More

    ಆಸ್ಪತ್ರೆಗೆ ಬೇಕಿದೆ ತುರ್ತು ಶಸ್ತ್ರಚಿಕಿತ್ಸೆ

    ಜಗಳೂರು: ಇದು ಮೇಲ್ನೋಟಕ್ಕೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಆದರೆ ಒಳಹೊಕ್ಕರೆ ಅದರ ಅಸಲಿ ಚಿತ್ರಣವೇ ಬೇರೆಯಾಗಿದೆ. ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಅಗತ್ಯ ಪ್ರಮಾಣದಲ್ಲಿ ವೈದ್ಯರೇ ಇಲ್ಲ, ಚರಂಡಿ ವ್ಯವಸ್ಥೆ, ವಿದ್ಯುತ್ ಪೂರೈಕೆ ಹೀಗೆ ಹತ್ತಾರು ಸಮಸ್ಯೆಗಳ ಸರಮಾಲೆಯಲ್ಲಿ ಆಸ್ಪತ್ರೆ ನರಳುತ್ತಿದ್ದು, ತುರ್ತು ಚಿಕಿತ್ಸೆ ಬೇಕಿದೆ.

    1940ರಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಅಂದಾಜು 80 ವರ್ಷ ಪೂರೈಸಿದೆ. 50 ಹಾಸಿಗೆಗಳಿಂದ ಆರಂಭವಾಗಿದ್ದ ಆಸ್ಪತ್ರೆಯನ್ನು ಮಾಜಿ ಶಾಸಕ ಟಿ. ಗುರುಸಿದ್ದನಗೌಡರು ತಮ್ಮ ಅವಧಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ ನಂತರ ಹಳೆಯ ಕಟ್ಟಡವನ್ನೇ ನವೀಕರಣ ಮಾಡಲಾಗಿತ್ತು.
    ಜಗಳೂರು ತಾಲೂಕು ಅಷ್ಟೇ ಅಲ್ಲದೆ ಪಕ್ಕದ ತಾಲೂಕುಗಳಿಂದಲೂ ನೂರಾರು ರೋಗಿಗಳು ಧಾವಿಸಿ ಚಿಕಿತ್ಸೆ ಪಡೆಯುತ್ತಿರುವ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಸಂಪೂರ್ಣ ಸೊರಗಿ ಹೋಗಿದ್ದು, ಕಾಯಕಲ್ಪಕ್ಕೆ ಎದುರು ನೋಡುತ್ತಿದೆ.
    ಕಟ್ಟಡ ನಿರ್ಮಾಣ ಮಾಡುವಾಗ ನೀರಿನ ಪೈಪ್‌ಗಳು ಹಾಗೂ ಶೌಚಗೃಹದ ಅಂಡರ್ ಗ್ರೌಂಡ್ ವ್ಯವಸ್ಥೆ ಕಟ್ಟಡದ ತಳಪಾಯದ ಅಡಿಯಿಂದಲೇ ಹಾದು ಹೋಗಿರುವುದರಿಂದ ಸಮಸ್ಯೆಗೆ ದಾರಿಮಾಡಿಕೊಟ್ಟಂತಾಗಿದೆ.
    ಕಟ್ಟಡಕ್ಕೆ ವಿದ್ಯುತ್ ವ್ಯವಸ್ಥೆಯನ್ನು ಆಗಿನ ಜನಸಂಖ್ಯೆಗೆ ಅನುಗುಣವಾಗಿ ವ್ಯವಸ್ಥೆ ಮಾಡಲಾಗಿದೆ. ಕಟ್ಟಡವು ತುಂಬ ಹಳೆಯದಾಗಿದ್ದು, ಈಗಿನ ಜನಸಂಖ್ಯೆಗನುಣವಾಗಿ ಕಟ್ಟಡವನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದರಿಂದ ಸದರಿ ರೋಗಿಗಳ ವ್ಯವಸ್ಥೆಗೆ ಅನುಗುಣವಾಗಿ ಚರಂಡಿ ಕಾಮಗಾರಿಯಾಗಲಿ, ವಿದ್ಯುತ್ ವ್ಯವಸ್ಥೆಯಾಗಲಿ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದ್ದು, ಸಾರ್ವಜನಿಕರಿಗೆ ತುಂಬ ಕಿರಿಕಿರಿಯಾಗಿದೆ.
    ವೈದ್ಯರ ಕೊರತೆ: ಆಸ್ಪತ್ರೆಯಲ್ಲಿ ಕೇವಲ ಕಟ್ಟಡ ಸಮಸ್ಯೆ ಒಂದೇ ಅಲ್ಲ, ವೈದ್ಯರ ಕೊರತೆ ಕಾಡುತ್ತಿದೆ. ಡಾ. ಶಂಕರಪ್ಪ ಎಂಬುವರು ನಿವೃತ್ತಿಗೊಂಡ ನಂತರ ಎಂಟು ವರ್ಷಗಳಿಂದಲೂ ಪಿಜಿಷಿಯನ್ ವೈದ್ಯರ ಕೊರತೆ ಇದೆ. ಪಿಜಿಷಿಯನ್ ವೈದ್ಯರಿಲ್ಲದ ಕಾರಣ ಮಹಿಳೆಯರು ಮತ್ತು ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮೊದಲೇ ಈ ತಾಲೂಕು ಹಿಂದುಳಿದ ಮತ್ತು ಬರಗಾಲ ಪೀಡಿತ ಪ್ರದೇಶ ಎಂಬ ಹಣೆ ಪಟ್ಟಿ ಹೊತ್ತುಕೊಂಡಿದೆ. ಬಹುತೇಕ ಜನರು ರೈತರು, ಕೂಲಿಕಾರರಿದ್ದಾರೆ. ಇವರೆಲ್ಲ ಈ ಸರ್ಕಾರಿ ಆಸ್ಪತ್ರೆಗೆ ಅಲವಂಬಿತರಾಗಿರುವುದು ದೊಡ್ಡ ಸಮಸ್ಯೆಯಾಗಿದೆ.
    ಪಿಜಿಷಿಯನ್ ಖಾಲಿ ಇರುವುದರಿಂದ ಐಸಿಯು ಹಾಗೂ ಪ್ರಯೋಗಾಲಯಗಳಲ್ಲಿ ಸಮರ್ಪಕ ಕಾರ್ಯನಿರ್ವಹಣೆಗೆ ಹಿನ್ನಡೆಯಾಗಿದೆ.

    ಆರ್‌ಸಿಸಿಯಲ್ಲಿ ನೀರು ಸೋರಿಕೆ:
    ಮಳೆಗಾಲ ಬಂದಾಗ ಇದೇನು ಆಸ್ಪತ್ರೆಯೋ ಅಥವಾ ಪಾಳು ಬಿದ್ದ ಬಂಗಲೆಯೋ ಅನಿಸುತ್ತದೆ. ಎಲ್ಲಿ ನೋಡಿದರೂ ಕಟ್ಟಡದ ಆರ್‌ಸಿಸಿ ಮೇಲ್ಭಾಗದಿಂದ ಥಟ್‌ಥಟ್ ಹನಿ ಬೀಳುತ್ತಿದೆ. ನೆಲದಲ್ಲೆಲ್ಲಾ ನೀರು ನಿಲ್ಲುವುದರಿಂದ ರೋಗಿಗಳು ತುಂಬ ತೊಂದರೆ ಅನುಭವಿಸುವಂತಾಗಿದೆ. ಇನ್ನು ಇಂಜಕ್ಷನ್ ಕೊಠಡಿ, ಐಸಿಯು, ಔಷಧ ವಿತರಣೆ ಕೊಠಡಿ, ರೋಗಿಗಳ ಕೊಠಡಿಗಳ ಗೋಡೆಗಳೆಲ್ಲ ನೀರಿನಿಂದ ತೇವಗೊಂಡಿದ್ದು ಬೀಳುವಂತೆ ಕಾಣುತ್ತದೆ.

    ವಿದ್ಯುತ್ ಸಮಸ್ಯೆ:
    ನೂರು ಹಾಸಿಗೆ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ತುಂಬ ಹಳೆಯ ಕಟ್ಟಡವಾಗಿರುವುದರಿಂದ ವಿದ್ಯುತ್ ವೈರ್ ಎಲ್ಲಿ ಹೋಗಿದೆ ಎಂಬುದನ್ನು ತಿಳಿಯಲು ಹರಸಾಹಸ ಪಡುವಂತಾಗಿದೆ. ಎಕ್ಸ್‌ರೇ, ಪ್ರಯೋಗಾಲಯ, ಓಟಿ ಡಯಾಲಿಸಿಸ್ ಮತ್ತು ಐಸಿಯು ರೂಂಗಳಿಗೆ ವಿದ್ಯುಚ್ಛಕ್ತಿ ಹೆಚ್ಚುವರಿಯಾಗಿ ಬೇಕಾಗಿದೆ. ಹಲವು ಬಾರಿ ವಿದ್ಯುತ್ ಶರ್ಟ್ ಸೆರ್ಕ್ಯೂಟ್ ಸಹ ಆಗಿರುವುದರಿಂದ ಬೆಂಕಿ ಕಾಣಿಸಿಕೊಂಡು ಎಲ್ಲರಲ್ಲೂ ಆತಂಕ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts