More

    ಆಸ್ಪತ್ರೆ ಆರಂಭಕ್ಕೆ ವೆಚ್ಚ ಪರಿಷ್ಕೃತ ಅಡ್ಡಿ

    ಮರಿದೇವ ಹೂಗಾರ ಹುಬ್ಬಳ್ಳಿ

    ನಿಗದಿತ ಅನುದಾನದಲ್ಲಿಯೇ ಕಾಮಗಾರಿ ಪೂರ್ಣಗೊಂಡಿದ್ದರೆ ಹಳೇ ಹುಬ್ಬಳ್ಳಿಯ ಹೆರಿಗೆ ಮತ್ತು ಜನರಲ್ ಆಸ್ಪತ್ರೆ ರೋಗಿಗಳ ಸೇವೆಗೆ ಈಗಾಗಲೇ ಸನ್ನದ್ಧವಾಗುತ್ತಿತ್ತು. ಟೆಂಡರ್ ವೆಚ್ಚ ಪರಿಷ್ಕೃತ ಇದೆಲ್ಲದಕ್ಕೂ ಅಡ್ಡಿಯಾಗಿದೆ. ಕಾಮಗಾರಿ ಆರಂಭವಾಗಿ 2 ವರ್ಷ ಗತಿಸುತ್ತಿದ್ದರೂ ತೆವಳುತ್ತ ಸಾಗಿದೆ.

    2018ರ ಡಿಸೆಂಬರ್ ತಿಂಗಳಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಅಂದಾಜು ವೆಚ್ಚ 7 ಕೋಟಿ ರೂ. ನಿಗದಿಪಡಿಸಲಾಗಿತ್ತು. ಗುತ್ತಿಗೆದಾರರು ಮೊದಲೆರಡು ಮಳಿಗೆಗಳನ್ನು 8 ತಿಂಗಳಲ್ಲಿಯೇ ನಿರ್ವಿುಸಿಕೊಡಲಾಗುವುದು ಎಂದು ವಾಗ್ದಾನ ನೀಡಿದ್ದರು. ಆದರೀಗ ನಿಗದಿತ ಮೊತ್ತಕ್ಕಿಂತ 8 ಕೋಟಿ ರೂ. ಹೆಚ್ಚುವರಿ ಅನುದಾನ ಪಡೆದರೂ ಜನರ ಸೇವೆಗೆ ಆಸ್ಪತ್ರೆ ಸಿದ್ಧವಾಗುತ್ತಿಲ್ಲ. ಬೇಸ್​ವೆುಂಟ್ ಲೆವೆಲ್ ಮುಗಿದಿದೆ. ಇನ್ನೊಂದು ಮಹಡಿ ತಲೆ ಎತ್ತಬೇಕು. ಮಧ್ಯೆ ಮರಳು ಸಮಸ್ಯೆ ತಲೆದೋರಿತ್ತು. ಸುತ್ತಲಿದ್ದ ಆಟೋ ಚಾಲಕರು ಜಾಗೆ ಬಿಟ್ಟು ಕೊಡಲು ತಯಾರಿರಲಿಲ್ಲ. ಮನವೊಲಿಕೆ ನಂತರ ಒಪ್ಪಿಗೆ ಸಿಕ್ಕು ಕಾರ್ಯಾರಂಭ ಮಾಡಲಾಯಿತು. ಆದರೆ ನಿಗದಿತ ಮೊತ್ತ ಸಾಲುವುದಿಲ್ಲವೆಂಬ ಮುನ್ಸೂಚನೆ ಸಿಕ್ಕ ಬಳಿಕ ಟೆಂಡರ್ ವೆಚ್ಚ ಪರಿಷ್ಕೃತಗೊಳಿಸಲು ತೀರ್ವನಿಸಲಾಯಿತು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಬಿಡುಗಡೆ ಮಾಡಿದ್ದ 20 ಕೋಟಿ ರೂ. ಅನುದಾನದಲ್ಲಿ 8 ಕೋಟಿ ರೂ. ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. ಆದರೂ ಆಸ್ಪತ್ರೆ ಕಾಮಗಾರಿ ಚುರುಕು ಪಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

    ಸಮುದಾಯ ಭವನದಲ್ಲಿ ಆಸ್ಪತ್ರೆ: ಹಿರೇಪೇಟದ ಘೊಡಕೆ ಓಣಿಯ ಸಮುದಾಯ ಭವನಕ್ಕೆ ಈ ಆಸ್ಪತ್ರೆಯನ್ನು ಸ್ಥಳಾಂತರಿಸಲಾಗಿದೆ. ಮೊದಲು ಹಳೆಯ ಆಸ್ಪತ್ರೆಯಲ್ಲಿ 22 ಬೆಡ್​ಗಳಿದ್ದವು. ಈಗಿರುವ ‘ಸಮುದಾಯ ಭವನ ಆಸ್ಪತ್ರೆಯಲ್ಲಿ’ ಸರಿಯಾಗಿ 5 ಬೆಡ್​ಗಳು ಕಾಣುತ್ತಿಲ್ಲ. ಬರೀ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಳ ರೋಗಿಗಳನ್ನು ಚಿಟಗುಪ್ಪಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. ಸುತ್ತಲಿನ ನಿವಾಸಿಗಳು ಇದರಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

    ಜಪ್ಪಯ್ಯ ಎನ್ನದ ಮಾಲೀಕರು: ಆಂಬುಲೆನ್ಸ್ ಓಡಾಡುವುದಕ್ಕೆ ಜಾಗದ ಕೊರತೆ ಮುಂದಿಟ್ಟುಕೊಂಡು ಕೆಲ ಅಂಗಡಿಗಳ ಮಾಲೀಕರಿಗೆ ಜಾಗ ತೆರವುಗೊಳಿಸಲು ವಿನಂತಿಸಲಾಗಿದೆ. ಮಾಲೀಕರು ‘ಜಪ್ಪಯ್ಯ’ ಎನ್ನುತ್ತಿಲ್ಲ. ಇದರಿಂದ ಕಾಮಗಾರಿ ವೇಗಕ್ಕೆ ಮತ್ತಷ್ಟು ಅಡ್ಡಿ-ಆತಂಕ ಎದುರಾಗಿದೆ. ಮಧ್ಯೆ ಬರುವ ಇಂಥ ಸಮಸ್ಯೆಗಳ ಪರಿಹಾರಕ್ಕೆ ಪಾಲಿಕೆ ಬಹಳಷ್ಟು ತಲೆಕೆಡಿಸಿಕೊಳ್ಳುತ್ತಿದೆ ಎನ್ನುತ್ತಾರೆ ಕೆಲವರು.

    ಮೊದಲು 7 ಕೋಟಿ ರೂ. ಅನುದಾನದಲ್ಲಿ ಆಸ್ಪತ್ರೆ ಕಾಮಗಾರಿ ಆರಂಭಿಸಲಾಯಿತು. ಇನ್ನೂ 8 ಕೋಟಿ ರೂ. ಅನುದಾನ ತೆಗೆದಿರಿಸಲಾಗಿದೆ. ಆಸ್ಪತ್ರೆ ಆರಂಭಿಸುವುದಕ್ಕಾದರೂ ಕಾಮಗಾರಿ ಬೇಗ ಪೂರ್ಣಗೊಳಿಸಲಿದ್ದೇವೆ. | ಪ್ರಸಾದ ಅಬ್ಬಯ್ಯ ಹು-ಧಾ ಪೂರ್ವ ಕ್ಷೇತ್ರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts