More

    ಆಸ್ಪತ್ರೆಗಳಲ್ಲಿ ಅವ್ಯವಸ್ಥೆಗೆ ಆಸ್ಪದ ನೀಡದಿರಿ

    ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವುಗಳ ಸರಿಯಾದ ಪಾಲನೆಯೊಂದಿಗೆ ಸೋಂಕಿತರ ಆರೈಕೆ ಬಗ್ಗೆ ಸೂಕ್ತ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಮ್ಸ್ ನಿರ್ದೇಶಕ ಡಾ. ಬೂಸರೆಡ್ಡಿ ಮಾತನಾಡಿ, ಆಸ್ಪತ್ರೆಯಲ್ಲಿ ಒಟ್ಟು 133 ಆಕ್ಸಿಜನ್ ಬೆಡ್ ಸಾಮರ್ಥ್ಯ ಹೊಂದಿದ್ದು, ಸೋಂಕಿತರ ಸಂಖ್ಯೆಗನುಗುಣವಾಗಿ ಬೆಡ್​ಗಳ ಸಂಖ್ಯೆಯನ್ನು 233ಕ್ಕೆ ಹೆಚ್ಚಿಸುವ ಅಗತ್ಯವಿದೆ. ಪ್ರತಿದಿನ 300 ಆಕ್ಸಿಜನ್ ಸಿಲಿಂಡರ್ ಬಳಕೆಯಾಗುತ್ತಿದ್ದು, 6 ಕೆಎಲ್ ಸಾಮರ್ಥ್ಯದ ಹೆಚ್ಚುವರಿ ಸಿಲಿಂಡರ್ ಅಗತ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.

    ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸರ್ಕಾರದ ಸೂಚನೆಗಳನ್ವಯ ಹೆಚ್ಚುವರಿ ಆಕ್ಸಿಜನ್ ಸಿಲಿಂಡರ್ ಖರೀದಿಗೆ ಕ್ರಮ ವಹಿಸಲು ತಿಳಿಸಿದರು.

    ಸೋಂಕು ಪತ್ತೆಯಾದವರನ್ನು ಆಸ್ಪತ್ರೆಗೆ ಕರೆತರಲು ಆಂಬುಲೆನ್ಸ್​ಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ವಿನಾಕಾರಣ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ನಿಧಾನಗತಿ ಸಲ್ಲದು. ಮೃತರ ಅಂತ್ಯಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿಗಳನ್ವಯ ನೆರವೇರಿಸಬೇಕು. ಅದಕ್ಕೆ ಅಗತ್ಯವಿರುವ ಹೆಚ್ಚುವರಿ ಆಂಬುಲೆನ್ಸ್ ವ್ಯವಸ್ಥೆಗೆ ಅನುಮತಿ ನೀಡಲಾಗಿದೆ. ಅಂತ್ಯಕ್ರಿಯೆ ನೆರವೇರಿಸಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ. ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಸೋಂಕಿತರಿಗೆ ಗುಣಮಟ್ಟದ ಆಹಾರ ನೀಡಬೇಕು. ಯಾವುದೇ ರೀತಿಯ ಅವ್ಯವಸ್ಥೆ ಆಗದಂತೆ ನಿಗಾ ವಹಿಸಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ದೊರೆಯುವಂತೆ ಕ್ರಮ ವಹಿಸಲು ಸೂಚಿಸಿದರು.

    ಜಿಲ್ಲೆಯ ಎಲ್ಲ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಆರ್​ಎಟಿ (ರ್ಯಾಪಿಡ್ ಆಂಟಿಜೆನ್ ಟೆಸ್ಟ್) ಮಾಡಲಾಗುತ್ತಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

    ಸರ್ಕಾರದ ಆದೇಶದನ್ವಯ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಬೆಡ್​ಗಳನ್ನು ಕಾಯ್ದಿರಿಸಿ ಚಿಕಿತ್ಸೆ ನೀಡಲು ಸೂಚಿಸಿ ಕ್ರಮ ವಹಿಸಲಾಗಿದೆ. ಸರ್ಕಾರ ನಿಗದಿಪಡಿಸಿದ ದರದಂತೆ ಸೂಕ್ತ ಚಿಕಿತ್ಸೆ ನೀಡಬೇಕು. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಲು ಜಿಲ್ಲಾಧಿಕಾರಿ ತಿಳಿಸಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ ಮಾತನಾಡಿ, ಗಂಟಲ ದ್ರವ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬುಧವಾರ 3200 ಆರ್​ಟಿ ಕಿಟ್​ಗಳನ್ನು ವಿತರಿಸಲಾಗಿದೆ ಎಂದರು.

    ಸಭೆಯಲ್ಲಿ ಜಿಪಂ ಸಿಇಒ ಡಾ. ಆನಂದ ಕೆ, ಅಪರ ಜಿಲ್ಲಾಧಿಕಾರಿ ಸತೀಶ್​ಕುಮಾರ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕರೇಗೌಡ್ರ ಹಾಜರಿದ್ದರು.

    ಬುಧವಾರ 111 ಜನ ಗುಣ

    ಜಿಲ್ಲೆಯಲ್ಲಿ ಬುಧವಾರ 124 ಜನರಿಗೆ ಕರೊನಾ ಸೋಂಕು ತಗುಲಿದೆ. 111 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 1214 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ತಿಳಿಸಿದ್ದಾರೆ.

    ಸೋಂಕು ದೃಢಪಟ್ಟ ಪ್ರದೇಶಗಳು: ಗದಗ ಬೆಟಗೇರಿ ನಗರದ ಹಾತಲಗೇರಿ ನಾಕಾ, ಶಿವಾನಂದ ನಗರ, ಬಸವೇಶ್ವರ ನಗರ, ತೆಗ್ಗಿನಪೇಟೆ, ವಿವೇಕಾನಂದ ನಗರ, ಹುಡ್ಕೋ ಕಾಲನಿ, ಎಂಎಂಕೆ ನಗರ, ಪಂಚಾಕ್ಷರಿ ನಗರ, ಶಹಾಪೂರ ಪೇಟೆ, ಶಾನಭಾಗ ಹೋಟೆಲ್ ಎದುರಿಗೆ, ಖಾನತೋಟ, ಗದಗ ತಾಲೂಕಿನ ಕೋಟುಮಚಗಿ, ಶಿರುಂಜ, ಹುಯಿಲಗೋಳ, ಅಸುಂಡಿ, ಹೊಸೂರ, ಮಲ್ಲಸಮುದ್ರ, ನಾಗಾವಿ, ಹುಲಕೋಟಿ, ಹರ್ತಿ, ನಾರಾಯಣಪುರ, ಪಾಪನಾಶಿ.

    ಮುಂಡರಗಿ ಪಟ್ಟಣದ ಕೋಟೆಭಾಗ ಪ್ರದೇಶ, ಅಂಬೇಡ್ಕರ್​ನಗರ, ಬಸ್ ನಿಲ್ದಾಣದ ಹತ್ತಿರ, ತಾಲೂಕಿನ ಡೋಣಿ, ಕಡಕೋಳ, ಮುಂಡವಾಡ, ಕದಂಪೂರ, ಡೋಣಿ ತಾಂಡಾ, ಬಾಗೇವಾಡಿ, ಕಲಕೇರಿ.

    ನರಗುಂದ ಪಟ್ಟಣದ ನರಗುಂದ, ಕುಂಬಾರ ಓಣಿ, ಎನ್​ಎಚ್​ಟಿ ಮಿಲ್ ರಸ್ತೆ, ಪೊಲೀಸ್ ಠಾಣೆ, ವಿನಾಯಕ ನಗರ, ಅಧ್ಯಾಪಕ ನಗರ, ತಾಲೂಕಿನ ಜಗಾಪೂರ, ಹಿರೇಕೊಪ್ಪ, ಅರಶಿನ ಗೋಡಿ, ಗುರ್ಲಕಟ್ಟಿ, ದಂಡಾಪೂರ, ಕೊಣ್ಣೂರ.

    ರೋಣ ಪಟ್ಟಣದ ಶಿವಪೇಟೆ 7ನೇ ಅಡ್ಡರಸ್ತೆ, ತಾಲೂಕಿನ ಜಕ್ಕಲಿ, ಸೂಡಿ, ಸೋಮನಕಟ್ಟಿ, ದಿಂಡೂರ, ಹಗೆದಕಟ್ಟಿ, ಕಲ್ಲಿಗನೂರ, ಕೌಜಗೇರಿ, ಸವಡಿ, ಮಾರನಬಸರಿ, ನರೇಗಲ್.

    ಶಿರಹಟ್ಟಿ ಪಟ್ಟಣದ ಚೌಡೇಶ್ವರಿ ನಗರ, ತಾಲೂಕಿನ ಬನ್ನಿಕೊಪ್ಪ, ಬೂದಿಹಾಳ, ಹರದಗಟ್ಟಿ, ಅಂಬೇಡ್ಕರ್ ನಗರ, ಬಸಾಪೂರ, ಶಿಗ್ಲಿ.

    ಲಕ್ಷ್ಮೇಶ್ವರ ಪಟ್ಟಣದ ಲಕ್ಷ್ಮೇಶ್ವರ, ಗಡ್ಡದೇವರ ನಗರ. ಗಜೇಂದ್ರಗಡ ಪಟ್ಟಣದ ಜನತಾ ಪ್ಲಾಟ್, ವಿಜಯಾ ಕಾಲನಿ, ಬಸವೇಶ್ವರ ನಗರ, ಗಜೇಂದ್ರಗಡ, ಗೊಲ್ಲರ ಓಣಿ, ನವನಗರ, ಪತ್ತಾರಗಲ್ಲಿ, ಇಂಡಿಯನ್ ಓವರ್​ಸಿಸ್ ಬ್ಯಾಂಕ್, ಹಿರೇ ಬಜಾರ ಪ್ರದೇಶದಲ್ಲಿ ಸೋಂಕು ಪತ್ತೆಯಾಗಿದೆ.

    ಗಜೇಂದ್ರಗಡದ 74 ವರ್ಷದ ಪುರುಷ ಹಾಗೂ ಬಳ್ಳಾರಿ ಜಿಲ್ಲೆ ಕುರಗೋಡಿನ 80 ವರ್ಷದ ಪುರುಷ ಸೋಂಕಿನಿಂದ ಮೃತಪಟ್ಟಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts