More

    ಇಂಧನವಾಗಲಿದೆ ಹುಬ್ಬಳ್ಳಿ ತ್ಯಾಜ್ಯ

    ಹುಬ್ಬಳ್ಳಿ: ನಗರದಲ್ಲಿನ ಘನ ತ್ಯಾಜ್ಯವನ್ನು ಬಳಸಿಕೊಂಡು ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಕೆಯಾಗುವ ಟೊರಿಫೈಡ್ ಚಾರಕೋಲ್ (ಇದ್ದಿಲು) ಉತ್ಪಾದನಾ ಘಟಕ ಹುಬ್ಬಳ್ಳಿ ಗಬ್ಬೂರಿನಲ್ಲಿ ತಲೆ ಎತ್ತಲಿದೆ.

    ಕೇಂದ್ರ ಸರ್ಕಾರದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್​ಟಿಪಿಸಿ)ದ ವಿದ್ಯುತ್ ವ್ಯಾಪಾರ ಕೇಂದ್ರವು 45 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪಿಸಲಿದೆ. ಹು-ಧಾ ಮಹಾನಗರ ಪಾಲಿಕೆ ಗಬ್ಬೂರಿನಲ್ಲಿರುವ ತನ್ನ ಒಡೆತನದ 12 ಎಕರೆ ಜಾಗವನ್ನು ನೀಡಲಿದೆ. ತ್ಯಾಜ್ಯದಿಂದ ಟೊರಿಫೈಡ್ ಚಾರಕೋಲ್ ಉತ್ಪಾದಿಸುವ ಘಟಕ ಈವರೆಗೂ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಇದೇ ಮೊದಲು. ಉತ್ತರ ಪ್ರದೇಶದ ವಾರಾಣಸಿ, ಮಹಾರಾಷ್ಟ್ರದ ನಾಸಿಕ್​ದಲ್ಲಿದೆ. ಪುಣೆಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕವಿದೆ.

    ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲನ್ನು ಇಂಧನವಾಗಿ ಬಳಕೆ ಮಾಡಲಾಗುತ್ತಿದೆ. ಸದ್ಯ ಪರಿಸರ ಸಂಬಂಧಿ ಕಾನೂನುಗಳು ಕಠಿಣವಾಗಿರುವುದರಿಂದ ಕಾಲ ಕ್ರಮೇಣ ಕಲ್ಲಿದ್ದಲು ಲಭ್ಯತೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಟೊರಿಫೈಡ್ ಚಾರಕೋಲ್ ಬಳಕೆಗೆ ತರಲಾಗಿದೆ. ತ್ಯಾಜ್ಯದಿಂದ ಟೊರಿಫೈಡ್ ಚಾರಕೋಲ್ ತಯಾರಿಸುವ ಮಾರ್ಗವನ್ನು ಕಂಡುಕೊಳ್ಳಲಾಗಿದೆ.

    ನಿತ್ಯ 200 ಟನ್ ತ್ಯಾಜ್ಯ ಬಳಕೆ: ತ್ಯಾಜ್ಯದಿಂದ ಟೊರಿಫೈಡ್ ಚಾರಕೋಲ್ ಉತ್ಪಾದಿಸುವ ಘಟಕಕ್ಕೆ ಹು-ಧಾ ಮಹಾನಗರ ಪಾಲಿಕೆ ನಿತ್ಯ 200 ಟನ್ ಘನ ತ್ಯಾಜ್ಯ ನೀಡಲಿದೆ. ಹುಬ್ಬಳ್ಳಿ ನಗರದಲ್ಲಿ ನಿತ್ಯ 300 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಘಟಕ ನಿರ್ವಹಣೆಗೆ ಬೇಕಾಗುವ ನೀರು ಪೂರೈಕೆ ವ್ಯವಸ್ಥೆಯನ್ನು ಪಾಲಿಕೆ ಕಲ್ಪಿಸಲಿದೆ. ಈ ಸಂಬಂಧ ಪಾಲಿಕೆ – ಎನ್​ಟಿಪಿಸಿ ನಡುವೆ 30 ವರ್ಷಗಳ ಕರಾರು ಏರ್ಪಟ್ಟಿದೆ. ಘಟಕವು ನಿತ್ಯ 200 ಟನ್ ತ್ಯಾಜ್ಯ ಬಳಸಿ 100 ಟನ್ ಟೊರಿಫೈಡ್ ಚಾರಕೋಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆಯಂತೆ. 1 ವರ್ಷದೊಳಗೆ ಘಟಕ ಕಾರ್ಯಾಚರಣೆ ಮಾಡಲಿದೆ.

    ಹು-ಧಾ ಅವಳಿ ನಗರದಲ್ಲಿ ನಿತ್ಯ 450-500 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪ್ರತ್ಯೇಕವಾಗಿ ಕಾಂಪೋಸ್ಟ್ ಘಟಕ (ಹಸಿ ಕಸ ಬಳಸಿ ಗೊಬ್ಬರ ತಯಾರಿಸುವ) ಸ್ಥಾಪಿಸಲಾಗಿದೆ. ಧಾರವಾಡದ ಕಾಂಪೋಸ್ಟ್ ಘಟಕ 2 ವಾರಗಳ ಹಿಂದೆ ಕಾರ್ಯಾಚರಣೆ ಮಾಡಿದೆ. ಹುಬ್ಬಳ್ಳಿ ಘಟಕ ಸದ್ಯದಲ್ಲಿ ಕಾರ್ಯಾಚರಣೆ ಮಾಡಲಿದೆ.

    ಇದೀಗ ಟೊರಿಫೈಡ್ ಚಾರಕೋಲ್ ಘಟಕ ಸ್ಥಾಪನೆಯಾದರೆ ಹುಬ್ಬಳ್ಳಿಯ ಕಸ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ ಎಂದು ಭಾವಿಸಲಾಗಿದೆ.

    ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಹಾಗೂ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಸಮ್ಮುಖದಲ್ಲಿ ಮಂಗಳವಾರ ವೆಬಿನಾರ್ ಮೂಲಕ ಈ ಯೋಜನೆ ಸಂಬಂಧ ಹು-ಧಾ ಮಹಾನಗರ ಪಾಲಿಕೆ ಹಾಗೂ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್​ಟಿಪಿಸಿ)ಗಳ ನಡುವಿನ ಒಪ್ಪಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಘೊಷಣೆಯಾದ ಪ್ರಯುಕ್ತ ಕಾರ್ಯಕ್ರಮ ರದ್ದು ಪಡಿಸಲಾಯಿತು. ಉಳಿದ ಆಡಳಿತಾತ್ಮಕ ಪ್ರಕ್ರಿಯೆಗಳು ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತ್ಯಾಜ್ಯದಿಂದ ಟೊರಿಫೈಡ್ ಚಾರಕೋಲ್ (ಇದ್ದಿಲು) ಉತ್ಪಾದಿಸುವ ಘಟಕ ಹುಬ್ಬಳ್ಳಿ ಗಬ್ಬೂರಿನಲ್ಲಿ ಸ್ಥಾಪನೆಯಾಗಲಿದೆ. ಈಗಾಗಲೇ ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಲಭಿಸಿದೆ. ಇದರಿಂದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್​ಜಿಟಿ) ಮಾರ್ಗಸೂಚಿ ಪಾಲನೆಯಾಗಲಿದೆ. ಜತೆಗೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ.

    -ಡಾ. ಸುರೇಶ ಇಟ್ನಾಳ, ಆಯುಕ್ತ, ಹುಧಾಮಪಾ

    ಎನ್​ಟಿಪಿಸಿಯವರು ವಾರಾಣಸಿಯಲ್ಲಿ ಟೊರಿಫೈಡ್ ಚಾರಕೋಲ್ ಘಟಕ ಸ್ಥಾಪಿಸಿದ್ದಾರೆ. ಅದೇ ಮಾದರಿಯ ಘಟಕ ಹುಬ್ಬಳ್ಳಿಯಲ್ಲಿ ಸ್ಥಾಪಿಸುವಂತೆ ನಾನೇ ಪ್ರಸ್ತಾವನೆ ಸಲ್ಲಿಸಿದ್ದೆ. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಇಂದು ಒಡಂಬಡಿಕೆ ಆಗಬೇಕಿತ್ತು. ನಮ್ಮ ಪ್ರಯತ್ನದಿಂದಲೇ ಕಾರ್ಯರೂಪಕ್ಕೆ ಬರುತ್ತಿದೆ.

    –ಪ್ರಲ್ಹಾದ ಜೋಶಿ, ಕೇಂದ್ರ ಕಲ್ಲಿದ್ದಲು, ಗಣಿ, ಸಂಸದೀಯ ವ್ಯವಹಾರಗಳ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts