More

    ಇಂಧನ ಬೆಲೆ ಏರಿಕೆ ತಾತ್ಕಾಲಿಕ

    ಹುಬ್ಬಳ್ಳಿ: ಲಾಕ್​ಡೌನ್​ನ ಈ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಲ್ಯಾಣ ಕಾರ್ಯದಲ್ಲಿ ನಿರತವಾಗಿರುವುದರಿಂದ ಇಂಧನ ಬೆಲೆ ಏರಿಕೆ ತಾತ್ಕಾಲಿಕ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿಯೂ ಇಂಧನ ಬೆಲೆ ಏರಿಕೆಯಾಗಿತ್ತು. ಆದರೆ, ಆ ಸಮಯದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಇತ್ತು ಎಂದರು.

    ಇಂಧನ ಬೆಲೆ ಏರಿಕೆ ಇದೇ ರೀತಿಯಲ್ಲಿ ಮುಂದುವರಿಯುವುದಿಲ್ಲ. ಲಾಕ್​ಡೌನ್ ನಂತರ ಇಂಧನ ಬೆಲೆಯಲ್ಲಿ ಇಳಿಕೆಯಾಗಬಹುದು ಎಂದು ಹೇಳಿದರು.

    ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗುವತ್ತ ಮಹತ್ವದ ಹೆಜ್ಜೆ ಇರಿಸಿದ್ದು, ಮುಂದಿನ ದಿನಗಳಲ್ಲಿ ಆಮದು ಕಡಿಮೆ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 2023ರವರೆಗೆ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸುವ ಗುರಿಯನ್ನು ಕೋಲ್ ಇಂಡಿಯಾ ಸಂಸ್ಥೆ ಹೊಂದಿದೆ ಎಂದು ತಿಳಿಸಿದರು.

    ಕೋಲ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆ ಇಲ್ಲ. ಆದರೆ, ಬ್ಲಾಕ್​ಗಳನ್ನು ಖಾಸಗಿಯವರಿಗೆ ಹರಾಜಿನ ಮೂಲಕ ನೀಡಲಾಗುವುದು. ವಿದ್ಯುತ್ ಬೇಡಿಕೆ ಏರುತ್ತಿರುವುದರಿಂದ ಸರ್ಕಾರ ಹಾಗೂ ಖಾಸಗಿ ವಲಯಗಳು ಕಲ್ಲಿದ್ದಲು ಉತ್ಪಾದಿಸಬೇಕಿದೆ ಎಂದು ಹೇಳಿದರು.

    20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್​ನಡಿ ಜಿಲ್ಲೆಗೆ ದೊರಕಿದ ಸೌಲಭ್ಯಗಳನ್ನು ವಿವರಿಸಿದ ಸಚಿವ ಜೋಶಿ, ಲಾಕ್​ಡೌನ್ ಅವಧಿಯಲ್ಲಿ ಧಾರವಾಡ ಜಿಲ್ಲೆಯ ಎಂಎಸ್​ಎಂಇಗಳ 4,832 ಖಾತೆಗಳಿಗೆ 238.34 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದರು.

    ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 115 ಕೋಟಿ ರೂ. ಹಣವನ್ನು 1.10 ಲಕ್ಷ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ.

    ಜನಧನ ಖಾತೆ ಹೊಂದಿದ ಮಹಿಳೆಯರಿಗೆ ತಿಂಗಳಿಗೆ 500 ರೂ.ಗಳಂತೆ 3 ತಿಂಗಳ ಸಹಾಯ ಧನವನ್ನು ಜಿಲ್ಲೆಯ ಸುಮಾರು 4 ಲಕ್ಷ ಫಲಾನುಭವಿಗಳಿಗೆ ಒದಗಿಸಲಾಗಿದೆ ಎಂದರು.

    ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ದಿವ್ಯಾಂಗ ವೇತನದಾರರಿಗೆ 2 ಕಂತುಗಳಲ್ಲಿ ಒಟ್ಟು ರೂ. 2,814.5 ಕೋಟಿ ರೂ. ವಿತರಿಸಲಾಗಿದೆ. ಜಿಲ್ಲೆಯ ಒಟ್ಟು 1,78,630 ಫಲಾನುಭವಿಗಳು ಇದರ ಲಾಭ ಪಡೆದಿದ್ದು, 32 ಕೋಟಿ ರೂ. ಹಣ ವರ್ಗಾಯಿಸಲಾಗಿದೆ. ಸ್ವಾವಲಂಬಿ ಭಾರತ ಯೋಜನೆಯಡಿ ಜಿಲ್ಲೆಯ 15,664 ವಲಸೆ ಕಾರ್ವಿುಕರಿಗೆ ಆಹಾರ ಧಾನ್ಯ ವಿತರಿಸಲಾಗಿದೆ.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅಡಿ ಉಜ್ವಲಾ ಯೋಜನೆಯಡಿ ಜಿಲ್ಲೆಯಲ್ಲಿ 1,10,231 ಉಚಿತ ಗ್ಯಾಸ್ ವಿತರಣೆ ಮಾಡಲಾಗಿದೆ. ನರೇಗಾ ಯೋಜನೆಯಡಿ ಕಳೆದ ಮಾ. 1ರಿಂದ ಜೂ. 30ರವರೆಗೆ 4,298 ಕಾಮಗಾರಿಗಳನ್ನು ಆರಂಭಿಸಿ, 7,05,724 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ ಮತ್ತು ಇದಕ್ಕಾಗಿ 26.81 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

    ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಎಸ್.ವಿ. ಸಂಕನೂರು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

    ಎಸ್​ಡಿಎಂನಲ್ಲಿ ಕೋವಿಡ್ ಲ್ಯಾಬೊರೇಟರಿ

    ಧಾರವಾಡದ ಎಸ್​ಡಿಎಂ ಆಸ್ಪತ್ರೆಯಲ್ಲಿಯೂ ಕೋವಿಡ್ ಪರೀಕ್ಷಾ ಕೇಂದ್ರ ಶೀಘ್ರ ಪ್ರಾರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಶುಕ್ರವಾರದಂದು 12 ಜನ ಕರೊನಾ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಗಳು ಸೋಂಕಿತರಿಗೆ ಚಿಕಿತ್ಸೆ ನೀಡಬೇಕು. ಈ ಕುರಿತು ಜಿಲ್ಲಾಧಿಕಾರಿಯವರು ಖಾಸಗಿ ಆಸ್ಪತ್ರೆಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts