More

    ಆರ್‌ಸಿಯುನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

    ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಅಧಿಕಾರಿಗಳು ಶುಲ್ಕದ ಹೆಸರಿನಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು.

    ಈಗಾಗಲೇ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಶಿಷ್ಯವೇತನವನ್ನು ರಾಣಿ ಚನ್ನಮ್ಮ ವಿವಿಗೆ ಬಿಡುಗಡೆ ಮಾಡಿದೆ. ಆದರೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಶಿಷ್ಯವೇತನದ ಹೊರತಾಗಿ ಪದವಿ ವಿದ್ಯಾರ್ಥಿಗಳಿಂದ ತಲಾ 8 ರಿಂದ 10 ಸಾವಿರ ರೂ. ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಶುಲ್ಕ ಕಟ್ಟದಿದ್ದರೆ ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡುವುದಿಲ್ಲ. ಅಂತಿಮ ವರ್ಷದ ಅಂಕಪಟ್ಟಿ ನೀಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು.

    ನಾಲ್ಕೈದು ವರ್ಷಗಳಿಂದ ರಾಣಿ ಚನ್ನಮ್ಮ ವಿವಿ ಅಧಿಕಾರಿಗಳು ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಕೂಟ, ವೈದ್ಯಕೀಯ ತಪಾಸಣೆ, ಅಭಿವೃದ್ಧಿ ಹೀಗೆ ವಿವಿಧ ಹೆಸರಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳಿಂದ 17 ರಿಂದ 20 ಸಾವಿರ ರೂ. ವರೆಗೆ ಹೆಚ್ಚುವರಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಹೆಚ್ಚುವರಿ ಶುಲ್ಕ ಕಟ್ಟಲು ನಿರಾಕರಿಸುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಸಚಿವರಿಗೆ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

    ಸೆ.27ರಿಂದ ಪದವಿ ಪರೀಕ್ಷೆಗಳು ಆರಂಭಗೊಳ್ಳುತ್ತಿದ್ದು, ಪರೀಕ್ಷೆಯ ಮುನ್ನವೇ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಇಲ್ಲದಿದ್ದರೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡುವುದಿಲ್ಲ. ಹಾಲ್‌ಟಿಕೆಟ್ ಕೂಡ ನೀಡುವುದಿಲ್ಲ ಎಂದು ವಿಷಯ ವಿಭಾಗದ ಮುಖ್ಯಸ್ಥರು ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರವು ಹೆಚ್ಚುವರಿ ಶುಲ್ಕ ವಸೂಲಿ ಮಾಡದಂತೆ ಸೂಚನೆ ನೀಡಿದರೂ ವಿವಿ ಅಧಿಕಾರಿಗಳು ವಸೂಲಿ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಬದಲಾಗಿ ಶಿಕ್ಷಣದ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು. ರಾಣಿ ಚನ್ನಮ್ಮ ವಿವಿ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗೆ ಕೇಳಿದಷ್ಟು ಹಣಕೊಟ್ಟರೆ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತವೆ. ಹಣ ನೀಡದಿದ್ದರೆ ಯಾವುದೇ ಕೆಲಸವು ಆಗುವುದಿಲ್ಲ. ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪಡೆದುಕೊಳ್ಳಲು 15 ರಿಂದ 18 ಸಾವಿರ ರೂ. ವರೆಗೆ ಶುಲ್ಕ ಕಟ್ಟಬೇಕು. ಇಲ್ಲದಿದ್ದರೆ ಪದವಿ ಅಂಕ ಪಟ್ಟಿ, ಪ್ರಮಾಣ ಪತ್ರ ನೀಡುವುದಿಲ್ಲ. ಸಚಿವರು, ಶಾಸಕರ ಪತ್ರಗಳಿಗೆ ಇಲ್ಲಿ ಬೆಲೆ ಇಲ್ಲ. ಹಣ ಕೊಟ್ಟರೆ ಮಾತ್ರ ಬೆಲೆ ಕೊಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ವಿವಿ ಜಿಎಸ್ ಪರುಶರಾಮ ಮೂಕನವರ, ರಮೇಶ, ರಾಹುಲ, ಸುರೇಖಾ ಹಾಗೂ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts