More

    ಆಶ್ರಯ ನೀಡದ ನಿರ್ವಿುತಿ ಕೇಂದ್ರ

    ಹುಬ್ಬಳ್ಳಿ: ವಿಮಾನ ನಿಲ್ದಾಣ ವಿಸ್ತರಣೆಯಿಂದ ಸ್ಥಳಾಂತರಗೊಂಡ ಜಗದೀಶನಗರ ಆಶ್ರಯ ಬಡಾವಣೆಯ ಫಲಾನುಭವಿಗಳಿಗೆ ಜಿಲ್ಲಾ ನಿರ್ವಿುತಿ ಕೇಂದ್ರ ನಾಲ್ಕು ವರ್ಷ ಕಳೆದರೂ ಹೊಸ ಮನೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಮೇಲಾಗಿ ಮಾಡಿರುವ ಕಾಮಗಾರಿ ಕಳಪೆಯಾಗಿರುವುದು ಗೋಚರಿಸುತ್ತಿದೆ.

    252 ಚದರ ಅಡಿ ಅಳತೆಯ ಪ್ರತಿ ಮನೆಗೆ 2.98 ಲಕ್ಷ ರೂ. ಖರ್ಚು ಮಾಡಲಾಗಿದೆ. ಈ ಹಣದಲ್ಲಿ ಇಷ್ಟು ಚಿಕ್ಕ ಮನೆಯನ್ನು ಅಚ್ಚುಕಟ್ಟಾಗಿ ಮಾಡಬಹುದಿತ್ತು. ಸ್ಲ್ಯಾಬ್ ಹಾಕಿ ಬಣ್ಣ ಬಳಿಯಲಾಗಿದೆ. ಅರ್ಧದಷ್ಟು ಮನೆಗಳಿಗೆ ಮುಂಬಾಗಿಲು ಜೋಡಿಸಿಲ್ಲ. ಬೆಡ್​ರೂಮ್ೆ ಕಬ್ಬಿಣದ ಬಾಗಿಲು ಅಳವಡಿಸಲಾಗಿದೆ. ಕಿಟಕಿಯ ಬಾಗಿಲುಗಳು ಸಹ ಕಬ್ಬಿಣದ್ದೆ. ನೆಲಕ್ಕೆ ರೆಡ್ ಆಕ್ಸೈಡ್ ಹಾಕಲಾಗಿದೆ. ಈಗಾಗಲೇ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದೀಗ ಕಳೆದ 6 ತಿಂಗಳಿಂದ ಕೆಲಸವೇ ನಡೆದಿಲ್ಲ. ಕಳಪೆ ಕಾಮಗಾರಿಯ ಬಗ್ಗೆ ದೂರುಗಳು ಬಂದಿದ್ದರೂ ತನಿಖೆ ಮಾತ್ರ ನಡೆದಿಲ್ಲ.

    ವಿಮಾನ ನಿಲ್ದಾಣದ ವಿಸ್ತರಣೆಯ ಹಿನ್ನೆಲೆಯಲ್ಲಿ ಜಗದೀಶನಗರ ಆಶ್ರಯ ಬಡಾವಣೆಯ 188 ಮನೆಗಳನ್ನು ಸ್ಥಳಾಂತರಕ್ಕೆ ಗುರುತಿಸಲಾಗಿತ್ತು. ಇಲ್ಲಿ 145 ಮನೆಗಳಲ್ಲಿ ಫಲಾನುಭವಿಗಳು ವಾಸ್ತವ್ಯ ಇದ್ದರೂ, ಉಳಿದ ಮನೆಗಳು ವಾಸಕ್ಕೆ ಯೋಗ್ಯವಾಗಿರಲಿಲ್ಲ. ಈಗಲೂ 15-20 ಮನೆಗಳಲ್ಲಿ ಜನರು ವಾಸವಾಗಿದ್ದಾರೆ. ಉಳಿದವರು ಮನೆ ಬಿಟ್ಟು ಬಾಡಿಗೆ ಮನೆಗೆ ಸ್ಥಳಾಂತರಗೊಂಡು ಕಳೆದ ನಾಲ್ಕು ವರ್ಷಗಳಿಂದ ಹೊಸ ಮನೆಗೆ ಎದುರು ನೋಡುತ್ತಿದ್ದಾರೆ.

    600 ಚದರ ಅಡಿ ಜಾಗದಲ್ಲಿ ಹೊಸದಾಗಿ ಮನೆಗಳನ್ನು ನಿರ್ವಿುಸಲಾಗಿದೆ. ವಿದ್ಯುತ್ ಸಂಪರ್ಕವಿಲ್ಲ. ಕೆಲವು ಮನೆಗಳ ಆಂತರಿಕ ವೈರಿಂಗ್ ಕಾಮಗಾರಿ ಸಹ ಪೂರ್ಣಗೊಂಡಿಲ್ಲ. ಹಳೇ ಕೊಳವೆ ಬಾವಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಆದರೆ, ಮನೆ ಮನೆಗೆ ನೀರಿನ ಸಂಪರ್ಕ ಕೊಟ್ಟಿಲ್ಲ. ರಸ್ತೆ, ಒಳಚರಂಡಿ, ಗಟಾರದಂಥ ಮೂಲ ಸೌಕರ್ಯದ ಕೆಲಸ ಒಂದಿಂಚೂ ಆಗಿಲ್ಲ. ಇಲ್ಲಿ ಮನೆ ಹಾಗೂ ಮೂಲ ಸೌಕರ್ಯ ನಿರ್ವಣಕ್ಕೆ ರಾಜ್ಯ ಸರ್ಕಾರದ ವಸತಿ ಇಲಾಖೆ 8.19 ಕೋಟಿ ರೂ. ಬಿಡುಗಡೆ ಮಾಡಿತ್ತು.

    2015 ಡಿಸೆಂಬರ್​ನಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಇನ್ನೂವರೆಗೂ ಮುಗಿದಿಲ್ಲವೆಂದರೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಬಡವರ ಬಗ್ಗೆ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಆಶ್ರಯ ಬಡಾವಣೆಯಲ್ಲಿ ವಾಸಿಸುವವರು ಬಹುತೇಕ ಕಡು ಬಡವರು. ನಿತ್ಯ ದುಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು. ಬಾಡಿಗೆ ಮನೆಯಲ್ಲಿ ಜೀವನ ಅಸಾಧ್ಯ. ಹಾಗಾಗಿ ಸ್ವಂತ ಸೂರಿಗೆ ಸಾಕಷ್ಟು ಕಷ್ಟ ಪಡುತ್ತಾರೆ. ಉಳ್ಳವರಿಗಾಗಿ (ವಿಮಾನ ಸೌಲಭ್ಯಕ್ಕಾಗಿ) ತ್ಯಾಗ ಮಾಡಿದವರ ಬದುಕು ಕಠೋರವಾಗಿದೆ.

    ಜಿಲ್ಲಾಡಳಿತ ಕಳೆದ 2-3 ವಾರದಿಂದ ಕರೊನಾ-ಲಾಕ್​ಡೌನ್ ಹಿಂದೆ ವ್ಯಸ್ತವಾಗಿದೆ. ಬೇರೆ ಸಂಗತಿಗಳು ಸದ್ಯ ಆದ್ಯತಾ ಪಟ್ಟಿಯಲ್ಲಿ ಇಲ್ಲ. ಆದರೆ, ಕಳೆದ ನಾಲ್ಕು ವರ್ಷಗಳಿಂದ ಜಗದೀಶನಗರ ಆಶ್ರಯ ಬಡಾವಣೆಯಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡುವಲ್ಲಿ ಆಗಿರುವ ವಿಳಂಬ, ನಿರ್ಲಕ್ಷ್ಯಂದ ತಪ್ಪಿಸಿಕೊಳ್ಳುವಂತಿಲ್ಲ.

    ನಾನು ಕಳೆದ 6 ತಿಂಗಳಿಂದ ಈ ಹುದ್ದೆಯಲ್ಲಿ ಇದ್ದೇನೆ. ಈಗ ಲಾಕ್​ಡೌನ್ ಇರುವುದರಿಂದ ಕಚೇರಿಗೆ ರಜೆ ಇದೆ. ಜಗದೀಶನಗರ ಆಶ್ರಯ ಬಡಾವಣೆಯ ಫಲಾನುಭವಿಗಳ ಹೊಸ ಮನೆ ನಿರ್ವಣಕ್ಕೆ ಸಂಬಂಧಿಸಿದ ಕಡತ ಕಚೇರಿಯಲ್ಲಿದ್ದು, ಸದ್ಯ ನಾನು ಏನೂ ಹೇಳುವ ಸ್ಥಿತಿಯಲ್ಲಿ ಇಲ್ಲ. ಯಾವಾಗ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು? ಯಾವಾಗ ಪೂರ್ಣವಾಗಬೇಕಿತ್ತು ಎಂಬುದು ಕಡತ ನೋಡಿಯೇ ಹೇಳಬೇಕು.

    | ಶಿವಕುಮಾರ ಪಾಟೀಲ, ವ್ಯವಸ್ಥಾಪಕ, ಜಿಲ್ಲಾ ನಿರ್ವಿುತಿ ಕೇಂದ್ರ

    ಮನೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ. ಆರ್​ಸಿಸಿ ಸ್ಲ್ಯಾಬ್​ನಲ್ಲಿ ಸೋರಿಕೆ ಕಂಡು ಬಂದಿದೆ. ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.

    | ಪ್ರೇಮನಾಥ ಚಿಕ್ಕತುಂಬಳ, ಅಧ್ಯಕ್ಷರು, ಜಗದೀಶನಗರ ಆಶ್ರಯ ನಿವಾಸಿಗಲ ಹಿತರಕ್ಷಣಾ ಸಮಿತಿ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts