More

    ಆಸ್ತಿ ತೆರಿಗೆ ಪಾವತಿಗೆ ದಟ್ಟಣೆ

    ಹುಬ್ಬಳ್ಳಿ: ಗೊಂದಲದ ಬಳಿಕ ಉಳಿದಿರುವ ಕೆಲವು ದಿನಗಳಲ್ಲಿ ಆಸ್ತಿ ತೆರಿಗೆ ಪಾವತಿಸಲು ನಾಗರಿಕರು ಮುಂದಾಗಿರುವುದರಿಂದ ಹು-ಧಾ ಮಹಾನಗರ ಪಾಲಿಕೆ ವಲಯ ಕಚೇರಿ, ಹು-ಧಾ ಒನ್ ಕೌಂಟರ್ ಹಾಗೂ ಬ್ಯಾಂಕ್​ಗಳಲ್ಲಿ ಜನದಟ್ಟಣೆ ಕಂಡು ಬರುತ್ತಿದೆ.

    ಆಸ್ತಿ ತೆರಿಗೆ ಪಾವತಿಸಲು ಕೊನೆಯ ದಿನ ಎಂಬುದಿಲ್ಲ. ಆದರೆ, 2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಮೇ 31ರೊಳಗೆ ಪಾವತಿಸಿದರೆ ಶೇ. 5 ರಿಯಾಯಿತಿ ಸಿಗಲಿದೆ. ಈ ರಿಯಾಯಿತಿ ಪಡೆಯಲು ಉಳಿದಿರುವುದು 5 ದಿನಗಳು ಮಾತ್ರ. ಕಳೆದ 3 ದಿನ (4ನೇ ಶನಿವಾರ, ಭಾನುವಾರ ಹಾಗೂ ರಂಜಾನ್) ಸರ್ಕಾರಿ ಕಚೇರಿಗಳು ಬಂದ್ ಇದ್ದವು. ಮಂಗಳವಾರದಂದು ಹೊಸೂರು (ನಂ. 5), ಕೇಶ್ವಾಪುರ (ನಂ. 6) ಹಾಗೂ ಇಂದಿರಾ ಗಾಜಿನ ಮನೆ (ನಂ. 9) ಪಕ್ಕದಲ್ಲಿರುವ ಪಾಲಿಕೆ ವಲಯ ಕಚೇರಿಗಳಲ್ಲಿ ಜನ ದಟ್ಟಣೆ ಕಂಡು ಬಂದಿತು. ಆಸ್ತಿ ತೆರಿಗೆ ಪಾವತಿಸಲು ಜನರು ಚಲನ್ ಹಿಡಿದು ಉದ್ದನೆಯ ಸರದಿ ಸಾಲಿನಲ್ಲಿ ನಿಂತಿದ್ದರು.

    ಸುಮಾರು ಒಂದೂವರೆ ತಿಂಗಳ ಕಾಲ ಬಿಗುವಾದ ಲಾಕ್​ಡೌನ್ ಇದ್ದ ಕಾರಣ ಮನೆಯಿಂದ ಹೊರಗೆ ಬಂದು ತೆರಿಗೆ ಪಾವತಿಸಲು ಜನರಿಗೆ ಸಾಧ್ಯವಾಗಿರಲಿಲ್ಲ. ಬಳಿಕ ತೆರಿಗೆ ದರ ಪರಿಷ್ಕರಣೆ ಜನರನ್ನು ಗೊಂದಲಕ್ಕೆ ತಳ್ಳಿತ್ತು. ಕರೊನಾ ಸಂಕಟದ ನಡುವೆಯೂ ಆಸ್ತಿ ತೆರಿಗೆ ದರವನ್ನು ಶೇ. 20ರಿಂದ 30ರಷ್ಟು ಏರಿಕೆ ಮಾಡಿ ಪಾಲಿಕೆ ಕಂಗೆಣ್ಣಿಗೆ ಗುರಿಯಾಗಿತ್ತು. ಆಮೇಲೆ ಏರಿಕೆ ಪ್ರಮಾಣವನ್ನು ತುಸು ತಗ್ಗಿಸಿದೆ. ಪರಿಷ್ಕೃತ

    ದರವನ್ನು ಆನ್​ಲೈನ್​ನಲ್ಲಿ ದಾಖಲಿಸಲು ಪಾಲಿಕೆ ಒಂದೆರಡು ದಿನಗಳನ್ನು ತೆಗೆದುಕೊಂಡಿದೆ. ಮಂಗಳವಾರದಿಂದಲೇ ಹೊಸ ದರದನ್ವಯ ತೆರಿಗೆ ಸ್ವೀಕರಿಸಲಾಗುತ್ತಿದೆ.

    ಹಾಗಾಗಿ ಶೇ. 5 ರಿಯಾಯಿತಿಯನ್ನು ಜೂನ್ ಅಂತ್ಯದವರೆಗೆ ವಿಸ್ತರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ‘ಆಸ್ತಿ ತೆರಿಗೆ ಮೇಲೆ ನೀಡಿರುವ ಶೇ. 5ರಷ್ಟು ರಿಯಾಯಿತಿ ಪಡೆಯುವ ಅವಧಿ ವಿಸ್ತರಣೆ ಸಂಬಂಧ ಸರ್ಕಾರದಿಂದ ಯಾವುದೇ ಹೊಸ ಆದೇಶ ಬಂದಿಲ್ಲ. ಈಗಿರುವಂತೆ ಮೇ 31 ಕೊನೆಯ ದಿನವಾಗಿದೆ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ವಿಜಯವಾಣಿಗೆ ತಿಳಿಸಿದ್ದಾರೆ.

    ಹು-ಧಾ ಮಹಾನಗರ ಪಾಲಿಕೆಗೆ ರಿಯಾಯಿತಿ ಅವಧಿಯಲ್ಲಿಯೇ ಶೇ. 60ರಷ್ಟು ಆಸ್ತಿಧಾರಕರು ತೆರಿಗೆ ಸಂದಾಯ ಮಾಡಿರುತ್ತಾರೆ. ಈ ಬಾರಿ ದರ ಪರಿಷ್ಕರಣೆ ಗೊಂದಲ, ಲಾಕ್​ಡೌನ್​ನಿಂದ ಈ ಪ್ರಮಾಣ ತಗ್ಗುವ ಸಾಧ್ಯತೆಗಳಿವೆ. ಆದರೆ, 2020-21ನೇ ಸಾಲಿನಲ್ಲಿ ಪಾಲಿಕೆ ಆಸ್ತಿ ತೆರಿಗೆಯಿಂದ 78 ಕೋಟಿ ರೂ. ಆದಾಯ ನಿರೀಕ್ಷೆಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts