More

    ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ, ಉಸ್ತುವಾರಿ ಸಚಿವ ಆರ್.ಅಶೋಕ್ ಶ್ಲಾಘನೆ, ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ನಿಂದ ಮಕ್ಕಳ ದತ್ತು ಸ್ವೀಕಾರ

    ಬೆಂಗಳೂರು ಗ್ರಾಮಾಂತರ: ಕರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಆಶಾ ಕಾರ್ಯಕರ್ತೆಯರ ಸೇವೆ ಪ್ರಮುಖವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.

    ದೊಡ್ಡಬಳ್ಳಾಪುರದ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿ ಮಂಗಳವಾರ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಏರ್ಪಡಿಸಿದ್ದ ‘ನೀವು ಅನಾಥರಲ್ಲ’ ಕಾರ್ಯಕ್ರಮದಲ್ಲಿ ಟ್ರಸ್ಟ್‌ನಿಂದ ಸಾಂಕೇತಿಕವಾಗಿ ಐದು ಮಕ್ಕಳಿಗೆ ದತ್ತು ಸ್ವೀಕಾರ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

    ಕೋವಿಡ್, ಮಾನವೀಯತೆ ಹಾಗೂ ಆತ್ಮಸಾಕ್ಷಿಯಿಂದ ಬದುಕುವಂತೆ ಎಲ್ಲರಿಗೂ ಪಾಠ ಕಲಿಸಿದೆ. ಬಡವರು, ನಿರ್ಗತಿಕರು ಹಾಗೂ ಅನಾಥ ಮಕ್ಕಳಿಗೆ ಸಹಾಯ ಮಾಡುತ್ತಿರುವ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.

    ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಹಾಗೂ ಅಂತರ ಪಾಲಿಸುವ ಮೂಲಕ ಎಲ್ಲರೂ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಡಿಸೆಂಬರ್ ಅಥವಾ ಜನವರಿ ಒಳಗಾಗಿ ಎಲ್ಲರಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

    ಸಮಾಜದ ಹಿತ ಮುಖ್ಯ: ಪ್ರಸ್ತುತ ಸಂದರ್ಭದಲ್ಲಿ ಸಮಾಜದ ಹಿತ ಬಯಸುವುದು ಮುಖ್ಯವಾಗಿದೆ. ಆರ್.ಅಶೋಕ್ ಅವರ ಕರೊನಾ ಟಾಸ್‌‌ಕೆೆರ್ಸ್ ಸಮಿತಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಅವಧೂತ ಶ್ರೀ ವಿನಯ್ ಗುರೂಜಿ ತಿಳಿಸಿದರು.

    ಕೇವಲ ಮತ ಹಾಕುವುದಷ್ಟೇ ಪ್ರಜೆಗಳ ಕೆಲಸವಲ್ಲ, ಸಾಂಕ್ರಾಮಿಕ ರೋಗಗಳಂತಹ ಸಮಸ್ಯೆಗಳು ಬಂದಾಗ ಪಕ್ಷಾತೀತವಾಗಿ ಕೆಲಸ ನಿರ್ವಹಿಸಬೇಕು ಹಾಗೂ ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಜತೆ ಕೈ ಜೋಡಿಸಿ ನಮ್ಮಿಂದಾಗುವ ಸಹಾಯ ಮಾಡಬೇಕು ಎಂದು ಹೇಳಿದರು.

    ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ನಿಂದ ರಾಜ್ಯದಲ್ಲಿ ನಿರಂತರವಾಗಿ 47ನೇ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋವಿಡ್‌ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳನ್ನು ದತ್ತು ಪಡೆದು, ಅವರ ಶಿಕ್ಷಣ, ಆಹಾರ, ಕೆಲಸ ಹಾಗೂ ಹೆಣ್ಣುಮಕ್ಕಳ ಮದುವೆಯನ್ನು ಟ್ರಸ್ಟ್‌ನಿಂದ ಮಾಡಲಾಗುವುದು ಎಂದರು.

    ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ ಮುಖ್ಯವಾಗಿ ಅವರಿಗೆ ಶಿಕ್ಷಣ ಕೊಡಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದ್ದು, ಈಗಾಗಲೇ ರಾಜ್ಯಾದ್ಯಂತ ಜಿಲ್ಲಾ ಕೇಂದ್ರದಲ್ಲಿ ಟ್ರಸ್ಟ್‌ನಿಂದ ಅನ್ನ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಆಶಾ ಕಾರ್ಯಕರ್ತೆಯರಿಗೆ ಮೆಡಿಕಲ್ ಹಾಗೂ ಆಹಾರ ಕಿಟ್ ವಿತರಣೆ ಮಾಡಲಾಯಿತು. ಸಾಂಕೇತಿಕವಾಗಿ ಐದು ಮಕ್ಕಳನ್ನು ದತ್ತು ಪಡೆಯಲಾಯಿತು ಹಾಗೂ ಜಿಲ್ಲಾಡಳಿತಕ್ಕೆ ಹತ್ತು ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಹಸ್ತಾಂತರಿಸಲಾಯಿತು.

    ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಬೇಳೂರು ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್, ಉಪವಿಭಾಗಾಧಿಕಾರಿ ಅರುಳ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts