More

    ಆರ್ಥಿಕ ಶಕ್ತಿಗಾಗಿ ಗ್ಯಾರಂಟಿ ಯೋಜನೆ -ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪ್ರತಿಪಾದನೆ

    ದಾವಣಗೆರೆ :ಸರ್ಕಾರ ರಾಜ್ಯದ ಜನತೆಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ಐದು ಗ್ಯಾರಂಟಿ ಯೋಜನೆ ರೂಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
    ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
    ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಆ.29ರಂದು ಮುಖ್ಯಮಂತ್ರಿ ಚಾಲನೆ ನೀಡಲಿದ್ದು ಜಿಲ್ಲೆಯಲ್ಲಿ 3.50 ಲಕ್ಷ ಫಲಾನುಭವಿಗಳಿದ್ದಾರೆ. ಯುವನಿಧಿ ಯೋಜನೆಯೂ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ಹೇಳಿದರು.
    ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗದಿಂದ ಜೂನ್-ಜುಲೈನಲ್ಲಿ ಒಟ್ಟು 53,20,749 ಮಹಿಳೆಯರು ಪ್ರಯಾಣಿಸಿದ್ದು, ರಾಜ್ಯ ಸಾರಿಗೆ ಸಂಸ್ಥೆಗೆ 13.16 ಕೋಟಿ ರೂ. ಲಾಭವಾಗಿದೆ ಎಂದರು.
    ಅನ್ನಭಾಗ್ಯ ಯೋಜನೆಯಡಿ ಜುಲೈನಲ್ಲಿ ಜಿಲ್ಲೆಯ 2,88,207 ಪಡಿತರ ಫಲಾನುಭವಿಗಳಿಗೆ 16.67 ಕೋಟಿ ರೂ. ಸಂದಾಯವಾಗಿದೆ. ಗೃಹಜ್ಯೋತಿಯಡಿ 3,48,260 ಗ್ರಾಹಕರು ನೋಂದಣಿಯಾಗಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
    ನಗರದಲ್ಲಿ ಜಲಸಿರಿ ಕಾಮಗಾರಿ ಪ್ರಗತಿಯಲ್ಲಿದ್ದು, ವರ್ಷಾಂತ್ಯದೊಳಗೆ ಕುಡಿಯುವ ನೀರೊದಗಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ 93 ನೇರಪಾವತಿ ಪೌರಕಾರ್ಮಿಕರ ಹುದ್ದೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
    ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್, ಹೋಂಗಾರ್ಡ್, ಅರಣ್ಯ ರಕ್ಷಕ ದಳ, ಅಬಕಾರಿ, ಅಗ್ನಿಶಾಮಕ ದಳ ಹಾಗೂ ವಿವಿಧ ಕಾಲೇಜುಗಳ 28 ತಂಡಗಳ ಪಥ ಸಂಚಲನ ಗಮನ ಸೆಳೆಯಿತು.
    ಇದೇ ಸಂದರ್ಭದಲ್ಲಿ ‘ಪ್ರಗತಿಪರ ಅಭಿವೃದ್ಧಿಗಾಗಿ ನುಡಿದಂತೆ ನಡೆದಿದ್ದೇವೆ’ ಎಂಬ ಕಿರು ಹೊತ್ತಗೆ ಬಿಡುಗಡೆಗೊಳಿಸಿದ ಸಚಿವರು, ಸ್ವಾತಂತ್ರ್ಯವನ್ನು ಹೋರಾಟಗಾರರನ್ನು ಸನ್ಮಾನಿಸಿದರು. ಸಾಂಸ್ಕೃತಿಕ ನೃತ್ಯರೂಪಕ ಪ್ರದರ್ಶನದಲ್ಲಿ ಸಿದ್ದಗಂಗಾ ವಿದ್ಯಾಸಂಸ್ಥೆ ಪ್ರಥಮ, ಸೇಂಟ್ ಮೇರಿಸ್ ಶಾಲೆ ದ್ವಿತೀಯ, ಜೈನ್ ವಿದ್ಯಾಲಯ ತೃತೀಯ ಬಹುಮಾನ ಪಡೆದವು.
    ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಪೂರ್ವವಲಯ ಐಜಿಪಿ ಡಾ.ಕೆ. ತ್ಯಾಗರಾಜನ್, ಎಸ್ಪಿ ಡಾ.ಕೆ.ಅರುಣ್, ಜಿ.ಪಂ. ಸಿಇಒ ಸುರೇಶ್ ಇಟ್ನಾಳ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಮೇಯರ್ ವಿನಾಯಕ ಪೈಲ್ವಾನ್ ಇತರರಿದ್ದರು.
    ಬೆಳೆ ವಿಮಾ ಯೋಜನೆಗೆ 500 ಕೋಟಿ ರೂ.
    ರಾಜ್ಯದಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ 500 ಕೋಟಿ ರೂ. ಒದಗಿಸಲಾಗಿದ್ದು 3.1 ಲಕ್ಷ ತೋಟಗಾರಿಕಾ ಬೆಳೆಗಾರರಿಗೆ ಅನುಕೂಲವಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.
    ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ ಹಾಗೂ ಇತರೆ ಯೋಜನೆಗಳ ಮೂಲಕ ರೈತರಿಗೆ ಸಹಾಯಧನ ನೀಡಲಾಗುತ್ತಿದೆ.
    2023-24ನೇ ಸಾಲಿಗೆ ತೋಟಗಾರಿಕೆ ಬೆಳೆಗಾರರನ್ನು ಪ್ರೋತ್ಸಾಹಿಸಲು ಅನೇಕ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ನರೇಗಾದಡಿ 2,62,371 ಮಾನವ ದಿನ ಸೃಜಿಸಲು ಯೋಜನೆ ರೂಪಿಸಲಾಗಿದೆ ಎಂದರು.
    ಬೆಳೆಗಳಿಗೆ ಅನುಕೂಲ ಕಲ್ಪಿಸಲು ಭದ್ರಾ ನಾಲೆಗಳಲ್ಲಿ ನೀರು ಹರಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಸರ್ಕಾರ ಪ್ರಾಮುಖ್ಯತೆ ನೀಡಿದ್ದು ರೈತರ ಕಲ್ಯಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
    ———————-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts