More

    ಇಎಸ್​ಐನಲ್ಲಿ ಪ್ರತ್ಯೇಕ ಜ್ವರ ಚಿಕಿತ್ಸಾ ಘಟಕ

    ಹುಬ್ಬಳ್ಳಿ: ಜ್ವರ, ನೆಗಡಿ, ಕೆಮ್ಮು ಇರುವವರಿಗಾಗಿ ಚಿಕಿತ್ಸೆ ನೀಡಲು ನಗರದ ಇಎಸ್​ಐ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಬಳಿ ಪ್ರತ್ಯೇಕ ಘಟಕ ಪ್ರಾರಂಭಿಸಲಾಗಿದೆ.

    ಕಳೆದ 4 ದಿನಗಳಿಂದ ಕಾರ್ಯನಿರ್ವಹಿ ಸುತ್ತಿರುವ ಈ ಘಟಕದಿಂದ ನೆಗಡಿ, ಕೆಮ್ಮು, ಜ್ವರ ಇರುವವರನ್ನು ತಪಾಸಣೆ ಮಾಡಲಾಗುತ್ತಿದೆ. ಸಾಮಾನ್ಯ ಜ್ವರ, ನೆಗಡಿ, ಕೆಮ್ಮುಗಳಿಗೆ ಆಸ್ಪತ್ರೆಯಲ್ಲಿಯೇ ಮಾತ್ರೆ ನೀಡಲಾಗುತ್ತಿದೆ. ಚಿಕಿತ್ಸೆಗಾಗಿ ಬರುವ ರೋಗಿಗಳ ವಾಸ, ಇತ್ತೀಚಿನ ದಿನಗಳಲ್ಲಿ ಕೈಗೊಂಡಿರುವ ಪ್ರವಾಸ ಮತ್ತಿತರ ಮಾಹಿತಿ ಪಡೆಯಲಾಗುತ್ತಿದೆ. ಚಿಕಿತ್ಸೆಗೆ ಬಂದವರು ಬೇರೆಡೆಯಿಂದ ಬಂದಿದ್ದರೆ ಹಾಗೂ ಅವರಿಗೆ ಕರೊನಾ ಲಕ್ಷಣಗಳಿದ್ದರೆ ಅವರನ್ನು ಕಿಮ್ಸ್​ಗೆ ರವಾನಿಸಲಾಗುತ್ತಿದೆ.

    ಎಲ್ಲಿಯೂ ಪ್ರವಾಸ ಮಾಡದೆ, ಮನೆಯಲ್ಲಿ ಇದ್ದ ಕೆಲವರು ತಮಗೂ ಕರೊನಾ ಸೋಂಕು ಇರಬಹುದೆಂಬ ಭೀತಿಯಿಂದಲೂ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಅಂಥವರ ಇತಿಹಾಸ ಅರಿತುಕೊಂಡು, ಅವರಿಗೆ ಧೈರ್ಯ ಹೇಳುವ ಮೂಲಕ ಭೀತಿ ದೂರ ಮಾಡುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರಾದ ಡಾ. ಚನ್ನಗೌಡ್ರ ‘ವಿಜಯವಾಣಿ’ಗೆ ತಿಳಿಸಿದರು.

    ಇದುವರೆಗೆ ಕರೊನಾ ಸೋಂಕಿನ ಶಂಕೆ ಇದ್ದವರು ಆಸ್ಪತ್ರೆಗೆ ಬಂದಿಲ್ಲ. ಆದರೆ, ಸ್ವಲ್ಪ ಜ್ವರ, ನೆಗಡಿ, ಕೆಮ್ಮು ಇದ್ದರೂ ತಮಗೆ ಕರೊನಾ ಸೋಂಕು ಹರಡಿರಬಹುದೆಂದು ಆತಂಕಗೊಂಡು ಅನೇಕರು ಬಂದಿದ್ದಾರೆ. ಅಂಥವರ ತಪಾಸಣೆ ಮಾಡಿ, ಕರೊನಾ ಸೋಂಕಿನ ಯಾವುದೇ ಲಕ್ಷಣ ಇಲ್ಲವೆಂದು ಧೈರ್ಯ ತುಂಬಲಾಗಿದೆ ಎಂದು ಡಾ. ಚನ್ನಗೌಡ್ರ ಹೇಳಿದರು.

    ಕರಾಟೆಯಲ್ಲಿ ಗೆದ್ದ ಹಣ ಪರಿಹಾರ ನಿಧಿಗೆ

    ಹುಬ್ಬಳ್ಳಿ: ನಗರದ ಬಾಲಕಿಯೊಬ್ಬಳು ಕರಾಟೆ ಸ್ಪರ್ಧೆಯಲ್ಲಿ ಗೆದ್ದಿರುವ ನಗದು ಬಹುಮಾನವನ್ನು ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾಳೆ. ನಗರದ ಉಣಕಲ್​ನ ಅನನ್ಯ ತಡಸದ ಎಂಬ ಬಾಲಕಿ ಜಿಲ್ಲಾಧಿಕಾರಿಯವರಿಗೆ ಧ್ವನಿ ಸಂದೇಶ ಕಳುಹಿಸುವ ಮೂಲಕ ತಾನು ಕರಾಟೆ ಸ್ಪರ್ಧೆಯಲ್ಲಿ ಗೆದ್ದಿರುವ 5 ಸಾವಿರ ರೂ. ಬಹುಮಾನದ ಮೊತ್ತವನ್ನು ಕರೊನಾ ಪರಿಹಾರ ನಿಧಿಗೆ ನೀಡುವುದಾಗಿ ತಿಳಿಸಿದ್ದಾಳೆ. ಅನನ್ಯ ಹಾಗೂ ಆಕೆಯ ಸಹೋದರಿ ಕರಾಟೆ ಚಾಂಪಿಯನ್ ಆಗಿದ್ದು, ಸ್ಪರ್ಧೆಯಿಂದ ಗೆದ್ದಿರುವ ಹಣವನ್ನು ಕರೊನಾ ಚಿಕಿತ್ಸೆಗೆ ನೀಡಲು ಮುಂದಾಗಿರುವುದು ಪ್ರಶಂಸೆಗೆ ಪಾತ್ರವಾಗಿದೆ.

    ಕರೊನಾ ಕುರಿತ ದೂರುಗಳಿವೆಯೇ?

    ಹುಬ್ಬಳ್ಳಿ: ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರೊನಾ ಸೋಂಕು (ಕೋವಿಡ್-19) ಗೆ ಸಂಬಂಧಿಸಿದಂತೆ ಯಾವುದಾದರೂ ಅಹವಾಲುಗಳು ಅಥವಾ ದೂರುಗಳು ಇದ್ದಲ್ಲಿ ಅಂತಹ ಸಂದೇಶಗಳನ್ನು ಸಾರ್ವಜನಿಕರು ನೇರವಾಗಿ ಪೊಲೀಸ್ ಕಂಟ್ರೋಲ್ ರೂಮ್ ವಾಟ್ಸ್ ಆಪ್ ಮೊಬೈಲ್ ನಂ. 94808 02002ಗೆ ಸಲ್ಲಿಸಲು ಕೋರಲಾಗಿದೆ. ಸೋಂಕಿಗೆ ಸಂಬಂಧಿಸಿ ಯಾವುದೇ ಸುಳ್ಳು ಸುದ್ದಿಗಳನ್ನು ಕಳುಹಿಸಬಾರದು, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಬಾರದು. ಒಂದು ವೇಳೆ ಶಾಂತತೆ ಭಂಗ ಮಾಡಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅಂತರ ಕಾಯ್ದುಕೊಂಡು ಪಡಿತರ ವಿತರಣೆ

    ನವಲಗುಂದ: ತಾಲೂಕಿನ ಹಾಲಕುಸುಗಲ್ ಗ್ರಾಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಶನಿವಾರ ಪಡಿತರ ವಿತರಣೆ ಮಾಡಲಾಯಿತು. ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ನಾಗರಿಕರಿಗೆ ನೀಡುತ್ತಿರುವ ಅಕ್ಕಿಯನ್ನು ವಿತರಣೆ ಮಾಡಲಾಯಿತು. ಸಂಘದ ಎದುರು ಫಲಾನುಭವಿಗಳು ನಿಲ್ಲಲು ಮಾರ್ಕಿಂಗ್ ಮಾಡಲಾಗಿತ್ತು. ಫಲಾನುಭವಿಗಳು ತಮಗೆ ಗುರುತಿಸಿದ ಜಾಗದಲ್ಲೇ ನಿಂತು ಯಾವುದೇ ಸಮಸ್ಯೆ ಆಗದೆ ಪಡಿತರ ಪಡೆದುಕೊಂಡರು. ಕರೋನಾ ಸೋಂಕು ಹರಡದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ.

    ಸೋಂಕು ತಡೆಗೆ ಶಿಕ್ಷಕರ ನಿಯೋಜನೆ ಬೇಡ

    ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದನ್ನು ತಡೆಯಲು 100 ಪ್ರಾಥಮಿಕ ಹಾಗೂ 900 ದ್ವಿತೀಯ ಸಂಪರ್ಕ ತಂಡಗಳನ್ನು ರಚಿಸಿರುವುದು ಸ್ವಾಗತಾರ್ಹ. ಆದರೆ, ಇದರಲ್ಲಿ ಶಿಕ್ಷಕರಿಗಷ್ಟೇ ಕೆಲಸ ವಹಿಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ‘ಜನಗಣತಿ, ದನ ಗಣತಿ, ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನು ನೇಮಕ ಮಾಡಬಾರದು. ಇತರೆ ಇಲಾಖೆಯ ಸಿಬ್ಬಂದಿಯನ್ನೂ ನಿಯೋಜಿಸಬೇಕು ಎಂದು ತಾವು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಇದ್ದಾಗ ಸೂಚನೆ ನೀಡಿದ್ದಿರಿ. ಆದರೆ, ಈಗ ಕರೊನಾ ಸೋಂಕು ತಡೆಯುವ ತಂಡದಲ್ಲಿ ಶಿಕ್ಷಕರನ್ನು ನಿಯೋಜಿಸುವುದು ಸರಿಯಲ್ಲ. ಎಲ್ಲ ಇಲಾಖೆಯ ಸಿಬ್ಬಂದಿಯನ್ನೂ ಅವರ ಸಂಖ್ಯೆಗೆ ಅನುಗುಣವಾಗಿ ನೇಮಿಸುವುದು ಸರಿ. ಈ ಹಿನ್ನೆಲೆಯಲ್ಲಿ ಮರು ಪರಿಶೀಲಿಸಬೇಕು. ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts