More

    ಆಸ್ತಿಗಿಂತ ಸದ್ಗುಣ ಮೆಚ್ಚಿ

    ಚಿತ್ರದುರ್ಗ:ವಿಷ ಸೇವಿಸಿದ ವ್ಯಕ್ತಿ ಸಾಯಬಹುದು, ಅದೃಷ್ಟವಶಾತ್ ಬದುಕಬಹುದು. ಆದರೆ, ಮಾತಿನ ವಿಷ ಸಂಬಂಧಗಳನ್ನೇ ಸಾಯಿಸಿ, ಜೀವನದುದ್ದಕ್ಕೂ ನೋವನ್ನುಂಟು ಮಾಡುತ್ತದೆ ಎಂಬ ಎಚ್ಚರಿಕೆ ದಂಪತಿಗಳಲ್ಲಿ ಇರಬೇಕು ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.

    ಮುರುಘಾಮಠದಲ್ಲಿ ಬುಧವಾರ ನಡೆದ 33ನೇ ವರ್ಷದ 7ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿ, ಆದ್ದರಿಂದ ಸಂಸಾರಿಕ ಬದುಕು ಸದಾ ಸಾಮರಸ್ಯದಿಂದ ಕೂಡಿರುವ ರೀತಿ ಮಾತು ಆಡುವ ಸಂದರ್ಭ ಜಾಗ್ರತೆ ವಹಿಸಬೇಕು ಎಂದರು.

    ಪ್ರಸ್ತುತ ದಿನಗಳಲ್ಲಿ ಹಣಕ್ಕೆ ಪ್ರಾಮುಖ್ಯತೆ ಹೆಚ್ಚಾಗಿದೆ. ಹೀಗಾಗಿ ಗುಣವಂತರು ವಧುವಿಗಾಗಿ ಅಲೆದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಆಸ್ತಿಗಿಂತಲೂ ವರನ ಸದ್ಗುಣ, ಸಂಸ್ಕಾರ, ಸ್ವಭಾವ ಮೆಚ್ಚಿ ವಿವಾಹವಾಗುವುದೇ ಅತ್ಯಂತ ಸೂಕ್ತ ಎಂದು ಕಿವಿಮಾತು ಹೇಳಿದರು.

    ಸಂಬಂಧಗಳು ಒಪ್ಪಿಗೆ ಸೂಚಿಸುವ ಗಳಿಗೆಯೇ ಶುಭ ಸಂದರ್ಭ. ಆಷಾಢ ಮಾಸದಲ್ಲೂ 8 ಜೋಡಿ ಇಲ್ಲಿ ಕಲ್ಯಾಣವಾಗಿ ಸಮಾಜ ನಿಧಾನವಾಗಿ ಮೌಢ್ಯ ಆಚರಣೆಗಳಿಂದ ಹೊರಬರುತ್ತಿರುವುದೇ ಇದಕ್ಕೆ ಸಾಕ್ಷಿ. ಎಲ್ಲ ಕಾಲದಲ್ಲೂ ಶ್ರೀಮಠದಲ್ಲಿ ವಿವಾಹ ನಡೆಯುತ್ತಿದ್ದು, ಒಳ್ಳೆಯದೇ ಆಗಿದೆ. ಕೆಡುಕು-ಒಳಿತೆಂಬುದು ಜನರ ನಂಬಿಕೆಯಾಗಿದೆ. ಸರ್ವರಿಗೂ ಲೇಸನ್ನು ಬಯಸಿದರೆ, ಕೆಟ್ಟದೆಂಬುದು ಹತ್ತಿರ ಸುಳಿಯಲು ಸಾಧ್ಯವಿಲ್ಲ ಎಂದರು.

    ಜೇವರ್ಗಿಯ ಶ್ರೀ ಮರುಳಶಂಕರ ದೇವರ ಮಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಮಾತನಾಡಿ, ಬಡವರ ಸಾಮೂಹಿಕ ಕಲ್ಯಾಣ ಮಹೋತ್ಸವ ಅತ್ಯಂತ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಶ್ರೀಮಠ ಶ್ರಮಿಸುತ್ತಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಾಮೂಹಿಕ ಕಲ್ಯಾಣದ ಕುರಿತು ಕೆಲ ವರ್ಷಗಳ ಹಿಂದೆ ಜನರಲ್ಲಿ ಕೀಳರಿಮೆ ಇತ್ತು. ಆದರೀಗ ದೂರವಾಗಿದೆ. ಸಾಲ ಮಾಡಿ ವೈಭವದ ಮದುವೆಗಿಂತಲೂ ಇಲ್ಲಿ ಸರಳವಾಗಿ ಆಗುವುದರಿಂದ ಆರ್ಥಿಕ ದೃಷ್ಟಿಯಿಂದಲೂ ಮುಂದಿನ ಭವಿಷ್ಯಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.

    ಹುಬ್ಬಳ್ಳಿಯ ಶ್ರೀ ಚಂದ್ರಶೇಖರ ಶಿವಯೋಗಿ ಸ್ವಾಮೀಜಿ ಮಾತನಾಡಿ, ವಿವಾಹ ಆಗುವವರ ಮನಸ್ಸುಗಳು ಶುದ್ಧವಾಗಿದ್ದರೆ, ಆಚಾರ-ವಿಚಾರ, ನಡೆ-ನುಡಿ ಚೆನ್ನಾಗಿದ್ದರೆ ಜೀವನ ಸುಖಮಯ ಆಗಲಿದೆ. ಸ್ವಾತಂತ್ರೃವಾಗಿ ಯೋಚಿಸುವ ಶಕ್ತಿ ಬೆಳೆಸಿಕೊಂಡರೆ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಜನನ-ಮರಣದ ನಡುವೆ ಪರೋಪಕಾರ ಗುಣ ಶಾಶ್ವತವಾಗಿ ಉಳಿಯಲಿದೆ ಎಂದರು.

    ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ತಿಪ್ಪೇಸ್ವಾಮಿ, ಜ್ಞಾನಮೂರ್ತಿ ಇತರರಿದ್ದರು. ಎಂಸಿಕೆಎಸ್ ಫೌಂಡೇಶನ್‌ನಿಂದ ವಧು-ವರರಿಗೆ ವಸ್ತ್ರ-ಮಾಂಗಲ್ಯ ವಿತರಿಸಲಾಯಿತು.
    ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಶ್ರೀ ಚಂದ್ರಶೇಖರ ಶಿವಯೋಗಿ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ ಇತರರಿದ್ದರು.


    ರಾಜ್ಯಮಟ್ಟದ ಮಧು-ವರರ ಸಮಾವೇಶ 9ಕ್ಕೆ
    ಚಿತ್ರದುರ್ಗ: ಚಿತ್ರದುರ್ಗದ ಬಸವೇಶ್ವರ ವಧು-ವರರ ಮಾಹಿತಿ ಕೇಂದ್ರದಿಂದ ಬೆಂಗಳೂರಿನ ಗಾಂಧಿನಗರದ ಮಹಾರಾಷ್ಟ್ರ ಮಂಡಳದಲ್ಲಿ ಜು.9ರ ಬೆಳಗ್ಗೆ 11ಕ್ಕೆ ರಾಜ್ಯಮಟ್ಟದ ಸರ್ವಧರ್ಮ ವಧು-ವರರ ಸಮಾವೇಶ ಏರ್ಪಡಿಸಲಾಗಿದೆ. ಇಳಕಲ್ ಚಿತ್ತರಗಿ ವಿಜಯಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ, ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಸಮಾವೇಶದ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈಕೋಟ್ ವಕೀಲ ಜೆ.ಎಂ.ಅನಿಲ್ಕುಮಾರ್ ಆಗಮಿಸಲಿದ್ದಾರೆ ಎಂದು ಕೇಂದ್ರದ ಸಂಚಾಲಕ ಜೆ.ಎಂ.ಜಂಬಯ್ಯ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts