More

    ಆ್ಯಕ್ಟಿವ್ ಆಗಲೇ ಇಲ್ಲ ಟ್ರಾಫಿಕ್ ಸ್ಟೇಷನ್ : ಸಂಚಾರ ದಟ್ಟಣೆಗೆ ಸಿಗಲಿಲ್ಲ ಮುಕ್ತಿ

    ಮಂಜುನಾಥ ಎಸ್.ಸಿ. ಹೊಸಕೋಟೆ


    ವರ್ಷದ ಆರಂಭದಲ್ಲಿ ಉದ್ಘಾಟನೆಯಾದ ಸಂಚಾರ ಠಾಣೆ ವರ್ಷಾಂತ್ಯವಾದರೂ ಆಕ್ಟಿವ್ ಆಗಲೇ ಇಲ್ಲ. ಸಂಚಾರ ಪೊಲೀಸರ ನಿಯೋಜನೆ ಇಲ್ಲದ ಕಟ್ಟಡ ಸಿಸಿ ಕ್ಯಾಮರಾ ಪರಿಶೀಲನಾ ಕೇಂದ್ರವಾಗಷ್ಟೇ ಬಳಕೆಯಾಗುತ್ತಿದೆ. ಹೊಸಕೋಟೆ ನಗರ ವೇಗವಾಗಿ ಬೆಳೆಯುತ್ತಿದೆ. ಅಷ್ಟೇ ಮಟ್ಟದಲ್ಲಿ ಜನಸಂಖ್ಯೆಯೂ ಹೆಚ್ಚಾಗುತ್ತಿದೆ, ಇದಕ್ಕೆ ದುಪ್ಪಟ್ಟು ಎನ್ನುವಂತೆ ವಾಹನಗಳ ಸಂಖ್ಯೆ ಮಿತಿಮೀರಿದೆ, ಸಂಚಾರ ನಿಯಮ ಉಲ್ಲಂಘನೆ ಅಪಘಾತ ಪ್ರಕರಣಗಳು ಹೆಚ್ಚಿವೆ.


    ನಗರದಲ್ಲಿ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಕನಿಷ್ಠ 20 ಸಾವಿರ ಕುಟುಂಬ ವಾಹನ ಹೊಂದಿವೆ. ಇದರ ಜತೆಗೆ ವಾಣಿಜ್ಯ ಚಟುವಟಿಕೆಗೆ ಪ್ರತಿ ದಿನ ಸಾವಿರಾರು ವಾಹನಗಳು ನಗರಕ್ಕೆ ಬಂದು ಹೋಗುತ್ತವೆ, ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ, ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಕಾರಣ ಅತಿ ಹೆಚ್ಚು ವಾಹನ ಸಂಚಾರ ಇದೆ, ಆದರೆ ನಗರಕ್ಕೆ ಟ್ರಾಫಿಕ್ ಪೊಲೀಸರ ಅಗತ್ಯದ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

    ವಾಹನ ನಿಲ್ಲಿಸಿದ ಸ್ಥಳವೇ ಪಾರ್ಕಿಂಗ್: ನಗರದ ಪ್ರಮುಖ ರಸ್ತೆಗಳಾದ ಕೆಆರ್ ರಸ್ತೆ, ಸರ್ಕಾರಿ ಕಾಲೇಜು, ಮಾರ್ಕೆಟ್ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ನಗರದ ಕೋರ್ಟ್ ಸರ್ಕಲ್‌ನಲ್ಲಿ ಬಿಎಂಟಿಸಿ ಹಾಗೂ ಖಾಸಗಿ ಬಸ್ ಚಾಲಕರು ಹೆದ್ದಾರಿಗೆ ಅಡ್ಡಲಾಗಿ ವಾಹನ ನಿಲುಗಡೆ ಮಾಡುವ ಮೂಲಕ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ, ರಸ್ತೆ ಮಧ್ಯೆ ಡಿವೈಡರ್ ಹಾಕಿ ಏಕಮುಖ ಸಂಚಾರ ವ್ಯವಸ್ಥೆ ಇದ್ದರೂ ವಾಹನ ಸವಾರರು ಅನುಕೂಲವಾಗುವ ರೀತಿ ಏಕಮುಖ ರಸ್ತೆಯಲ್ಲಿ ವಿರುದ್ಧವಾಗಿ ಸಂಚರಿಸುವುದು ಸಾಮಾನ್ಯವಾಗಿದೆ. ಸಾರ್ವಜನಿಕರು ಪ್ರಶ್ನಿಸಿದಲ್ಲಿ ನೀವ್ಯಾರು ಕೇಳಲಿಕ್ಕೆ, ಇದೇನು ನಿಮಪ್ಪನ ರಸ್ತೆಯೇ ಎಂಬ ಮರು ಪ್ರಶ್ನೆ ಎದುರಿಸಬೇಕಾಗಿದೆ.

    ತ್ರಿಬಲ್ ರೈಡಿಂಗ್: ನಗರದಲ್ಲಿ ಸಂಚರಿಸುವ ಪ್ರತಿ 10 ರಲ್ಲಿ 3 ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಸಾಮಾನ್ಯವಾಗಿದೆ. ಇದರಲ್ಲಿ ಬಹುತೇಕ ಅಪ್ರಾಪ್ತರೇ ಇರುತ್ತಾರೆ. ಇದರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಚಲಿಸುವುದು, ಪಾದಚಾರಿ ಮಾರ್ಗದಲ್ಲಿ ಸಂಚರಿಸುವುದೂ ಸೇರಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಿದೆ. ನಗರದಲ್ಲಿ 8ಕ್ಕೂ ಅಧಿಕ ಕಾಲೇಜುಗಳಿದ್ದು, 18 ವರ್ಷಕ್ಕೂ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು, ಪ್ರೌಢಶಾಲಾ ವಿದ್ಯಾರ್ಥಿಗಳು ಅಪಾಯಕಾರಿ ಚಾಲನೆ ಮೂಲಕ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ. ಸಂಚಾರ ಪೊಲೀಸರಿಲ್ಲ ಎಂಬ ಕಾರಣಕ್ಕೆ ಇವೆಲ್ಲ ಅವ್ಯವಸ್ಥೆ ಸಾಮಾನ್ಯವಾಗಿವೆ.

    ವಾರದಲ್ಲಿ ಸಂಚಾರಿ ಠಾಣೆ ತೆರೆಯಲು ಎಲ್ಲ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಪ್ರತ್ಯೇಕ ಪೊಲೀಸ್ ನಿರೀಕ್ಷಕರ ಜತೆ ನಾಲ್ವರು ಎಎಸ್‌ಐ ಮತ್ತು ಅಗತ್ಯವಿರುವಷ್ಟು ಪೇದೆಗಳನ್ನು ನಿಯೋಜಿಸಲಾಗಿದ್ದು, ಆದಷ್ಟು ಬೇಗ ಕಾರ್ಯಾರಂಭಗೊಳ್ಳಲಿದೆ. ಮಲ್ಲಿಕಾರ್ಜುನ್ ಬಾಲದಂಡಿ ಪೊಲೀಸ್ ವರಿಷ್ಠಾಧಿಕಾರಿ, ಬೆಂ. ಗ್ರಾಮಾಂತರ ಜಿಲ್ಲೆ

    ಕೇವಲ ಪ್ರಚಾರಕ್ಕೆ ಟ್ರಾಫಿಕ್ ಠಾಣೆ ತೆರೆಯಲಾಗುತ್ತಿದೆ ಎಂದು ಪೋಟೊಗಳನ್ನು ತೆಗೆದು ಪ್ರಚಾರ ಪಡೆಯುವಲ್ಲಿ ಮಾತ್ರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರತರಾಗಿದ್ದಾರೆ. ಸಾರ್ವಜನಿಕರ ತೊಂದರೆಗಳನ್ನು ನಿವಾರಿಸುವ ಕೆಲಸ ನಗಣ್ಯವಾಗಿದೆ. ನಾಗರಾಜ್ ವರದಾಪುರ ಸಾಮಾಜಿಕ ಹೋರಾಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts