜಯ, ಜೆಡಿಎಸ್ ಮುಖಂಡರಾದ ಎ.ಆರ್.ರಘು, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ಜಿಲ್ಲಾ ಜೆಡಿಎಸ್ ಹಿರಿಯ ಉಪಾಧ್ಯಕ್ಷ ನಾಗೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts