More

    ಆಸ್ಪತ್ರೆಗೆ ಹೊರಟವರು ಸೇರಿದ್ದು ಮಸಣ…

    ಅಣ್ಣಿಗೇರಿ: ಪಾರ್ಶ್ವವಾಯು ರೋಗಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಹೊರಟ ಒಂದೇ ಕುಟುಂಬದ ನಾಲ್ವರು ಮಾರ್ಗಮಧ್ಯೆದಲ್ಲಿಯೇ ಮಸಣ ಸೇರಿದ ದಾರುಣ ಘಟನೆ ತಾಲೂಕಿನ ಕೊಂಡಿಕೊಪ್ಪ ಕ್ರಾಸ್ ಸಮೀಪ ಬುಧವಾರ ಬೆಳಗಿನ ಜಾವ ಸುಮಾರು ಎರಡು ಗಂಟೆಗೆ ಸಂಭವಿಸಿದೆ.

    ರಾಯಚೂರು ಜಿಲ್ಲೆಯ ಮಾನ್ವಿಯ ವಿಠ್ಠಲ ನಗರದ ನಿವಾಸಿಗಳಾದ ಸಣ್ಣಗಂಗಣ್ಣ ಈರಣ್ಣ (52), ಇವರ ಪತ್ನಿ ನಾಗಮ್ಮ ಸಣ್ಣಗಂಗಣ್ಣ (48), ಮಗ ಈರಣ್ಣ ಸಣ್ಣಗಂಗಣ್ಣ (24), ಹನುಮಂತ ದುರಗಪ್ಪ ಭೋವಿ (37) ಮೃತಪಟ್ಟವರು.

    ಗಂಭೀರವಾಗಿ ಗಾಯಗೊಂಡ ಕ್ರೂಸರ್ ಚಾಲಕ ಮಲ್ಲಪ್ಪ ನಾಗಪ್ಪ ಗಿಡ್ಡಣ್ಣವರ (35) ಅವರನ್ನು ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆ ಹಾಗೂ ಕಾರಿನಲ್ಲಿದ್ದ ಸಣ್ಣಗಂಗಣ್ಣ ಈರಣ್ಣ ಅವರ ತಮ್ಮ ಸಣ್ಣಈರಣ್ಣ ಈರಣ್ಣ (50), ಸಣ್ಣಗಂಗಣ್ಣ ಈರಣ್ಣ ಅವರ ಮಗಳು ಲಕ್ಷ್ಮೀ ಸಣ್ಣಗಂಗಣ್ಣ (20) ಅವರನ್ನು ಗದಗ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಪಾರ್ಶ್ವವಾಯು ಪೀಡಿತ ಸಣ್ಣಗಂಗಣ್ಣ ಈರಣ್ಣ ಅವರನ್ನು ಕುಟುಂಬಸ್ಥರು ಕಾರವಾರ ತಾಲೂಕಿನ ಹಳಗಾಕ್ಕೆ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಮಗ ಈರಣ್ಣ ಸಣ್ಣಗಂಗಣ್ಣ ಕಾರು ಚಲಾಯಿಸುತ್ತಿದ್ದ. ಅಣ್ಣಿಗೇರಿ ಸಮೀಪದ ಕೊಂಡಿಕೊಪ್ಪ ಕ್ರಾಸ್ ಹತ್ತಿರ ಬರುತ್ತಿದ್ದಾಗ ಅಪಘಾತವಾಗಿದೆ. ಹುಬ್ಬಳ್ಳಿಯಿಂದ ಬಳ್ಳಾರಿ ಕಡೆಗೆ ದಿನಪತ್ರಿಕೆ ಸಾಗಿಸುತ್ತಿದ್ದ ಕ್ರೂಸರ್, ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಕ್ರೂಸರ್ ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗಿದೆ. ಅಪಘಾತ ಸ್ಥಳವನ್ನು ಅಣ್ಣಿಗೇರಿ ಪಿಎಸ್​ಐ ಎಲ್.ಕೆ. ಜೂಲಿಕಟ್ಟಿ ಪರಿಶೀಲಿಸಿದ್ದಾರೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಾದಿಯಲ್ಲೇ ಕೊನೆಯಾಯ್ತು ಅಲೆಮಾರಿ ಜೀವನ

    ಊರೂರು ಅಲೆದು ಹಂದಿಗಳು, ಕಸಬರಿಗೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವುದೇ ನಿತ್ಯದ ಕಾಯಕ. ಅದರಿಂದ ಬಂದ ಹಣದಲ್ಲೇ ಬದುಕಿನ ಬಂಡಿ ಎಳೆಯುವ ಜವಾಬ್ದಾರಿ ಮನೆ ಮಾಲೀಕನದ್ದು. ಆದರೆ, ವಿಧಿಯಾಟದಲ್ಲಿ ಆತನೇ ಹಾಸಿಗೆ ಹಿಡಿಯುವಂತಾಯಿತು. ಅಂಥದ್ದರಲ್ಲಿ ಚಿಕಿತ್ಸೆ ಕೊಡಿಸಲು ಹೊರಟರೆ ಆತನೊಂದಿಗೆ ಮನೆಯವರೂ ಯಮನ ಪಾದ ಸೇರುವಂತಾಯಿತು. ಪಟ್ಟಣ ಸಮೀಪದ ಕೊಂಡಿಕೊಪ್ಪ ಕ್ರಾಸ್ ಹತ್ತಿರ ಬುಧವಾರ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಕ್ರೂಸರ್-ಕಾರು ಮಧ್ಯೆ ನಡೆದ ಅಪಘಾತದಲ್ಲಿ ಮೃತಪಟ್ಟ ರಾಯಚೂರು ಜಿಲ್ಲೆ ಮಾನ್ವಿಯ ವಿಠ್ಠಲ ನಗರದ ಸಣ್ಣಗಂಗಣ್ಣ ಈರಣ್ಣ ಕುಟುಂಬದ ಕರುಣಾಜನಕ ಕತೆಯಿದು.

    12 ಲಕ್ಷ ಖರ್ಚಾದರೂ ಗುಣವಾಗಲಿಲ್ಲ: ಮಾನ್ವಿ ವಿಠ್ಠಲ ನಗರ ನಿವಾಸಿಯಾದ ಸಣ್ಣಗಂಗಣ್ಣ ಅವರದ್ದು ಪತ್ನಿ, ಒಬ್ಬ ಪುತ್ರಿ, ಒಬ್ಬ ಪುತ್ರ ಇದ್ದ ತುಂಬು ಕುಟುಂಬ. ಈ ಕುಟುಂಬದ ಕುಲಕಸುಬು ಕಸಬರಿಗೆ ಸಿದ್ಧಪಡಿಸಿ ಊರೂರು ಸುತ್ತಿ ಮಾರಾಟ ಮಾಡುವುದು. ಅದರಿಂದ ಬಂದ ಹಣದಲ್ಲಿಯೇ ಜೀವನ ಸಾಗಿಸುತ್ತಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಒಂದಿನ ಸಣ್ಣಗಂಗಣ್ಣ ಈರಣ್ಣ ಅವರು ವ್ಯಾಪಾರ ಮಾಡಿ ಬಂದು ಮನೆಯ ಹತ್ತಿರ ಟಿವಿಎಸ್ ಎಕ್ಸಲ್ ದ್ವಿಚಕ್ರ ವಾಹನದಿಂದ ಇಳಿಯುತ್ತಿದ್ದಾಗ ಬಿದ್ದರು. ಆಗ ಅವರ ಬಲಗೈ ಸ್ವಾಧೀನ ಕಳೆದುಕೊಂಡಿತ್ತು. ಅವರಿಗೆ ಕುಟುಂಬಸ್ಥರು ಹೈದ್ರಾಬಾದ್​ನಲ್ಲಿ ಚಿಕಿತ್ಸೆ ಕೊಡಿಸಿದರು. ಸುಮಾರು 12 ಲಕ್ಷ ರೂ. ಖರ್ಚಾಯಿತು. ಆದರೂ ಮನೆ ಯಜಮಾನ ಮಾತ್ರ ಗುಣವಾಗಲಿಲ್ಲ ಎಂದು ಮೃತ ಸಣ್ಣಗಂಗಣ್ಣ ಅವರ ತಮ್ಮ ಸಣ್ಣಈರಣ್ಣ ಕಣ್ಣೀರಾದರು.

    ಬಾಡಿಗೆ ಗಾಡಿ ತರಲು ಹಣವಿಲ್ಲ….

    ಮೂರ್ನಾಲ್ಕು ತಿಂಗಳಾದರೂ ಮನೆ ಮಾಲೀಕ ಹಾಸಿಗೆ ಹಿಡಿದ್ದರಿಂದ ಮನೆಯವರೆಲ್ಲ ಚಿಂತೆಗೀಡಾಗಿದ್ದರು. ಆಗ ಪಕ್ಕದ ಮನೆಯ ವ್ಯಕ್ತಿ ಕಾರವಾರ ತಾಲೂಕಿನ ಹಳಗಾದಲ್ಲಿನ ಆಸ್ಪತ್ರೆಗೆ ಹೋದರೆ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು. ನಾವು ತುಂಬಾ ಕಡುಬಡವರು. ಭೂಮಿ, ಆಸ್ತಿ-ಪಾಸ್ತಿ ನಮ್ಮಲ್ಲಿಲ್ಲ. ನಾವು ಕುಲಕಸುಬು ನಂಬಿ ಜೀವನ ಮಾಡುವಂಥವರು. ಬಾಡಿಗೆ ಗಾಡಿ ಮಾಡಿಕೊಂಡು ಬರಲೂ ಹಣವಿಲ್ಲದಂಥ ಸಮಯದಲ್ಲಿ ಸ್ನೇಹಿತನ ಗಾಡಿ ತೆಗೆದುಕೊಂಡು ಬಂದಾಗ ಈ ರೀತಿ ಆಗಿದೆ. ಹಣೆಬರಹಕ್ಕೆ ಹೊಣೆ ಯಾರು? ಎಂದು ಸಣ್ಣಈರಣ್ಣ ಹೇಳಿದರು.

    ಅನಾಥಳಾದ ಲಕ್ಷ್ಮೀ…

    ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮೀಯನ್ನು ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಪಘಾತದಲ್ಲಿ ತಂದೆ, ತಾಯಿ, ಸಹೋದರ ದುರ್ಮರಣಕ್ಕೀಡಾಗಿದ್ದು, ಲಕ್ಷ್ಮೀ ಈಗ ಅನಾಥೆಯಾಗಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts