More

    ಆರ್ಭಟಿಸಿದ ಅಕಾಲಿಕ ಮಳೆ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಗುಡುಗು ಸಿಡಿಲಿನಿಂದ ಕೂಡಿದ ಭರ್ಜರಿ ಮಳೆ ಸುರಿದು, ಜನಜೀವನದಲ್ಲಿ ದಿಢೀರ್ ವ್ಯತ್ಯಯಕ್ಕೆ ಕಾರಣವಾಯಿತು.

    ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮವಾಗಿ ಬಯಲುಸೀಮೆಯಲ್ಲೂ ವಾತಾವರಣ ಬದಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ತುಸು ಹೆಚ್ಚೇ ಎನ್ನುವಷ್ಟು ವ್ಯತ್ಯಾಸ ಕಂಡುಬಂದಿದೆ.

    ಗುರುವಾರ ಬೆಳಗ್ಗೆಯೂ ಎರಡು ತಾಸು ಮಳೆಯಾಗಿತ್ತು. ಶುಕ್ರವಾರ ಸಂಜೆ ಅಂದಾಜು ಮೂರು ತಾಸು ಬಿಡದೇ ಸುರಿಯಿತು. ಆಗಾಗ ಗುಡುಗು ಸಿಡಿಲಿನ ಅಬ್ಬರವೂ ಇದ್ದುದರಿಂದ ಪಕ್ಕಾ ಮುಂಗಾರು ಹಂಗಾಮದ ವಾತಾವರಣ ನಿರ್ವಣವಾಗಿತ್ತು.

    ನಗರದ ಕೆಲವು ಕಡೆ ಗಟಾರು, ನಾಲಾಗಳು ತುಂಬಿ ರಸ್ತೆಗೆ ನೀರು ನುಗ್ಗಿತ್ತು. ಅಲ್ಲಲ್ಲಿ ರಸ್ತೆ ಗುಂಡಿಗಳಲ್ಲಿ ನೀರು ನಿಂತು ತೊಂದರೆ ಉಂಟಾಯಿತು.

    ಮಹಾನಗರ ಪಾಲಿಕೆ ಈಜುಕೊಳ ಸಂಕೀರ್ಣ, ಆನಂದನಗರ ಬಳಿಯ ಗಣೇಶ ನಗರ ಮುಂತಾದೆಡೆ ಮನೆ, ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ರಸ್ತೆ, ಚರಂಡಿ ಮತ್ತಿತರ ಕೆಲಸಗಳು ಅರ್ಧಮರ್ಧ ಆಗಿರುವಲ್ಲಿ ಮಳೆ ನೀರು ಜಾಗ ಸಿಕ್ಕಲ್ಲಿ ಹರಿದಿದ್ದರಿಂದ ಜನರು ಅನಿರೀಕ್ಷಿತವಾಗಿ ತೀವ್ರ ತೊಂದರೆಗೀಡಾದರು.

    ರೈತರು ಕಂಗಾಲು: ಅಕಾಲಿಕ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ತೆನೆ ಕಟ್ಟಿ ಕೊಂಡಿರುವ ಹಿಂಗಾರಿನ ಬೆಳೆಗಳಾದ ಜೋಳ, ಗೋಧಿ, ಕಡಲೆ ಮುಂತಾದವುಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅನ್ನದಾತರು ಅಲವತ್ತುಕೊಳ್ಳುತ್ತಿದ್ದಾರೆ.

    ತೆನೆ ಒಡೆದ ಜೋಳಕ್ಕೆ ಕಾಡಿಗೆ ರೋಗ ಬರಲಿದೆ. ಕಡಲೆ ಫಸಲಿಗೆ ಕೀಟ ತಗುಲಲಿವೆ. ಮೂರ್ನಾಲ್ಕು ದಿನದಿಂದ ವಿಪರೀತ ಚಳಿ ಹಾಗೂ ಮೋಡ ಕವಿದ ವಾತಾವರಣ ಇತ್ತು. ಇದೀಗ ಮಳೆ ಸುರಿಯುತ್ತಿದೆ. ಒಟ್ಟಾರೆ ಹವಾಮಾನ ವೈಪರೀತ್ಯ ಉಂಟಾಗಿರುವುದರಿಂದ ಈಗಾಗಲೇ ಬಿಡಿಸಿ ಇಟ್ಟಿರುವ ಮೆಣಸಿನಕಾಯಿ, ಹತ್ತಿ ಮೊದಲಾದವು ಇಟ್ಟಲ್ಲೇ ಕೆಡುವ ಅಪಾಯ ಇದೆ ಎಂದು ರೈತರು ತಿಳಿಸಿದ್ದಾರೆ.

    ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗಲಿಲ್ಲ. ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಈಗ ಹಿಂಗಾರಿನಲ್ಲೂ ಮಳೆರಾಯ ಅಕಾಲಿಕವಾಗಿ ಸುರಿದು ಸಂಕಷ್ಟ ತಂದೊಡ್ಡುವ ಅಪಾಯ ಎದುರಾಗಿದೆ ಎಂದು ಕೋಳಿವಾಡದ ರೈತ ಸುಭಾಸ ಬೂದಿಹಾಳ ಆತಂಕ ತೋಡಿಕೊಂಡರು.

    ಧಾರವಾಡದಲ್ಲಿ ಧಾರಾಕಾರ…

    ಧಾರವಾಡ: ನಗರದಲ್ಲಿ ಶುಕ್ರವಾರ ಸಂಜೆ 2 ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿದ ಮಳೆ ಬಹಳಷ್ಟು ಅವಾಂತರ ಸೃಷ್ಟಿಸಿತು.

    ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಸಂಜೆ ಹೊತ್ತಿಗೆ ತಂಪು ಗಾಳಿಯೊಂದಿಗೆ ಅರ್ಧ ಗಂಟೆಕಾಲ ತುಂತುರು ಮಳೆ ಸುರಿಯಿತು. ಬಳಿಕ 2 ಗಂಟೆ ಸತತ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಕಂಗಾಲಾಗಿಸಿತು.

    ಟೋಲ್ ನಾಕಾ ಬಳಿಯ ನಾಲಾ ತುಂಬಿ ರಸ್ತೆ ಜಲಾವೃತವಾಗಿ ವಾಹನ ಸವಾರರು ಪರದಾಡಬೇಕಾಯಿತು. ಗಟಾರು, ನಾಲಾಗಳು ತುಂಬಿ ಹರಿದವು.

    ಜನ್ನತ ನಗರ ಶಿವಾನಂದ ಕಾಲನಿಯಲ್ಲಿ ಟೋಲ್​ನಾಕಾದ ನಾಲಾ ನೀರು ನುಗ್ಗಿದ ಪರಿಣಾಮ, ರಸ್ತೆ ಪಕ್ಕ ನಿಲ್ಲಿಸಿಟ್ಟ ಬೈಕ್​ಗಳು ಕೊಚ್ಚಿ ಕೊಂಡು ಹೋದವು. ಮಾಲೀಕರು ತಮ್ಮ ವಾಹನಗಳನ್ನು ಹುಡುಕಾಡಲು ಪರದಾಡುವಂತಾಗಿತ್ತು. ಸಿ.ಬಿ.ನಗರ, ಹೊಸಯಲ್ಲಾಪುರ ಹಿರೇಮಠ ಓಣಿ ಸೇರಿ ನಗರದ ಅನೇಕ ಬಡಾವಣೆಗಳ ರಸ್ತೆಗಳು ಜಲಾವೃತಗೊಂಡು ಜನರು ಮನೆಯಿಂದ ಹೊರ ಬರಲಾಗದಂಥ ಸ್ಥಿತಿ ನಿರ್ವಣವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts