More

    ಆರ್ಯ ವೈಶ್ಯರ ಅಭಿವೃದ್ಧಿಗೆ ಸೌಲಭ್ಯ

    ಹಾವೇರಿ: ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿಗೆ ನೇರ ಹಾಗೂ ಅರಿವು ಸಾಲ ಯೋಜನೆಗಳು ಜಾರಿಯಲ್ಲಿವೆ. ಮುಂದಿನ ವರ್ಷದಿಂದ ಫುಡ್ ಟ್ರಕ್ ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ನಿಗಮದಿಂದ ನೆರವು ಒದಗಿಸಲಾಗುತ್ತದೆ ಎಂದು ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣಕುಮಾರ ಹೇಳಿದರು.

    ನಗರದ ಪ್ರವಾಸಿ ಮಂದಿರಲ್ಲಿ ಸೋಮವಾರ ನಿಗಮದದಿಂದ ಫಲಾನುಭವಿಗಳಿಗೆ 1 ಲಕ್ಷ ರೂ. ಸಾಲ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು. ‘ನಿಗಮ ಸ್ಥಾಪನೆಯಾದ ಮೇಲೆ ಆರ್ಯ ವೈಶ್ಯ ಜನಾಂಗದ ಬಡವರಿಗೆ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಶೇ. 4ರ ವಾರ್ಷಿಕ ಬಡ್ಡಿದರದಲ್ಲಿ 20 ಸಾವಿರ ರೂ. ಸಹಾಯಧನ ಹಾಗೂ 80 ಸಾವಿರ ರೂ. ಸಾಲದ ಹಣ ಸೇರಿ 1ಲಕ್ಷ ರೂ, ನೇರ ಸಾಲ ಯೋಜನೆ ರೂಪಿಸಲಾಗಿದೆ. ಈ ಜನಾಂಗದ ಬಡಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶೇ. 2ರ ಬಡ್ಡಿ ದರದಲ್ಲಿ ಅರಿವು ಸಾಲ ಯೋಜನೆಯನ್ನು ನಿಗಮದಿಂದ ಜಾರಿಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ನೇರ ಸಾಲ ಯೋಜನೆಯಡಿ 1,665 ಹಾಗೂ ಶೈಕ್ಷಣಿಕ ಅರಿವು ಸಾಲ ಯೋಜನೆಯಡಿ 65 ಜನರಿಗೆ ನೆರವು ಒದಗಿಸಲಾಗುತ್ತದೆ. ಈಗಾಗಲೇ ಸಾಲ ಮಂಜೂರಾತಿ ಪತ್ರ ನೀಡಲಾಗುತ್ತಿದೆ. ಸಾಲ ಮಂಜೂರಾತಿ ಪತ್ರ ಪಡೆದ ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ’ ಎಂದರು.

    ಮುಂದಿನ ಆರ್ಥಿಕ ವರ್ಷದಿಂದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಆರ್ಯ ವೈಶ್ಯ ಸಮಾಜದವರ ಕೃಷಿ ಕಾರ್ಯ ಬೆಂಬಲಿಸಲು ಗಂಗಾ ಕಲ್ಯಾಣ ಯೋಜನೆಯಡಿ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ನಿಗಮಕ್ಕೆ ಕನಿಷ್ಟ 1 ಕೋಟಿ ರೂ. ಅನುದಾನ ಒದಗಿಸಲು ಮುಖ್ಯಮಂತ್ರಿಯನ್ನು ಕೋರಲಾಗಿದೆ. ಸಣ್ಣಪುಟ್ಟ ತಿಂಡಿ ತಿನಿಸು ತಯಾರಿಸುವ ವೃತ್ತಿಯಲ್ಲಿ ತೊಡಗಿರುವವರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಕರ್ಯ ಕಲ್ಪಿಸಲು ಫುಡ್ ಟ್ರಕ್ ಯೋಜನೆ ಜಾರಿಗೆ ತಂದು 100 ಫುಡ್ ಟ್ರಕ್​ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಸಿಎಂ ಜತೆ ರ್ಚಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

    ಸರ್ಕಾರದ ನೆರವು ಪಡೆಯಲು ಬೇಕಾದ ಜಾತಿ, ಆದಾಯ ಪ್ರಮಾಣಪತ್ರ ಪಡೆಯುವ ತೊಡಕನ್ನು ನಿವಾರಿಸಲಾಗಿದೆ. ಆರ್ಯವೈಶ್ಯ ಜನಾಂಗದವರು ಆನ್​ಲೈನ್ ಮೂಲಕ ನಿಗಮಕ್ಕೆ ಅರ್ಜಿ ಸಲ್ಲಿಸಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದರು.

    ಪರಿಸರ ಸ್ನೇಹಿ ಪ್ರಚಾರ: ನಿಗಮದ ಪ್ರಚಾರದ ಸಾಮಗ್ರಿಗಳನ್ನು ಪರಿಸರ ಸ್ನೇಹಿಯಾಗಿ ಮುದ್ರಿಸಲಾಗಿದೆ. ಈ ಮುದ್ರಣ ಸಾಮಗ್ರಿಗಳಲ್ಲಿ ಹೂವು, ಹಣ್ಣು ಇತರ ಜಾತಿಯ ಬೀಜಗಳನ್ನು ಕಾಗದದ ಒಳಗೆ ಸೇರಿಸಿ ಮುದ್ರಿಸಲಾಗಿದೆ. ಬಳಕೆಯಾದ ನಂತರ ಎಸೆದಾಗ ನೆಲದಲ್ಲಿ ಬಿದ್ದ ಈ ಪ್ರಚಾರ ಪತ್ರಗಳ ಒಳಗಿರುವ ಬೀಜಗಳು ಮಣ್ಣಲ್ಲಿ ಸೇರಿ ಸಸಿಯಾಗುತ್ತವೆ. ಮೊದಲ ಬಾರಿಗೆ ನಿಗಮ ಈ ರೀತಿಯ ಪ್ರಚಾರ ಸಾಮಗ್ರಿಗಳನ್ನು ರೂಪಿಸಿರುವುದು ವಿಶೇಷವಾಗಿದೆ ಎಂದರು.

    ಜಿಲ್ಲಾ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಆರ್ಯ ವೈಶ್ಯ ಸಮಾಜದ ಮುಖಂಡರಾದ ಡಿ. ಅರುಣಕುಮಾರ ಶೆಟ್ಟರ್, ಮಂಜುನಾಥ ಶೆಟ್ಟಿ, ಪ್ರಶಾಂತ ಗುತ್ತಲ, ಮಂಜುನಾಥ ಬೆಟದೂರ, ಬಸವರಾಜ, ಆನಂದ, ಪುಂಡಲಿಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts