More

    ಇತರೆ ರೋಗಿಗಳಿಗೆ ಸಿಗುತ್ತಿಲ್ಲ ಚಿಕಿತ್ಸೆ

    ಭಟ್ಕಳ: ಒಂದೆಡೆ ತಾಲೂಕಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತಿವೆ. ಸರ್ಕಾರ ಹೋಮ್ ಐಸೋಲೇಶನ್​ಗೆ ಅವಕಾಶ ಮಾಡಿಕೊಟ್ಟರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ತಾಲೂಕಿನ 100 ಬೆಡ್​ಗಳ ಆಸ್ಪತ್ರೆ ತುಂಬಿದ್ದು, ಇತರ ರೋಗಗಳಿಂದ ಬಳಲುವ ಒಳರೋಗಿಗಳು ತೊಂದರೆ ಅನುಭವಿಸುವಂತಾಗಿದೆ.

    ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜನರು ಆರಂಭದಲ್ಲೆ ಕೋವಿಡ್ ಪರೀಕ್ಷೆ ನಡೆಸದೆ ರೋಗ ಲಕ್ಷಣಗಳು ಉಲ್ಬಣಿಸಿದ ಬಳಿಕ ಆಸ್ಪತ್ರೆಗೆ ತೆರಳಿ ಅಲ್ಲೆ ಉಳಿದುಕೊಳ್ಳುತ್ತಿದ್ದಾರೆ. ಪರಿಣಾಮ ಭಟ್ಕಳದ 100 ಬೆಡ್​ಗಳ ಆಸ್ಪತ್ರೆ ಕೋವಿಡ್ ಸೋಂಕಿತರಿಂದ ತುಂಬಿದೆ. ಇದರಿಂದ ರಸ್ತೆ ಅಪಘಾತ, ಹಾವು ಕಡಿತ ಸೇರಿ ತುರ್ತು ಪರಿಸ್ಥಿತಿ ಎದುರಾದರೆ ಅಂತಹ ರೋಗಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಶೇ. 20 ಬೆಡ್​ಗಳನ್ನು ತುರ್ತು ಪರಿಸ್ಥಿತಿಗೆ ಕಾಯ್ದಿರಿಸಬೇಕು ಎನ್ನುವ ನಿಯಮ ಪಾಲನೆ ಆಗುತ್ತಿಲ್ಲ.

    ತಾಲೂಕಿನಲ್ಲಿ ಅನೇಕ ಖಾಸಗಿ ನರ್ಸಿಂಗ್ ಹೋಮ್ ಆಸ್ಪತ್ರೆಗಳಿದ್ದರೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಇದರಿಂದ ಕೋವಿಡ್ ಸೋಂಕಿತ ರೋಗಿ ಭಟ್ಕಳದ ತಾಲೂಕಾಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಮುರ್ಡೆಶ್ವರದ ಪ್ರಸಿದ್ಧ ಖಾಸಗಿ ಆಸ್ಪತ್ರೆಯೂ ಕೋವಿಡ್ ರೋಗಿಗಳನ್ನು ಒಳ ಸೇರಿಸುತ್ತಿಲ್ಲ. ರ್ಯಾಪಿಡ್ ಟೆಸ್ಟ್ ಮಾಡಿಸಿ ಅಲ್ಲಿಂದ ಹೊರ ಹಾಕಲಾಗುತ್ತಿದೆ. ಅಷ್ಟೆ ಅಲ್ಲದೆ, ಚರ್ಮರೋಗ, ಬೆನ್ನು ನೋವು, ಸೊಂಟ ನೋವು, ಹೃದಯದ ಸಮಸ್ಯೆ ಸೇರಿ ಇತರ ಸಮಸ್ಯೆಗಳಿರುವ ರೋಗಿಗಳಿಗೆ ತಾಲೂಕಿನ ಯಾವ ಆಸ್ಪತ್ರೆಯಲ್ಲೂ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ರೋಗಿಗಳು ಮತ್ತಷ್ಟು ಭೀತಿ ಅನುಭವಿಸುವಂತಾಗಿದೆ.

    ತಾಲೂಕಾಸ್ಪತ್ರೆ ಈಗ ಕೇಂದ್ರೀಕೃತ ಆಕ್ಸಿಜನ್ ಕೇಂದ್ರ: ಭಟ್ಕಳ ತಾಲೂಕಾಸ್ಪತ್ರೆ ಈಗ ಸೆಂಟ್ರಲೈಸ್ಡ್ ಆಕ್ಸಿಜನ್ ಕೇಂದ್ರವನ್ನಾಗಿ ಮಾರ್ಪಡಿಸಲಾಗಿದೆ. ಮೊದಲ ಹಂತದಲ್ಲಿ 50 ಬೆಡ್​ಗಳಿಗೆ ಆಕ್ಸಿಜನ್ ಸೌಲಭ್ಯ ಕಲ್ಪಿಸಲಾಗಿದೆ. ಈ ಕುರಿತು ಎಲ್ಲ ತಯಾರಿಗಳು ಮುಗಿದಿದ್ದು, ಮ್ಯಾನಿಪೋಲ್ಡ್ ಕಂಪ್ರೆಶರ್ ಮತ್ತು ಜಂಬೊ ಸಿಲೆಂಡರ್ ಫಿಟ್ ಮಾಡಿದರೆ ಸೆಂಟ್ರಲೈಸಡ್ ಆಕ್ಸಿಜನ್ ಸೌಲಭ್ಯ ಭಟ್ಕಳದ ಜನತೆಗೆ ಲಭಿಸಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ ತಿಳಿಸಿದ್ದಾರೆ.

    ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಹೊನ್ನಾವರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ಮುಂದೆ ಬಂದಿದೆ. ಭಟ್ಕಳದಲ್ಲೂ ಚಿಕಿತ್ಸೆ ನೀಡವಂತೆ ತಿಳಿಸಲಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಈ ಕುರಿತು ಮಾತುಕತೆ ನಡೆಸಲಿದ್ದಾರೆ. ಆಸ್ಪತ್ರೆಗೆ ಬಂದ ರೋಗಿಗಳಿಗೆ ಸರಿಯಾಗಿ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಬೇಕು. ಈ ಕುರಿತು ದೂರು ಬಂದಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.

    | ಡಾ.ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts