More

    ಆಸ್ತಿಯಲ್ಲೂ ಮಹಿಳೆಗೆ ಸಿಗಲಿ ಸಮಾನ ಹಕ್ಕು

    ರಾಜಕುಮಾರ ಹೊನ್ನಾಡೆ ಹುಲಸೂರು
    ಶಕ್ತಿ, ಸರಸ್ವತಿ, ಲಕ್ಷ್ಮೀ, ಭೂತಾಯಿ ಹೀಗೆ ಹತ್ತಾರು ಹೆಸರುಗಳಿಂದ ಕರೆಸಿಕೊಳ್ಳುವ ಮಹಿಳೆಗೆ ಸಮಾನತೆ ವಿಷಯದಲ್ಲಿ ಮಾತ್ರ ಸಮಾಜದ ಸ್ಪಂದನೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಸಚಿವೆ ಆರ್.ಸುನಂದಮ್ಮ, ಸೀ ಸಮುದಾಯಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ಸಿಗುವಂಥ ವ್ಯವಸ್ಥೆ ಜಾರಿಯಾಗಬೇಕು ಎಂದು ಆಶಿಸಿದರು.

    ಬೇಲೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಶರಣ ಉರಿಲಿಂಗ ಪೆದ್ದಿ ಉತ್ಸವ ಹಾಗೂ ಮಹಿಳಾ ಜಾನಪದ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಬಗ್ಗೆ ಎಲ್ಲರೂ ಗೌರವದ ಮಾತುಗಳನ್ನಾಡುತ್ತಾರೆ. ಆದರೆ ಕೆಲ ಕ್ಷೇತ್ರಗಳಲ್ಲಿ ಇದುವರೆಗೆ ಸಮಾನತೆ ಸಿಕ್ಕಿಲ್ಲ. ಪಾಲಕರ (ತವರುಮನೆ) ಆಸ್ತಿಯಲ್ಲಿ ಸಮಾನ ಹಕ್ಕು ಸಿಕ್ಕಾಗಲೇ ಮಹಿಳೆಯರಿಗೆ ಗೌರವ ನೀಡಿದಂತಾಗುತ್ತದೆ ಎಂದರು.

    ಜನಪದರು ಶೃಂಗಾರ, ನೀತಿ, ಧರ್ಮದ ಬಗ್ಗೆ ಮಾತ್ರ ಮಾತಾಡಿಲ್ಲ. ಹಕ್ಕುಗಳ ಬಗ್ಗೆಯೂ ಮಾತನಾಡಿದ್ದಾರೆ. ಇದು ಜನಪದ ಮಹಿಳೆಯ ದೊಡ್ಡ ಕೊಡುಗೆ. ಸಂವಿಧಾನ ಆಸ್ತಿ ಹಕ್ಕು ಕೊಟ್ಟಿದೆ. ಆದರೆ ಐದು ಪ್ರತಿಶತ ಮಾತ್ರ ಜಾರಿಯಾಗಿದ್ದು, ಶತಪ್ರತಿಶತ ಜಾರಿಗೆ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

    ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಸ್ವಾತಂತ್ರೃ ನೀಡಿದವರು ಶರಣರು, ತತ್ವಪದಕಾರರು. ಜಾನಪದ ಒಬ್ಬರಿಂದ ರಚನೆಯಾಗಿಲ್ಲ. ಬರೀ ಓದಿದರೆ ಸಾಲದು, ಹಾಡಿದರೆ ಮಾತ್ರ ಅರ್ಥವಾಗುತ್ತದೆ ಎಂದು ಹೇಳಿದರು.

    ಜನಪದ ಸಾಹಿತ್ಯ ಬರೀ ಒಬ್ಬರು ಬರೆದಿದ್ದಲ್ಲ. ಸಮುದಾಯದ ಸಾಹಿತ್ಯ ಇದಾಗಿದೆ. ಜಾನಪದ ಪ್ರಥಮ ಮಹಿಳಾ ಸಮ್ಮೇಳನ ಮಾಡುವುದರ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸುವುದರ ಜತೆಗೆ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರನ್ನು ಗುರುತಿಸಿ ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಿರುವುದು ಹರ್ಷ ತಂದಿದೆ ಎಂದರು.

    ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಮಹಿಳೆಯರಿಲ್ಲದ ಜಾನಪದವೇ ಇಲ್ಲ. ಜನಪದ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಪ್ರತಿಯೊಂದರಲ್ಲಿ ಮಹಿಳೆಯರ ಪಾತ್ರ ಎದ್ದು ಕಾಣುತ್ತದೆ. ಸಾಹಿತ್ಯ ಎಲ್ಲರನ್ನು ಒಳ್ಳೆಯ ರೀತಿಯಲ್ಲಿ ಬದುಕಬೇಕು ಎಂಬುದನ್ನು ಕಲಿಸುತ್ತದೆ. ಪಾಶ್ಚಾತ್ಯ ಸಂಸ್ಕೃತಿಗಳಿಗೆ ಮಾರು ಹೋಗದೆ ದೇಸಿ ಸಂಸ್ಕೃತಿ ಕಲಿಸಬೇಕು. ಹೀಗಾಗಿ ಮಕ್ಕಳಿಗೂ ಸಂಸ್ಕಾರ ಕಲಿಸುವುದರ ಜತೆಗೆ ಜಾನಪದ ಸಾಹಿತ್ಯದ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.

    ಸಾಹಿತ್ಯ ಸಂಸ್ಕೃತಿ ನಾಶವಾಗುತ್ತಿದೆ ಇದನ್ನು ಉಳಿಸುವುದು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

    ಸಮ್ಮೇಳನಾಧ್ಯಕ್ಷೆ ಮಂಜಮ್ಮ ಜೋಗತಿ, ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿ ಶ್ರೀ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿದರು. ಶ್ರೀ ಗುರುಬಸವ ಪಟ್ಟದೇವರು, ಡಾ.ಸತೀಶಕುಮಾರ ಹೊಸಮನಿ, ಮಾಜಿ ಎಂಎಲ್ಸಿ ವಿಜಯಸಿಂಗ್, ಸತೀಶ್ ಸಂಗನ, ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ಮಹಾದೇವ ಜಮ್ಮು, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಸಿಂದೆ, ಮಾಲಾ ನಾರಾಯಣರಾವ್, ಲಿಂಗರಾಜ ಅರಸ, ರಾಜಪ್ಪ ನಂದೋಡೆ, ಡಾ.ರಮೇಶ ಪೋತೆ, ಅಜರ್ುನ ಕನಕ, ಬಿ.ಆರ್. ಬುದ್ಧ, ಆನಂದ ದೇವಪ್ಪ ಉಪಸ್ಥಿತರಿದ್ದರು. ಡಾ.ಗವಿಸಿದ್ದಪ್ಪ ಪಾಟೀಲ್ ಸ್ವಾಗತಿಸಿದರು. ಬಸವರಾಜ ದಯಾಸಾಗರ ನಿರೂಪಣೆ ಮಾಡಿದರು.

    ಜಾನಪದ ಸಾಹಿತ್ಯ ಪುರುಷ ಪ್ರಧಾನ
    ಇತಿಹಾಸ, ಪರಂಪರೆ ಮೇಲೆ ಕಣ್ಣಾಡಿಸಿದರೆ ಜಾನಪದ ಸಾಹಿತ್ಯ ಪುರುಷ ಪ್ರಧಾನವಾದಂತೆ ಕಂಡುಬರುತ್ತದೆ. ಜಾನಪದದ ಬಹಳಷ್ಟು ಭಾಗ ಮಹಿಳೆಯರನ್ನು ಪುರುಷರು ಆಳೋದಕ್ಕೆ ಬೇಕಾದಂತೆ ರಚಿಸಿರುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಪದ್ಮಶ್ರೀ ಪುರಸ್ಕೃತೆ, ಸಮ್ಮೇಳನದ ಸವರ್ಾಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ ವ್ಯಕ್ತಪಡಿಸಿದರು. ಜಾನಪದದಲ್ಲಿ ಪುರುಷರಿಗೆ ಆದ್ಯತೆ ನೋಡಿದರೆ ಮಹಿಳೆಯರಿಗೆ ನಾಲ್ಕು ಗೋಡೆ ಮಧ್ಯೆ ಕಟ್ಟಿ ಹಾಕಿರುವಂತೆ ಕಂಡುಬರುತ್ತಿದೆ. ಆದರೀಗ ಕಾಲ ಬದಲಾಗಿದೆ. ಪುರುಷರು ಮಾಡುವ ಪ್ರತಿಯೊಂದು ಕೆಲಸವನ್ನು ಮಹಿಳೆಯರು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಮಹಿಳೆಯನ್ನು ಮನೆಯಲ್ಲಿ ಕಟ್ಟಿ ಹಾಕುವಂತೆ ಜಾನಪದ ಸಾಹಿತ್ಯ ರಚಿಸಲಾಗಿದೆ. ಆದರೆ ಪುರುಷರಿಗೆ ಯಾವುದೇ ಇತಿ-ಮಿತಿ ಇಲ್ಲ. ಸಂವಿಧಾನ ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲೂ ಸಮಾನತೆ ಕೊಟ್ಟಿದೆ. ಮಹಿಳೆ ಯಾವುದರಲ್ಲಿಯೂ ಪುರುಷನಿಗೆ ಕಡಿಮೆ ಇಲ್ಲ ಎಂದರು. ಹೆಣ್ಮಕ್ಕಳು ಎಷ್ಟು ಓದಿದರೂ ಮುಸರಿ ತಿಕ್ಕೋದ್ ತಪ್ಪಿತೇನು ಎಂಬ ಜಾನಪದ ಗಾದೆ ಇಂದು ಸುಳ್ಳಾಗಿದೆ. ಇಂದು ಗಂಡಸರಿಗೆ ಸಮನಾಗಿ ಹೆಣ್ಮಕ್ಕಳು ಓದಿ ಎಲ್ಲ ಕೆಲಸ ಮಾಡುತ್ತಿದ್ದಾರೆ. ಸ್ವಯಂ ಉದ್ಯೋಗದತ್ತ ದಾಪುಗಾಲು ಹಾಕುತ್ತಿದ್ದಾರೆ. ರಾಜ್ಯದ ಪ್ರತಿ ಹಳ್ಳಿಯಲ್ಲಿ ಹತ್ತಾರು ಮಹಿಳಾ ಸ್ವಸಹಾಯ ಗಂಪುಗಳು ರಚನೆಯಾಗಿ ಕೋಟ್ಯಂತರ ರೂ. ವ್ಯವಹಾರ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts