More

    ಆಶ್ರಯ ನಿವೇಶನ ಹಂಚಿಕೆ ಗೊಂದಲ

    ಹಳಿಯಾಳ: ಪಟ್ಟಣದ ಚಿಬ್ಬಲಗೇರಿ ರಸ್ತೆಯಲ್ಲಿ ಪುರಸಭೆ ಕಾಯ್ದಿಟ್ಟ 1.10 ಎಕರೆ ಜಮೀನನ್ನು ಆಶ್ರಯ ಯೋಜನೆಗೆ ಬಳಸಲು ಮುಂದಾಗಿರುವ ಶಾಸಕ ಆರ್.ವಿ. ದೇಶಪಾಂಡೆ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಪ್ರತಿಪಕ್ಷ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಈ ಕುರಿತು ಮನವಿಯನ್ನೂ ಸಲ್ಲಿಸಿದ್ದಾರೆ.

    ಪಟ್ಟಣದ ಕೈಗಾರಿಕೆ ಬಡಾವಣೆ ಮುಂಭಾಗದಲ್ಲಿ ಪುರಸಭೆಗೆ ಸೇರಿದ 1.10 ಎಕರೆ ಜಮೀನಿದೆ. ಇದನ್ನು ಶಾಸಕ ಆರ್.ವಿ. ದೇಶಪಾಂಡೆ ಸೂಚನೆ ಮೇರೆಗೆ ಆಶ್ರಯ ಯೋಜನೆಗೆ ಬಳಸಲಾಗುತ್ತಿದೆ. ಈಗಾಗಲೇ ಪುರಸಭೆಯು 29 ಪ್ಲಾಟ್ ಗುರುತು ಮಾಡಿದ್ದು, ಇದರಲ್ಲಿ 6 ಕಾರ್ನರ್ ಪ್ಲಾಟ್​ಗಳನ್ನು ಹರಾಜು ಮಾಡಲು ಮುಂದಾಗಿದೆ. ಜಮೀನಿನ ಮುಂಭಾಗದಲ್ಲಿ ವಸತಿ ಬಡಾವಣೆ, ಪುರಸಭೆಯ ಜಿ-ಪ್ಲಸ್ 2 ಅಪಾರ್ಟ್​ವೆುಂಟ್ ಕಟ್ಟಡ, ಸಾರಿಗೆ ಘಟಕ, ಅಗ್ನಿಶಾಮಕ ಕಚೇರಿ, ವಸತಿ ನಿಲಯ, ಹೈಸ್ಕೂಲ್, ಕಾಲೇಜು, ಸಬ್ ಜೈಲ್ ಮೊದಲಾದವು ಇವೆ. ಜತೆಗೆ, ಖೇಲೋ ಇಂಡಿಯಾ ಯೋಜನೆಯಡಿ ಬೃಹತ್ ಒಳಾಂಗಣ ಕ್ರೀಡಾಂಗಣ ಈ ಭಾಗದಲ್ಲೇ ನಿರ್ವಣವಾಗುತ್ತಿದೆ. ಹೀಗಾಗಿ, ಪುರಸಭೆಯ ಈ 1.10 ಎಕರೆ ಜಮೀನಿಗೆ ಭಾರಿ ಬೆಲೆ ಬಂದಿದೆ. ಇದೊಂದು ವಾಣಿಜ್ಯ ನಿವೇಶನ ಎಂದು ಪರಿಗಣಿಸುವಂತಹ ಪರಿಸ್ಥಿತಿ ಇದೆ.

    ಬಿಜೆಪಿ ನಿಲುವು: ಕಾರ್ನರ್ ಪ್ಲಾಟ್ ಮಾತ್ರ ಹರಾಜು ಮಾಡುವ ಬದಲು ಸಂಪೂರ್ಣ ಜಮೀನು ಮಾರಿದರೆ ಪುರಸಭೆಗೆ ಕೋಟ್ಯಂತರ ರೂ. ಆದಾಯ ಬರಲಿದೆ. ಇದರಲ್ಲಿ ಬೇರೆಡೆ ಜಮೀನು ಖರೀದಿಸಿ, ಇನ್ನೂ ಹೆಚ್ಚಿನ ಜನರಿಗೆ ಪಟ್ಟಾ ನಿವೇಶನ ನೀಡಬಹುದು. ಅಥವಾ ಶಾಶ್ವತ ಆದಾಯ ಬರುವಂತೆ ವಾಣಿಜ್ಯ ಮಳಿಗೆೆಗಳನ್ನು ಪುರಸಭೆಯೇ ನಿರ್ವಿುಸಲಿ ಎಂಬುದು ಬಿಜೆಪಿ ಸದಸ್ಯರ ಆಗ್ರಹವಾಗಿದೆ.

    ಸಭೆ ಇಂದು
    ಪುರಸಭೆಯ ಕ್ರಮ ಆಕ್ಷೇಪಿಸಿ ಬಿಜೆಪಿ ಸದಸ್ಯರ ನಿಯೋಗವು, ನಿವೇಶನ ವಿತರಣೆ ಯೋಜನೆಗೆ ತಡೆ ಹಿಡಿಯಬೇಕೆಂದು ಕಳೆದ ಡಿಸೆಂಬರ್​ನಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಫೆ. 6ರಂದೂ ಮತ್ತೆ ಮನವಿ ಸಲ್ಲಿಸಿದೆ. ಈ ವಿವಾದದ ಸಂದರ್ಭದಲ್ಲೇ ಫೆ. 8ರಂದು ಶಾಸಕ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆ ಕರೆಯಲಾಗಿದೆ. ಆಡಳಿತ ಮತ್ತು ಪ್ರತಿಪಕ್ಷದ ಎಲ್ಲ ಸದಸ್ಯರನ್ನು ಈ ಸಭೆಗೆ ಆಹ್ವಾನಿಸಲಾಗಿದೆ. ಈ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

    ಶಾಸಕ ಆರ್.ವಿ. ದೇಶಪಾಂಡೆ ಅವರು ಹಿರಿಯ ನಾಯಕರಾಗಿದ್ದು, ಅವರು ಈವರೆಗೆ ಕೈಗೊಂಡ ಯೋಜನೆಗಳು ಜನಪರವಾಗಿವೆ. ಹೀಗಿರುವಾಗ ಆಶ್ರಯ ನಿವೇಶನ ವಿತರಣೆ ಮತ್ತು ಅದಕ್ಕೆ ಬಳಸಲಾಗುವ ಜಮೀನಿನ ಕುರಿತಾಗಿ ಉದ್ಭವಿಸಿರುವ ಆಕ್ಷೇಪಣೆಗಳಿಗೆ ಶಾಸಕ ದೇಶಪಾಂಡೆ ಅವರು ಸೂಕ್ತ ಪರಿಹಾರ, ಮಾಗೋಪಾಯ ತೋರಿಸಲಿದ್ದಾರೆ.
    | ಅಜರ್ ಬಸರಿಕಟ್ಟಿ ಪುರಸಭೆ ಅಧ್ಯಕ್ಷ

    ಬೆಲೆಬಾಳುವ ಜಮೀನನ್ನು ಆಶ್ರಯ ಯೋಜನೆಗೆ ಬಳಸುವ ಬದಲು ಶಾಶ್ವತ ಆದಾಯ ಬರುವ ಮೂಲವನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂಬುದು ನಮ್ಮ ಆಗ್ರಹ.
    | ಉದಯ ಹೂಲಿ ಪುರಸಭೆ ಪ್ರತಿಪಕ್ಷ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts